ನವದೆಹಲಿ: ರಾಷ್ಟ್ರೀಯ ವೈದ್ಯರ ದಿನದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಶುಭಾಶಯ ಕೋರಿದ್ದು, ದೇಶದಲ್ಲಿ ಆರೋಗ್ಯ ಮೂಲಸೌಕರ್ಯ ಸುಧಾರಣೆಗೆ ನಮ್ಮ ಸರ್ಕಾರ ಬದ್ಧವಾಗಿದೆ. ವೈದ್ಯರಿಗೆ ಸಿಗಬೇಕಾದ ಗೌರವ ಪಡೆಯುವುದನ್ನು ಖಾತ್ರಿ ಪಡಿಸುತ್ತೇವೆ ಎಂದಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯೂ ಆಗಿ ಕಾರ್ಯ ನಿರ್ಹಿಸಿದ್ದ ಖ್ಯಾತ ವೈದ್ಯರಾಗಿದ್ದ ಬಿಧಾನ್ ಚಂದ್ರ ರಾಯ್ ಅವರ ಸ್ಮರಣಾರ್ಥವಾಗಿ ಜುಲೈ 1 ಅನ್ನು ರಾಷ್ಟ್ರೀಯ ವೈದ್ಯರ ದಿನವಾಗಿ ಆಚರಣೆ ಮಾಡಲಾಗುತ್ತಿದೆ.
ಈ ಹಿನ್ನೆಲೆ ದೇಶದ ವೈದ್ಯ ಸಮೂಹಕ್ಕೆ ಶುಭಾಶಯ ಕೋರಿ ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ನಮ್ಮ ಆರೋಗ್ಯ ರಕ್ಷಣೆಗಾಗಿ ಸಮರ್ಪಣಾ ಭಾವದಿಂದ ಕಾರ್ಯ ನಿರ್ವಹಿಸುವ ಆರೋಗ್ಯ ಸೇವೆಯ ಹೀರೋಗಳನ್ನು ಗೌರವಿಸುವ ದಿನ ಇದು. ತಮ್ಮ ಅದ್ಭುತ ಕೌಶಲ್ಯದಿಂದಾಗಿ ಅವರು ಸಂಕೀರ್ಣ ಸವಾಲನ್ನು ನಿರ್ವಹಿಸಬಲ್ಲವರಾಗಿದ್ದಾರೆ. ಭಾರತದಲ್ಲಿ ಆರೋಗ್ಯ ಮೂಲಸೌಕರ್ಯವನ್ನು ಸುಧಾರಿಸಲು ಮತ್ತು ವೈದ್ಯರಿಗೆ ಅರ್ಹವಾದ ಗೌರವವನ್ನು ಖಚಿತಪಡಿಸಿಕೊಳ್ಳಲು ನಮ್ಮ ಸರ್ಕಾರವು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಜೆಪಿ ನಡ್ಡಾ ಕೂಡ ದೇಶದ ವೈದ್ಯರಿಗೆ ಶುಭ ಕೋರಿದ್ದು, ವೈದ್ಯರು ತಮ್ಮ ಪರಿಣತಿ ಮತ್ತು ಮಾನವೀಯ ಗುಣದಿಂದ ಜನರನ್ನು ಪ್ರೇರೇಪಿಸುತ್ತಾರೆ ಎಂದು ತಿಳಿಸಿದ್ದಾರೆ.