ಮುಂಬೈ: ಬುಧವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಏರಿಕೆಯೊಂದಿಗೆ ಕೊನೆಗೊಂಡಿವೆ. ಇಂದಿನ ವಹಿವಾಟಿನಲ್ಲಿ ಬಿಎಸ್ಇ ಸೆನ್ಸೆಕ್ಸ್ 567 ಅಂಕಗಳ ಏರಿಕೆಯೊಂದಿಗೆ 76,405 ರಲ್ಲಿ ಕೊನೆಗೊಂಡಿತು. ಸೆನ್ಸೆಕ್ಸ್ ಕನಿಷ್ಠ 76,114 ಮತ್ತು ಗರಿಷ್ಠ 75,817 ಮಧ್ಯದಲ್ಲಿ ವಹಿವಾಟು ನಡೆಸಿತು.
ಎನ್ಎಸ್ಇ ನಿಫ್ಟಿ 50 ಸೂಚ್ಯಂಕವು 131 ಪಾಯಿಂಟ್ ಏರಿಕೆಯೊಂದಿಗೆ 23,155 ರಲ್ಲಿ ಕೊನೆಗೊಂಡಿತು. ದಿನದ ವಹಿವಾಟಿನಲ್ಲಿ ಸತತ ಎರಡನೇ ದಿನವೂ ನಿಫ್ಟಿ 23,000 ಕ್ಕಿಂತ ಕೆಳಗಿಳಿದಿತ್ತು.
ಚೇತರಿಸಿಕೊಂಡ ಹೆಚ್ಡಿಎಫ್ಸಿ ಬ್ಯಾಂಕ್: ಎಚ್ಡಿಎಫ್ಸಿ ಬ್ಯಾಂಕ್ನ ನಿವ್ವಳ ಲಾಭ ಶೇ 2ರಷ್ಟು ಏರಿಕೆಯಾಗಿ 16,735.5 ಕೋಟಿ ರೂ.ಗೆ ತಲುಪಿರುವ ವರದಿಗಳು ಬಂದ ನಂತರ ಮಧ್ಯಾಹ್ನ ಮಾರುಕಟ್ಟೆ ಚೇತರಿಸಿಕೊಂಡಿತು. ಎಚ್ಡಿಎಫ್ಸಿ ಬ್ಯಾಂಕ್ ಷೇರು ಶೇಕಡಾ 1.7 ರಷ್ಟು ಏರಿಕೆಯಾಗಿ 1,669 ರೂ.ಗೆ ಕೊನೆಗೊಂಡಿತು.
ಈ ಷೇರುಗಳಲ್ಲಿ ಇಂದು ಹಸಿರು ಮಾರ್ಕ್: ಸೆನ್ಸೆಕ್ಸ್ ನ ಇತರ 30 ಷೇರುಗಳ ಪೈಕಿ ಇನ್ಫೋಸಿಸ್ ಮತ್ತು ಟಿಸಿಎಸ್ ತಲಾ 3 ಪ್ರತಿಶತದಷ್ಟು ಏರಿಕೆ ಕಂಡವು. ಟೆಕ್ ಮಹೀಂದ್ರಾ, ಸನ್ ಫಾರ್ಮಾ, ಬಜಾಜ್ ಫಿನ್ ಸರ್ವ್, ಎಚ್ ಡಿಎಫ್ ಸಿ ಟೆಕ್ನಾಲಜೀಸ್, ಬಜಾಜ್ ಫೈನಾನ್ಸ್, ಮಾರುತಿ, ಕೋಟಕ್ ಬ್ಯಾಂಕ್, ಇಂಡಸ್ ಇಂಡ್ ಬ್ಯಾಂಕ್ ಮತ್ತು ಜೊಮಾಟೊ ತಲಾ 1 ರಿಂದ 2 ರಷ್ಟು ಏರಿಕೆಯಾಗಿವೆ.
