ನವದೆಹಲಿ: ದೇಶದ ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳ ಆಸ್ತಿ ವಿವರ ಮತ್ತು ಯಾರು ಶ್ರೀಮಂತರು ಎಂಬ ಮಾಹಿತಿ ಹೊರಬಿದ್ದಿದೆ. ದಕ್ಷಿಣ ಭಾರತದ ರಾಜ್ಯವೊಂದರ ಸಿಎಂ ದೇಶದಲ್ಲೇ ಅತಿ ಸಿರಿವಂತ ಮುಖ್ಯಮಂತ್ರಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.
ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಹಾಗೂ ನ್ಯಾಷನಲ್ ಎಲೆಕ್ಷನ್ ವಾಚ್ ಸಂಸ್ಥೆಗಳು ಶ್ರೀಮಂತ ಸಿಎಂಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅದರಲ್ಲಿ ದಕ್ಷಿಣ ಭಾರತದ ಇಬ್ಬರು ಸಿಎಂಗಳು ಮೊದಲ ಮೂರು ಸ್ಥಾನ ಪಡೆದುಕೊಂಡಿರುವುದು ವಿಶೇಷ.
ಚಂದ್ರಬಾಬು ನಾಯ್ಡು ನಂಬರ್ 1: ವರದಿಯ ಪ್ರಕಾರ, ಆಂಧ್ರಪ್ರದೇಶದ ಸಿಎಂ ಚಂದ್ರಬಾಬು ನಾಯ್ಡು ದೇಶದಲ್ಲಿಯೇ ಅತಿ ಸಿರಿವಂತ ಸಿಎಂ ಆಗಿದ್ದಾರೆ. ಅವರು 931 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಬಳಿಕ ಅರುಣಾಚಲ ಪ್ರದೇಶದ ಪೇಮಾ ಖಂಡು ಅವರು 332 ಕೋಟಿ ರೂಪಾಯಿ ಆಸ್ತಿಯೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಕರ್ನಾಟಕದ ಸಿಎಂ ಸಿದ್ದರಾಮಯ್ಯ 51 ಕೋಟಿ ಆಸ್ತಿಯೊಂದಿಗೆ 3ನೇ ಸ್ಥಾನ ಹಾಗೂ ನಾಗಾಲ್ಯಾಂಡ್ ಸಿಎಂ ನಿಫಿಯು ರಿಯೊ ಅವರು 46 ಕೋಟಿ, ಮಧ್ಯಪ್ರದೇಶದ ಸಿಎಂ ಮೋಹನ್ ಯಾದವ್ ಅವರ 42 ಕೋಟಿಯೊಂದಿಗೆ ಕ್ರಮವಾಗಿ 4 ಮತ್ತು 5ನೇ ಸ್ಥಾನದಲ್ಲಿದ್ದಾರೆ.
ವರದಿ ಪ್ರಕಾರ ಸಿದ್ದರಾಮಯ್ಯ ಆಸ್ತಿ ಎಷ್ಟಿದೆ?: ಎಡಿಆರ್ ಕರ್ನಾಟಕದ ಸಿಎಂ ಸಿದ್ದರಾಮಯ್ಯ ಅವರ ಚರ ಮತ್ತು ಸ್ಥಿರಾಸ್ತಿ ಬಗ್ಗೆ ಮಾಹಿತಿ ನೀಡಿದೆ. ಸಿದ್ದರಾಮಯ್ಯ 51 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ. ಹೆಚ್ಚು ಆಸ್ತಿ ಹೊಂದಿರುವ ಸಿಎಂಗಳಲ್ಲಿ ಇವರು ಮೂರನೇ ಸಿರಿವಂತರಾಗಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ.
2023 ರ ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರು 50.77 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾಗಿ ಘೋಷಿಸಿಕೊಂಡಿದ್ದರು. ಇದರಲ್ಲಿ 21.35 ಕೋಟಿ ರೂಪಾಯಿ ಚರಾಸ್ತಿ, 29.42 ಕೋಟಿ ರೂಪಾಯಿ ಸ್ಥಿರಾಸ್ತಿಯಾಗಿತ್ತು.
ಮಮತಾ ಬ್ಯಾನರ್ಜಿ ಅತ್ಯಂತ ಬಡ ಸಿಎಂ - ಕಡಿಮೆ ಆಸ್ತಿ ಹೊಂದಿರುವ ಸಿಎಂಗಳು: ಪಶ್ಚಿಮ ಬಂಗಾಳದಲ್ಲಿ ಮೂರನೇ ಬಾರಿಗೆ ಸಿಎಂ ಆಗಿ ಅಧಿಕಾರ ನಡೆಸುತ್ತಿರುವ ಮಮತಾ ಬ್ಯಾನರ್ಜಿ ಅವರು ದೇಶದಲ್ಲಿಯೇ ಅತಿ ಬಡ ಮುಖ್ಯಮಂತ್ರಿ ಆಗಿದ್ದಾರೆ. ಅವರು ಕೇವಲ 15 ಲಕ್ಷ ರೂಪಾಯಿ ಮೌಲ್ಯದ ಆಸ್ತಿ ಹೊಂದಿದ್ದಾರೆ.
ಜಮ್ಮು-ಕಾಶ್ಮೀರದ ಒಮರ್ ಅಬ್ದುಲ್ಲಾ 55 ಲಕ್ಷ ರೂ ಆಸ್ತಿ ಹೊಂದಿದ್ದರೆ, ಕೇರಳದ ಪಿಣರಾಯಿ ವಿಜಯನ್, ದೆಹಲಿಯ ಅತಿಶಿ, ರಾಜಸ್ಥಾನದ ಸಿಎಂ ಭಜನ್ಲಾಲ್ ಶರ್ಮಾ ಅವರು ತಲಾ 1 ಕೋಟಿ ರೂಪಾಯಿ ಮೌಲ್ಯದ ಆಸ್ತಿ ಹೊಂದುವ ಮೂಲಕ ಕನಿಷ್ಠ ಆಸ್ತಿ ಹೊಂದಿರುವ ಮುಖ್ಯಮಂತ್ರಿಗಳಾಗಿದ್ದಾರೆ.
ಇದನ್ನೂ ಓದಿ: ಬಿಹಾರ ಸಿಎಂ ನಿತೀಶ್ಕುಮಾರ್ಗಿಂತ ಸಚಿವರೇ ಸಿರಿವಂತರು!: ಅಷ್ಟಕ್ಕೂ ಅವರ ಆಸ್ತಿ ಎಷ್ಟಿದೆ ಗೊತ್ತಾ?