ಪಾಣಿಪತ್ (ಹರಿಯಾಣ): ಯಾವುದೋ ಗಂಭೀರ ಕಾರಣಕ್ಕೆ ಮದುವೆ ನಿಲ್ಲುವುದನ್ನು ನೋಡಿದ್ದೇವೆ. ಆದರೆ ಹರಿಯಾಣದ ಪಾಣಿಪತ್ನಲ್ಲಿ ಮದುವೆಯೊಂದು ಕೇವಲ ಲೆಹೆಂಗಾ ಮತ್ತು ಆಭರಣದ ವಿಚಾರದಲ್ಲಿ ಅರ್ಧಕ್ಕೆ ನಿಂತು ಹೋಗಿರುವ ಘಟನೆ ನಡೆದಿದೆ.
ಮದುವೆ ಸಮಾರಂಭದಲ್ಲಿ ವಧು-ವರರ ಕಡೆಯವರು ಪರಸ್ಪರ ಹೊಡೆದಾಡಿಕೊಂಡು ಕೊನೆಗೆ ಪೊಲೀಸರಿಗೆ ಕರೆ ಮಾಡಿ ವರನು ಬರಿಗೈಯಲ್ಲಿ ವಾಪಸಾಗಿದ್ದಾನೆ.
ಮದುವೆಗೆ ಮುಳುವಾದ ಲೆಹೆಂಗಾ-ನಕಲಿ ಆಭರಣ : ವರನ ಕಡೆಯವರು ತಂದಿದ್ದ ಲೆಹೆಂಗಾ ವಧುವಿನ ಕಡೆಯವರಿಗೆ ಇಷ್ಟವಿರಲಿಲ್ಲ. ಇದಕ್ಕೂ ಹೆಚ್ಚು ವರನು ತಂದಿದ್ದ ಆಭರಣ ನಕಲಿ ಎಂದು ವಧುವಿನ ಕಡೆಯವರು ಆರೋಪಿಸಿ ಗಲಾಟೆ ಆರಂಭಿಸಿದ್ದಾರೆ. ಗಲಾಟೆ ವಿಕೋಪಕ್ಕೆ ತಿರುಗಿ ಕೊನೆಗೆ ಪೊಲೀಸರಿಗೆ ಕರೆ ಹೋಗಿದೆ. ಮಾಹಿತಿ ಪಡೆದು ಸ್ಥಳಕ್ಕಾಗಮಿಸಿದ ಪೊಲೀಸರು ಸಮಾಧಾನಪಡಿಸಿದ್ದಾರೆ.
ವರನ ಸಹೋದರ ಹೇಳಿಕೆ : "ಮದುವೆಗೆ ಸುಮಾರು ಎರಡು ವರ್ಷ ಕಾಲಾವಕಾಶ ಕೇಳಿದ್ದೆವು. ಆದರೆ ಹುಡುಗಿಯ ಮನೆಯವರು ಪದೇ ಪದೇ ಒತ್ತಡ ಹೇರುತ್ತಲೇ ಇದ್ದರು. ಸಭಾಂಗಣ ಬುಕ್ಕಿಂಗ್ ಹೆಸರಿನಲ್ಲಿ 10 ಸಾವಿರ ರೂ., ಲೆಹೆಂಗಾ ಕೆಲವೊಮ್ಮೆ 20 ಸಾವಿರ ಮತ್ತು ಕೆಲವೊಮ್ಮೆ 30 ಸಾವಿರ ರೂಪಾಯಿದ್ದು ಬೇಕೆಂದು ಹೇಳಲಾಗಿದೆ. ಆಗಷ್ಟೇ ಹೊಸ ಮನೆ ಕಟ್ಟಿದ್ದೆವು. ಹೇಗೋ ಬಡ್ಡಿಗೆ ಹಣ ತೆಗೆದುಕೊಂಡು ಕೈಲಾದಷ್ಟು ತಂದಿದ್ದೇವೆ. ಮೊದಲು ವಧುವಿನ ಅಜ್ಜಿ ಐದು ಚಿನ್ನಾಭರಣಗಳನ್ನು ಮಾಡಿಸುವಂತೆ ಹೇಳಿದರು. ದೆಹಲಿ ಚಾಂದಿನಿ ಚೌಕ್‌ನಿಂದ ಲೆಹೆಂಗಾವನ್ನು ತೆಗೆದುಕೊಂಡು ಬನ್ನಿ. ನೀವು ತಂದಿರುವ ಲೆಹೆಂಗಾ ಹಳೆಯದಾಗಿದೆ ಎಂದು ಹೇಳಿ ಮದುವೆ ವಿಧಿ ವಿಧಾನಗಳನ್ನು ಮಾಡಲು ನಿರಾಕರಿಸಿದ್ದಾರೆ. 35 ಸಾವಿರ ರೂಪಾಯಿ ಕೊಟ್ಟು ಕಾರನ್ನು ಬಾಡಿಗೆಗೆ ಪಡೆದಿದ್ದೆವು" ಎಂದು ತಿಳಿಸಿದ್ದಾರೆ.