ಮತ್ತೆ ಕುಸಿದ ಟಾಟಾ ಮೋಟರ್ಸ್: ಮತ್ತೊಂದೆಡೆ, ಟಾಟಾ ಮೋಟರ್ಸ್ ಶೇಕಡಾ 2 ಕ್ಕಿಂತ ಹೆಚ್ಚು ಕುಸಿದಿದೆ. ಪವರ್ ಗ್ರಿಡ್, ಆಕ್ಸಿಸ್ ಬ್ಯಾಂಕ್ ಮತ್ತು ಎಸ್ಬಿಐ ಇವು ಗಮನಾರ್ಹ ನಷ್ಟ ಅನುಭವಿಸಿದ ಇತರ ಪ್ರಮುಖ ಷೇರುಗಳಾಗಿವೆ.
ಮೇಲ್ನೋಟಕ್ಕೆ ಏರಿಕೆ ಕಂಡರೂ ಮಿಡ್, ಸ್ಮಾಲ್ ಕ್ಯಾಪ್ ಸ್ಟಾಕ್ಗಲ್ಲಿ ಭಾರಿ ಕುಸಿತ: ವಿಶಾಲ ಮಾರುಕಟ್ಟೆಯಲ್ಲಿ, ಬಿಎಸ್ಇ ಮಿಡ್ ಕ್ಯಾಪ್ ಸೂಚ್ಯಂಕವು ಶೇಕಡಾ 1.2 ರಷ್ಟು ಮತ್ತು ಸ್ಮಾಲ್ ಕ್ಯಾಪ್ ಶೇಕಡಾ 1.6 ರಷ್ಟು ಕುಸಿದಿವೆ. ಎರಡೂ ಸೂಚ್ಯಂಕಗಳು ದಿನದ ಉತ್ತರಾರ್ಧದಲ್ಲಿ ಒಂದಿಷ್ಟು ನಷ್ಟವನ್ನು ಕಡಿಮೆ ಮಾಡಿಕೊಂಡವು. ವಲಯ ಸೂಚ್ಯಂಕಗಳಲ್ಲಿ- ಬಿಎಸ್ಇ ರಿಯಾಲ್ಟಿ ಸೂಚ್ಯಂಕವು 10 ತಿಂಗಳ ಕನಿಷ್ಠಕ್ಕೆ ಕುಸಿದಿದೆ. ಕ್ಯಾಪಿಟಲ್ ಗೂಡ್ಸ್ ಸೂಚ್ಯಂಕ ಸುಮಾರು 2 ಪ್ರತಿಶತದಷ್ಟು ಕುಸಿದಿದೆ. ಐಟಿ ಸೂಚ್ಯಂಕವು ಬುಧವಾರ ಶೇಕಡಾ 2 ಕ್ಕಿಂತ ಹೆಚ್ಚಾಗಿದೆ.
ತುಸು ಬಲಗೊಂಡ ರೂಪಾಯಿ: ಡಾಲರ್ ಎದುರು ಭಾರತೀಯ ರೂಪಾಯಿ ಬುಧವಾರ ಬಲಗೊಂಡಿದೆ. ಇಂದಿನ ವಹಿವಾಟಿನಲ್ಲಿ ಯುಎಸ್ ಡಾಲರ್ ವಿರುದ್ಧ ರೂಪಾಯಿ 86.3225 ರಲ್ಲಿ ಕೊನೆಗೊಂಡಿತು. ಇದು ದಿನದಲ್ಲಿ ಸುಮಾರು ಶೇ 0.3 ರಷ್ಟು ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ವ್ಯಾಪಾರ ಸುಂಕ ವಿಧಿಸುವ ವದಂತಿಗಳ ಮಧ್ಯೆ ಡಾಲರ್ ಸೂಚ್ಯಂಕವು ಶೇಕಡಾ 0.1 ರಷ್ಟು ಕುಸಿದು 107.9 ಕ್ಕೆ ತಲುಪಿದೆ.
ಇದನ್ನೂ ಓದಿ: ನವೆಂಬರ್ 2024ರಲ್ಲಿ EPF ಗೆ 14.63 ಲಕ್ಷ ನೌಕರರ ಸೇರ್ಪಡೆ: 18 - 25 ವಯೋಮಾನದವರೇ ಅಧಿಕ - EPFO