ಬೆಂಗಳೂರು: ನಾಡಪ್ರಭು ಕೆಂಪೇಗೌಡರು ಕಟ್ಟಿದ ನಾಡಿನ ಒಳಿತಿಗಾಗಿ ಈಗಿರುವ ಬೆಂಗಳೂರು ನಗರ ಉಸ್ತುವಾರಿ ಸಚಿವರನ್ನು ಬದಲಿಸಿ, ಬೇರೊಬ್ಬರನ್ನು ನೇಮಕ ಮಾಡಿ ಎಂದು ಬಿಜೆಪಿ ಶಾಸಕ ಮುನಿರತ್ನ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗುರುವಾರ ಪತ್ರ ಬರೆದು ಮನವಿ ಮಾಡಿದ್ದಾರೆ.
ಮುಂದಿನ ಆಯವ್ಯಯದಲ್ಲಿ ಬೆಂಗಳೂರು ನಗರಕ್ಕೆ ನೀಡುವ ಅನುದಾನದ ಕುರಿತು ಈಗಾಗಲೇ ವ್ಯವಹಾರ ಕುದುರಿಸಲಾಗಿದೆ. ಆಂಧ್ರ ಪ್ರದೇಶದ ಗುತ್ತಿಗೆದಾರರು ರಾಜ್ಯದ ಗುತ್ತಿಗೆದಾರರ ಮೇಲೆ ಸವಾರಿ ಮಾಡುತ್ತಿದ್ದಾರೆ. ನಗರಕ್ಕೆ ಸಿಗುವ ಅನುದಾನದಲ್ಲಿ ಶೇಕಡಾ 35ರಷ್ಟು ನೀಡುವುದಾಗಿ ವ್ಯವಹಾರ ಮಾತುಕತೆ ನಡೆದಿದೆ. ಈಗಾಗಲೇ ಶೇ.12ರಷ್ಟು ಮುಂಗಡ ಹಣವನ್ನು ನೀಡಿದ್ದಾರೆ. ಕಾರ್ಯಾದೇಶ ಕೊಟ್ಟ ನಂತರ ಶೇ.8 ಮತ್ತು ಅನುದಾನ ಬಿಡುಗಡೆ ಮಾಡುವುದಕ್ಕೆ ಶೇ.15 ಒಟ್ಟಾರೆ ಸುಮಾರು ಶೇ.35ರಷ್ಟು ಹಣ ನೀಡುವ ಬಗ್ಗೆ ವ್ಯವಹರಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಹೀಗಾಗಿ, ನಗರಕ್ಕೆ ನೀಡಲಾಗುವ ಅನುದಾನವನ್ನು ತಮ್ಮ ನೇತೃತ್ವದಲ್ಲೇ ಬೆಂಗಳೂರು ನಗರದ ಎಲ್ಲಾ ಶಾಸಕರನ್ನು ಕರೆದು ಸಭೆ ಮಾಡಿ ಅನುದಾನವನ್ನು ತಾವೇ ನೇರವಾಗಿ ನಗರದ ಕ್ಷೇತ್ರಗಳಿಗೆ ಘೋಷಣೆ ಮಾಡಬೇಕೆಂದು ಕೋರಿದ್ದಾರೆ.
ನಾಡಪ್ರಭು ಕೆಂಪೇಗೌಡರು ಕಟ್ಟಿದಂತಹ ಬೆಂಗಳೂರು ನಗರದ ಅಸ್ತಿತ್ವ ಕಳೆದು ಹೋಗುತ್ತಿದೆ. ನಗರಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಬರಬೇಕೆಂದು ತಾವು ಬಯಸಿದಲ್ಲಿ, ಈ ಹಿಂದೆ ನಗರದ ಅಭಿವೃದ್ಧಿಗಾಗಿ ಉತ್ತಮ ಕೆಲಸ ಮಾಡಿದ ರಾಮಲಿಂಗಾರೆಡ್ಡಿ ಮತ್ತು ಕೆ.ಜೆ.ಜಾರ್ಜ್ ಅವರನ್ನು ಮರು ನೇಮಕ ಮಾಡಿ ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರೆ ಅಂತಾನೇ ನಾವೆಲ್ಲ ಭಾವಿಸಿದ್ದೇವೆ: ಸಚಿವ ಜಿ.ಪರಮೇಶ್ವರ್