ಆಗ್ರಾ (ಉತ್ತರ ಪ್ರದೇಶ) : ಜನವರಿ 26, 27 ಮತ್ತು 28 ರಂದು ಶಹಜಹಾನ್‌ನ ಉರುಸ್ ನಡೆಯಲಿರುವುದರಿಂದ ಈ ವೇಳೆ ಪ್ರವಾಸಿಗರಿಗೆ ತಾಜ್ ಮಹಲ್‌ಗೆ ಉಚಿತ ಪ್ರವೇಶವಿರುತ್ತದೆ. ಉಚಿತ ಅಷ್ಟೇ ಅಲ್ಲ, ಪ್ರವಾಸಿಗರು ಚಕ್ರವರ್ತಿ ಷಹಜಹಾನ್ ಮತ್ತು ಬೇಗಂ ಮುಮ್ತಾಜ್ ಅವರ ನಿಜವಾದ ಸಮಾಧಿಗಳನ್ನು ವೀಕ್ಷಿಸಬಹುದಾಗಿದೆ.
ಮೂರನೇ ದಿನ ಎಲ್ಲರಿಗೂ ಮುಕ್ತ ಪ್ರವೇಶ: ಷಹಜಹಾನ್‌ರ 3 - ದಿನದ 370ನೇ ಉರುಸ್ ಜನವರಿ 26 ರಿಂದ ಪ್ರಾರಂಭವಾಗುತ್ತದೆ. ತಾಜ್ ಮಹಲ್‌ನ ನೆಲಮಾಳಿಗೆಯಲ್ಲಿರುವ ಮೊಘಲ್ ಚಕ್ರವರ್ತಿ ಷಹಜಹಾನ್ ಮತ್ತು ಅವರ ಪತ್ನಿ ಮುಮ್ತಾಜ್ ಅವರ ನಿಜವಾದ ಸಮಾಧಿಯಲ್ಲಿ ಉರುಸ್ ಆಚರಣೆಗಳು ನಡೆಯುತ್ತವೆ. ಹೂವು ಮತ್ತು ಹಿಂದೂಸ್ತಾನಿ ಬಣ್ಣದ ಬೆಡ್ಶೀಟ್ಗಳನ್ನ ಸಹ ಅಲ್ಲಿ ಹಾಕಲಾಗುತ್ತದೆ. ಉರುಸ್ನ ಮೊದಲ ಮತ್ತು ಎರಡನೇ ದಿನದಂದು, ಮಧ್ಯಾಹ್ನದಿಂದ ಯಾತ್ರಾರ್ಥಿಗಳು ಮತ್ತು ಪ್ರವಾಸಿಗರಿಗೆ ಉಚಿತ ಪ್ರವೇಶವಿದ್ದರೆ, ಮೂರನೇ ದಿನ ಸೂರ್ಯೋದಯದಿಂದ ಸೂರ್ಯಾಸ್ತದವರೆಗೆ ತಾಜ್ ಮಹಲ್‌ಗೆ ಎಲ್ಲರೂ ಮುಕ್ತವಾಗಿ ಪ್ರವೇಶಿಸಬಹುದು.
ತಾಜ್ ಮಹಲ್‌ನಲ್ಲಿ ಉರುಸ್ ಆಚರಿಸುವುದನ್ನು ಹಿಂದೂ ಮುಖಂಡರು ವಿರೋಧಿಸುತ್ತಿದ್ದಾರೆ. ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ), ಚಕ್ರವರ್ತಿ ಶಹಜಹಾನ್ ಉರುಸ್ ಆಚರಣೆ ಸಮಿತಿ, ತಾಜ್ ಸೆಕ್ಯುರಿಟಿ ಪೊಲೀಸ್ ಮತ್ತು ಸಿಐಎಸ್‌ಎಫ್‌ನ ಅಧಿಕಾರಿಗಳು ಸಭೆ ನಡೆಸಿ ಅಲ್ಲಿ ಭದ್ರತೆ ಕೈಗೊಳ್ಳಲು ನಿರ್ಧರಿಸಿದ್ದಾರೆ.
370 ನೇ ಉರುಸ್: ಮೊಘಲ್ ಚಕ್ರವರ್ತಿ ಷಹಜಹಾನ್‌ನ ಉರುಸ್ ಅನ್ನು ಪ್ರತಿ ವರ್ಷ ಹಿಜ್ರಿ ಕ್ಯಾಲೆಂಡರ್‌ನ ರಜಬ್ ತಿಂಗಳ 25, 26 ಮತ್ತು 27 ರಂದು ಆಚರಿಸಲಾಗುತ್ತದೆ. ಈ ವರ್ಷ ಉರುಸ್ ಜನವರಿ 26, 27 ಮತ್ತು 28 ರಂದು ಬಂದಿದೆ. ಈ ಅವಧಿಯಲ್ಲಿ ಚಕ್ರವರ್ತಿ ಷಹಜಹಾನ್ ಅವರ 370 ನೇ ಉರುಸ್ ಅನ್ನು ಆಚರಿಸಲಾಗುತ್ತದೆ. ಜನವರಿ 28ರಂದು ಶಹಜಹಾನ್‌ನ ಉರುಸ್ನ ಕೊನೆಯ ದಿನದಂದು ಕುರಾನ್ ಖ್ವಾನಿ, ಫಾತಿಹಾ ಮತ್ತು ಚಾದರ್ ಪೋಷಿಯೊಂದಿಗೆ ಕುಲ್ ಸಿಡಿಸಲಾಗುತ್ತದೆ.
