ಬೆಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ ಹಿನ್ನೆಲೆಯಲ್ಲಿ ಅಬಕಾರಿ ಇಲಾಖೆಯ ಬೊಕ್ಕಸಕ್ಕೆ ಒಂದೇ ದಿನ ನೂರಾರು ಕೋಟಿ ರೂಪಾಯಿ ಆದಾಯ ಹರಿದು ಬಂದಿದೆ. ಡಿಸೆಂಬರ್ 31ರ ಬೆಳಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಅರ್ಧ ದಿನದಲ್ಲಿ 308 ಕೋಟಿ ರೂಪಾಯಿ ಮದ್ಯ ಮಾರಾಟವಾಗಿದೆ ಎಂದು ಕರ್ನಾಟಕ ರಾಜ್ಯ ಪಾನೀಯ ನಿಗಮ (ಕೆಎಸ್‌ಬಿಸಿಎಲ್) ಮೂಲಗಳಿಂದ ಮಾಹಿತಿ ಲಭ್ಯವಾಗಿದೆ.
ಈ ಬಾರಿ ಹೊಸ ವರ್ಷಾಚರಣೆ ಸಂದರ್ಭದಲ್ಲಿ 250 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗುವ ಗುರಿಯನ್ನ ಅಬಕಾರಿ ಇಲಾಖೆ ಹೊಂದಿತ್ತು. ಆದರೆ ಅದಕ್ಕಿಂತಲೂ ಅಧಿಕ ಪ್ರಮಾಣದ ಮದ್ಯ ಮಾರಾಟವಾಗಿದೆ.
2023ರ ಡಿಸೆಂಬರ್ 31ರಂದು 193 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿತ್ತು. ಈ ಬಾರಿ 2024 ಡಿಸೆಂಬರ್ 31ರಂದು 7,305 ಮದ್ಯ ಮಾರಾಟಗಾರರು ಕೆಎಸ್‌ಬಿಸಿಎಲ್‌ನಿಂದ ಮದ್ಯ ಖರೀದಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಐಎಂಐಎಲ್ ಮಾರಾಟದಿಂದ 250.25 ಕೋಟಿ, ಲಕ್ ಬಿಯರ್ ಮಾರಾಟದಿಂದ 57.75 ಕೋಟಿ ರೂ. ಸೇರಿದಂತೆ ಒಟ್ಟು 308 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.
ನಮ್ಮ ಮೆಟ್ರೋಗೆ 2 ಕೋಟಿ ರೂ. ಆದಾಯ: ವರ್ಷಾಚರಣೆಯ ಸಂದರ್ಭದಲ್ಲಿ ನಮ್ಮ ಮೆಟ್ರೋ (ಬಿಎಂಆರ್ಸಿಎಲ್) ಖಜಾನೆಗೆ ಒಂದೇ ದಿನ ಬರೋಬ್ಬರಿ 2.07 ಕೋಟಿ ರೂ. ಆದಾಯ ಸಂದಾಯವಾಗಿದೆ. ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಂಗಳವಾರ ಬೆಳಗ್ಗೆ 5ರಿಂದ ಮಧ್ಯರಾತ್ರಿ 2.45ರ ವರೆಗೆ ಮೆಟ್ರೋ ರೈಲುಗಳು ಸಂಚಾರವನ್ನು ವಿಸ್ತರಿಸಲಾಗಿತ್ತು.
ಒಂದೇ ದಿನ ನೇರಳೆ ಮಾರ್ಗದಲ್ಲಿ 4 ಲಕ್ಷ, ಹಸಿರು ಮಾರ್ಗದಲ್ಲಿ 2.90 ಲಕ್ಷ, ಹಾಗೂ ನೇರಳೆ & ಹಸಿರು ಮಾರ್ಗದಿಂದ ಒಟ್ಟು 8.59 ಲಕ್ಷ ಟೋಕನ್ ಹಾಗೂ 5,423 ಪೇಪರ್ ಟಿಕೆಟ್ ಮಾರಾಟವಾಗಿದ್ದು, ಒಟ್ಟು 2 ಕೋಟಿ 7 ಲಕ್ಷದ 52 ಸಾವಿರ ರೂ. ಆದಾಯ ಹರಿದುಬಂದಿದೆ ಎಂದು ಬಿಎಂಆರ್ಸಿಎಲ್ ಮೂಲಗಳು ಮಾಹಿತಿ ನೀಡಿವೆ.
ಇದನ್ನೂ ಓದಿ: ಹಿಂದಿನ ವರ್ಷಗಳ ಅನುಭವ, ಪಾಠಗಳಿಂದ ಕಲಿತು ಈ ವರ್ಷ ಕಾರ್ಯಕ್ಷಮತೆ ಹೆಚ್ಚಿಸಿಕೊಳ್ಳೋಣ: ಸಿಎಂ