ಕೂಲಿ ಕೆಲಸ ಮಾಡಿ ಜೀವನ : ವಧುವಿನ ತಾಯಿ "ತಾವು ಕೂಲಿ ಕೆಲಸ ಮಾಡುತ್ತಿರುವುದಾಗಿ" ತಿಳಿಸಿದ್ದಾರೆ. "ಹಿರಿಯ ಮಗಳ ಮದುವೆಯ ಜೊತೆಗೆ ಕಿರಿಯ ಮಗಳಿಗೂ ಮದುವೆ ಮಾಡಲು ಯೋಚಿಸಿದೆ. ಆದರೆ, ಮದುವೆ ನಿಶ್ಚಯವಾದ ತಕ್ಷಣ ಹುಡುಗನ ಮನೆಯವರು ಮದುವೆಗೆ ಒತ್ತಡ ಹೇರಲು ಆರಂಭಿಸಿದ್ದರು. ಫೆಬ್ರವರಿ 23 ರಂದು ಮದುವೆ ನಿಶ್ಚಯಿಸಿದೆವು. ಅಮೃತಸರದಿಂದ ಬರಾತ್(ಮದುವೆ ದಿಬ್ಬಣ) ಬಂದಿದ್ದು, ಹುಡುಗನ ಮನೆಯವರು ವಧುವಿಗೆ ಹಳೆಯ ಲೆಹೆಂಗಾ ಮತ್ತು ನಕಲಿ ಆಭರಣಗಳನ್ನು ತಂದಿದ್ದರು. ಹಾರವನ್ನೂ ತಂದಿದ್ದಿರಲಿಲ್ಲ. ಕಾರಣ ಕೇಳಿದಾಗ ಹಾರ ಹಾಕುವ ಸಂಪ್ರದಾಯ ನಮಗಿಲ್ಲ ಎಂದಿದ್ದಾರೆ".
"ಲೆಹೆಂಗಾ ಪಡೆಯುವ ಹೆಸರಿನಲ್ಲಿ ದೆಹಲಿಯ ಚಾಂದಿನಿ ಚೌಕ್ನಲ್ಲಿ ಮುಂಗಡವಾಗಿ 13 ಸಾವಿರ ರೂಪಾಯಿ ಪಡೆದು ನಂತರ ನಿರಾಕರಿಸಿದ್ದರು. ಹೋಟೆಲ್‌ನಲ್ಲಿ ಕೊಠಡಿ ಕಾಯ್ದಿರಿಸಿದ ನಂತರವೂ ಅವರು ನಿರಾಕರಿಸಿದರು. ಅದಕ್ಕಿಂತ ಹೆಚ್ಚಾಗಿ ಒಂದು ಲಕ್ಷ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ" ಎಂದು ಆರೋಪಿಸಿ ವಧುವಿನ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. "ನಾವು ಯಾವುದೇ ಹಣ ಕೇಳಿಲ್ಲ. ಮದುವೆಗೆ ಮುಂಚೆಯೇ ಅವರ ಸ್ಥಿತಿ ಹೀಗಿರುವಾಗ ಮದುವೆಯ ನಂತರ ಮಗಳು ಹೇಗೆ ಚೆನ್ನಾಗಿರುತ್ತಾಳೆ" ಎಂದು ತಾಯಿ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಮದುವೆ ಮೆರವಣಿಗೆಗೆ ಜೋಶ್ ತುಂಬಲು ಗಾಳಿಯಲ್ಲಿ ಫೈರಿಂಗ್ : ಗುಂಡು ತಗುಲಿ ಇಬ್ಬರಿಗೆ ಗಾಯ