ಮೊಘಲ್ ಚಕ್ರವರ್ತಿ ಷಹಜಹಾನ್‌ನ ಆಚರಣಾ ಸಮಿತಿ ಮತ್ತು ಇತರ ಸಮಿತಿಗಳು ಮತ್ತು ಎಎಸ್‌ಐ ನೌಕರರು ಮೊದಲ ದಿನದ ಮಧ್ಯಾಹ್ನ ತಾಜ್ ಮಹಲ್‌ನ ಮುಖ್ಯ ಸಮಾಧಿಯ ನೆಲಮಾಳಿಗೆಯಲ್ಲಿ ಉರುಸ್ನ ಎಲ್ಲ ವಿಧಿವಿಧಾನಗಳನ್ನು ನೆರವೇರಿಸಲಿದ್ದಾರೆ. ಚಕ್ರವರ್ತಿ ಶಹಜಹಾನ್ ಉರುಸ್ ಆಚರಣಾ ಸಮಿತಿ ಅಧ್ಯಕ್ಷ ಇಬ್ರಾಹಿಂ ಜೈದಿ ಮಾತನಾಡಿ, ಉರುಸ್ ಕುರಿತು ಎಎಸ್‌ಐ, ಸಿಐಎಸ್‌ಎಫ್ ಜತೆ ಸಭೆ ನಡೆಸಲಾಗಿದೆ. ಇಂದು ಸಂಜೆಯೂ ಸಭೆ ಇದೆ. ಉರುಸ್ ಸಮಯದಲ್ಲಿ ಭದ್ರತಾ ವ್ಯವಸ್ಥೆಗಳು ಉತ್ತಮವಾಗಿರಬೇಕು. ಉರುಸ್ ಸಮಯದಲ್ಲಿ ಯಾವುದೇ ಅವಘಡಗಳು ಸಂಭವಿಸದಂತೆ ಖಚಿತಪಡಿಸಿಕೊಳ್ಳಲು ಉತ್ತಮ ಭದ್ರತಾ ವ್ಯವಸ್ಥೆ ಇರುತ್ತದೆ ಎಂದು ಹೇಳಿದರು.
ಉರುಸ್ಗಾಗಿ ಭಾರಿ ಬಿಗಿ ಭದ್ರತೆ: 'ಷಹಜಹಾನ್ ಅವರ ಮೂರು ದಿನಗಳ ಉರುಸ್ಗಾಗಿ ತಾಜ್ ಮಹಲ್‌ನಲ್ಲಿ ಉತ್ತಮ ಭದ್ರತಾ ವ್ಯವಸ್ಥೆಗಳಿವೆ' ಎಂದು ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್‌ಎಫ್) ಹಿರಿಯ ಕಮಾಂಡೆಂಟ್ ವಿಕೆ ದುಬೆ ಹೇಳಿದ್ದಾರೆ.
ಡ್ಯೂಟಿ ಪಾಯಿಂಟ್‌ಗಳನ್ನು ನಿಗದಿಪಡಿಸಲಾಗಿದೆ. ಪ್ರತಿ ಹಂತದಲ್ಲೂ ಹೆಚ್ಚುವರಿ ಸೈನಿಕರನ್ನು ನಿಯೋಜಿಸಲಾಗುವುದು. ಇದರೊಂದಿಗೆ ತಾಜ್ ಮಹಲ್ ಕಾಂಪ್ಲೆಕ್ಸ್‌ಗೆ ಬರುವ ಪ್ರವಾಸಿಗರು ಮತ್ತು ಯಾತ್ರಾರ್ಥಿಗಳ ಮೇಲೂ ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗುವುದು ಎಂದಿದ್ದಾರೆ.
ಉರುಸ್ ಸಮಯದಲ್ಲಿ ಈ ವಸ್ತುಗಳಿಗೆ ನಿಷೇಧ : ಸಿಗರೇಟ್, ಬೀಡಿ, ಗುಟ್ಕಾ, ತಂಬಾಕು, ಪಾನ್ ಮಸಾಲಾ, ಯಾವುದೇ ರೀತಿಯ ಧ್ವಜ, ಬ್ಯಾನರ್, ಪೋಸ್ಟರ್, ಬ್ಯಾಂಡ್, ಸ್ಕ್ರೂಡ್ರೈವರ್, ಲೈಟರ್, ಚಾಕು ಇತ್ಯಾದಿ ವಸ್ತುಗಳಿಗೆ ನಿಷೇಧವಿದೆ.
ಇದನ್ನೂ ಓದಿ : ಕಾಶ್ಮೀರಕ್ಕೆ ನೇರ ರೈಲು ಸೇವೆ: ಫೆಬ್ರವರಿಯಲ್ಲಿ ಮೊದಲ ರೈಲು ಉದ್ಘಾಟಿಸಲಿರುವ ಪ್ರಧಾನಿ ಮೋದಿ - TRAIN TO KASHMIR