ಪಾಟ್ನಾ (ಬಿಹಾರ) : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸೇರಿದಂತೆ ಅವರ ಸಚಿವ ಸಂಪುಟ ಸದಸ್ಯರು ವಾರ್ಷಿಕವಾಗಿ ನೀಡುವ ಆಸ್ತಿ ವಿವರವನ್ನು ಪ್ರಕಟಿಸಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಿಂತ ಡಿಸಿಎಂ, ಸಚಿವರ ಆಸ್ತಿಯೇ ದುಪ್ಪಟ್ಟಾಗಿದೆ.
ಡಿಸೆಂಬರ್ 31 ರಂದು ಸರ್ಕಾರದ ವೆಬ್‌ಸೈಟ್‌ನಲ್ಲಿ ನಮೂದಿಸಲಾದ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳ ಆಸ್ತಿ ವಿವರಗಳ ಪ್ರಕಾರ, ನಿತೀಶ್ ಅವರು ಒಟ್ಟು 1.64 ಕೋಟಿ ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದಾರೆ. ಇದರಲ್ಲಿ 21,052 ರೂಪಾಯಿ ನಗದು, ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 60,811.56 ಹಣ ಡೆಪಾಸಿಟ್ ಇಟ್ಟಿದ್ದಾಗಿ ಘೋಷಿಸಿದ್ದಾರೆ.
ಜೊತೆಗೆ ದೆಹಲಿಯ ದ್ವಾರಕಾದಲ್ಲಿರುವ ಸಹಕಾರಿ ಹೌಸಿಂಗ್ ಸೊಸೈಟಿಯಲ್ಲಿ ಒಂದು ವಸತಿ ಫ್ಲಾಟ್ ಹೊಂದಿದ್ದಾರೆ. 2023 ರಲ್ಲಿ ಸಿಎಂ ನಿತೀಶ್ ಅವರು 16,484,632.69 ರೂಪಾಯಿ ಮೌಲ್ಯದ ಚರ ಮತ್ತು ಸ್ಥಿರ ಆಸ್ತಿ ಹೊಂದಿದ್ದರು.
ಸಿಎಂ ಮೀರಿಸಿದ ಸಚಿವರು: ಸಂಪುಟ ಸಚಿವಾಲಯದ ವೆಬ್‌ಸೈಟ್‌ನಲ್ಲಿ ಇರುವ ದಾಖಲೆಯಂತೆ, ಬಿಹಾರ ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ಅವರ ಬಳಿ 6.70 ಲಕ್ಷ ರೂಪಾಯಿ ನಗದು ಇದ್ದರೆ, ಅವರ ಪತ್ನಿ ಕುಮಾರಿ ಮಮತಾ ಬಳಿ 5.70 ಲಕ್ಷ ರೂಪಾಯಿ ನಗದು ಇದೆ. 4 ಲಕ್ಷ ರೂಪಾಯಿ ಮೌಲ್ಯದ ರೈಫಲ್ ಸೇರಿ, ಒಟ್ಟು 8.28 ಕೋಟಿ ಆಸ್ತಿಯನ್ನು ಹೊಂದಿದ್ದಾರೆ.
ಮತ್ತೊಬ್ಬ ಡಿಸಿಎಂ ವಿಜಯ್ ಕುಮಾರ್ ಸಿನ್ಹಾ ಅವರು 2.42 ಕೋಟಿ ರೂಪಾಯಿ ಮೌಲ್ಯದ ಸ್ಥಿರಾಸ್ತಿ ಇದೆ ಎಂದು ಪ್ರಕಟಿಸಿದ್ದಾರೆ. ಅವರ ಪತ್ನಿ ಹೆಸರಿನಲ್ಲಿ 3.32 ಕೋಟಿ ರೂಪಾಯಿ ಮೌಲ್ಯದ ಸ್ಥಿರ ಆಸ್ತಿ ಇದೆ. ಯಾವುದೇ ನಗದು ಇಲ್ಲ. 77,181 ರೂಪಾಯಿ ಮೌಲ್ಯದ ರಿವಾಲ್ವರ್ ಇದೆ ಎಂದು ಘೋಷಿಸಿಕೊಂಡಿದ್ದಾರೆ. ಇದರ ಜೊತೆಗೆ, ಉಳಿದ ಸಂಪುಟ ಸದಸ್ಯರು ಕೂಡ ತಮ್ಮ ಆಸ್ತಿ ವಿವರಗಳನ್ನು ನೀಡಿದ್ದಾರೆ.
ನಿತೀಶ್ ಕುಮಾರ್ ನೇತೃತ್ವದ ಸರ್ಕಾರವು ಪ್ರತಿ ವರ್ಷದ ಕೊನೆಯ ದಿನದಂದು ಎಲ್ಲ ಸಂಪುಟ ಸಚಿವರು ತಮ್ಮ ಆಸ್ತಿ ಮತ್ತು ಸಾಲದ ವಿವರವನ್ನು ಪ್ರಕಟಿಸುವುದು ಕಡ್ಡಾಯವಾಗಿದೆ.
ಇದನ್ನೂ ಓದಿ: ಆಧುನಿಕ ಇಂಜಿನಿಯರಿಂಗ್ನ ಅದ್ಭುತ 'ಪಂಬನ್ ಸೇತುವೆ': ಇದರ ಆಯಸ್ಸೆಷ್ಟು, ವಿಶಿಷ್ಟತೆಗಳೇನು ಗೊತ್ತಾ?