ಜಗಿತ್ಯಾಲ, ತೆಲಂಗಾಣ: ಮೂವರು ಅಪ್ರಾಪ್ತೆಯರ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ 67 ವರ್ಷ ಇಳಿವಯಸ್ಸಿನ ಅಪರಾಧಿಗೆ 20 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಲಾಗಿದೆ. ತೆಲಂಗಾಣದ ಜಗಿತ್ಯಾಲ ತ್ವರಿತ ವಿಶೇಷ ನ್ಯಾಯಾಲಯ ಈ ಮಹತ್ವದ ಆದೇಶ ನೀಡಿದೆ.
ಅಪ್ರಾಪ್ತೆಯರ ಮೇಲೆ ಪೈಶಾಚಿಕ ಕೃತ್ಯ ಎಸಗಿದ ಶಿವರಾತ್ರಿ ಮುತ್ತಯ್ಯನನ್ನು ಪೋಕ್ಸೋ ಕಾಯ್ದೆಯಡಿ ಬಂಧಿಸಿದ ಪೊಲೀಸರು ತನಿಖೆ ನಡೆಸಿದ್ದರು. ಬಳಿಕ ವಿಶೇಷ ತ್ವರಿತ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಕೋರ್ಟ್, ಆರೋಪಿಯನ್ನು ಅಪರಾಧಿ ಎಂದು ಘೋಷಿಸಿ ಕಠಿಣ ಶಿಕ್ಷೆಗೆ ಗುರಿ ಮಾಡಿದೆ.
ಪ್ರಕರಣದ ವಿವರ: 2023ರ ಅಕ್ಟೋಬರ್‌ನಲ್ಲಿ ಈ ಘಟನೆ ನಡೆದಿದ್ದು, ಗೊಲ್ಲಪಲ್ಲಿ ಗ್ರಾಮದ ನಿವಾಸಿ ಶಿವರಾತ್ರಿ ಮುತ್ತಯ್ಯ ಎಂಬಾತ ಅದೇ ಗ್ರಾಮದ ಮೂವರು ಅಪ್ರಾಪ್ತೆಯರನ್ನು ಚಾಕೋಲೇಟ್ ನೀಡುವ ನೆಪದಲ್ಲಿ ಕರೆಸಿಕೊಂಡು ಅವರ ಮೇಲೆ ಅತ್ಯಾಚಾರ ನಡೆಸಿದ್ದ. ಪ್ರಕರಣ ಬೆಳಕಿಗೆ ಬಂದ ಬಳಿಕ ಅಪ್ರಾಪ್ತೆಯರ ಕುಟುಂಬಸ್ಥರು ಆರೋಪಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ದೂರಿನ ಆಧಾರದ ಮೇಲೆ ಮುತ್ತಯ್ಯನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಮೂರು ಪ್ರಕರಣಗಳನ್ನು ದಾಖಲಿಸಿದ್ದರು. ಬಳಿಕ ಆತನನ್ನು ಬಂಧಿಸಲಾಗಿತ್ತು. ಪೊಲೀಸರು ತನಿಖೆಯನ್ನು ಚುರುಕುಗೊಳಿಸಿ, ಸಾಕ್ಷ್ಯಾಧಾರಗಳ ಸಮೇತ ಜಗಿತ್ಯಾಲ ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯಕ್ಕೆ ಮುತ್ತಯ್ಯನನ್ನು ಹಾಜರುಪಡಿಸಿದ್ದರು.
ದಾಖಲೆಗಳನ್ನು ಪರಿಶೀಲಿಸಿದ ಜಿಲ್ಲಾ ಪ್ರಧಾನ ನ್ಯಾಯಾಧೀಶರು ಹಾಗೂ ತ್ವರಿತ ನ್ಯಾಯಾಲಯದ ವಿಶೇಷ ನ್ಯಾಯಾಧೀಶರಾದ ಜಿ.ನೀಲಿಮಾ ಅವರು ಮುತ್ತಯ್ಯ ತಪ್ಪಿತಸ್ಥ ಎಂದು ಘೋಷಿಸಿ 20 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ಪ್ರತಿ ಪ್ರಕರಣದಲ್ಲಿ 1000 ರೂಪಾಯಿ ದಂಡ ವಿಧಿಸಿ ಆದೇಶಿಸಿದ್ದಾರೆ. ಅಪರಾಧಿಗೆ ಶಿಕ್ಷೆಯನ್ನು ಏಕಕಾಲದಲ್ಲಿ ನೀಡುವಂತೆ ಆದೇಶಿಸಿದ ನ್ಯಾಯಾಲಯವು, ಸಂತ್ರಸ್ತ ಮೂವರು ಅಪ್ರಾಪ್ತೆಯರಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ನೀಡಲೂ ಸೂಚಿಸಿದೆ.
ಪ್ರಕರಣದಲ್ಲಿ ಆರೋಪಿಗೆ ಶೀಘ್ರ ಶಿಕ್ಷೆಯಾಗುವಂತೆ ಅವಿರತವಾಗಿ ಶ್ರಮಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತೆಲಂಗಾಣ ಎಸ್ಪಿ ಅಶೋಕ್ ಕುಮಾರ್ ಅವರು ಅಭಿನಂದಿಸಿದ್ದಾರೆ.
ಇದನ್ನೂ ಓದಿ: ದೇಶದ ಶ್ರೀಮಂತ ಹಾಗೂ ಬಡ ಸಿಎಂಗಳ ಪಟ್ಟಿ ಬಿಡುಗಡೆ: ಈ ಪಟ್ಟಿಯಲ್ಲಿ ಯಾರೆಲ್ಲ ಇದ್ದಾರೆ ನೀವೇ ನೋಡಿ