ಕನ್ನಡ ಕಿರುತೆರೆಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ 11 ಫಿನಾಲೆ ಸಮೀಪಿಸುತ್ತಿದೆ. ಈಗಾಗಲೇ 90 ದಿನಗಳನ್ನು ಪೂರೈಸಿರುವ ಶೋ ಪ್ರೇಕ್ಷಕರ ಸಂಖ್ಯೆ ಹೆಚ್ಚಿಸಿಕೊಂಡಿದೆ. ಆರಂಭದಲ್ಲಿ ಎಂಟ್ರಿ ಕೊಟ್ಟ 17 ಮಂದಿ ಮತ್ತು ವೈಲ್ಡ್ ಕಾರ್ಡ್ ಮೂಲಕ ಕಾರ್ಯಕ್ರಮದ ನಡುವಲ್ಲಿ ಎಂಟ್ರಿ ಕೊಟ್ಟ ಮೂವರು ಸೇರಿ ಒಟ್ಟು 20 ಮಂದಿ ದೊಡ್ಮನೆ ಪ್ರವೇಶಿಸಿದ್ದರು. ಸದ್ಯ ಉಳಿದುಕೊಂಡಿರೋದು 9 ಮಂದಿ. ಶೋ ಫಿನಾಲೆ ಸಮೀಪಿಸುತ್ತಿದ್ದಂತೆ ಸ್ಪರ್ಧಿಗಳ ಕುಟುಂಬಸ್ಥರು ಮನೆಯೊಳಗೆ ಬರೋದು ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ. ಅದರಂತೆ ಈ ವಾರ ಸ್ಪರ್ಧಿಗಳ ಮನೆಯವರು ಆಗಮಿಸುತ್ತಿದ್ದಾರೆ. ಭಾವನಾತ್ಮಕ ಕ್ಷಣಗಳಿಗೆ 'ಬಿಗ್ ಬಾಸ್ ಕನ್ನಡ' ಸಾಕ್ಷಿಯಾಗಿದೆ.
ಯಾರೆಲ್ಲಾ ಬಂದು ಹೋಗಿದ್ದಾರೆ? ಕಳೆದ ಸಂಚಿಕೆಯಲ್ಲಿ ಭವ್ಯಾ ಗೌಡ, ತ್ರಿವಿಕ್ರಮ್ ಮತ್ತು ರಜತ್ ಕುಟುಂಬಸ್ಥರು ಆಗಮಿಸಿ ಮನೆಯೊಳಗೆ ಕೆಲ ಕ್ಷಣ ಕಳೆದು ಹೋಗಿದ್ದಾರೆ. ಈ ಸರ್ಪೈಸ್ ಎಂಟ್ರಿ ಮುಂದುವರಿದಿದೆ. ಇಂದಿನ ಸಂಚಿಕೆಯಲ್ಲಿ ಮೋಕ್ಷಿತಾ ಪೈ ಮತ್ತು ಉಗ್ರಂ ಮಂಜು ಮನೆಯವರು ಬಂದಿದ್ದಾರೆ. ಮೋಕ್ಷಿತಾ ಅವರ ಭಾವನಾತ್ಮಕ ಕ್ಷಣಗಳನ್ನು ಕಂಡು ಪ್ರೇಕ್ಷಕರು ಸಹ ಕಣ್ಣೀರಿಟ್ಟಿದ್ದಾರೆ. 'ಹೊಸ ವರ್ಷದ ಶುಭಾರಂಭಕ್ಕೆ ಸಂಬಂಧಗಳ ಸಮ್ಮಿಲನ!' ಎಂಬ ಕ್ಯಾಪ್ಷನ್ನಡಿ ಅನಾವರಣಗೊಂಡಿರುವ ಪ್ರೋಮೋದಲ್ಲಿ ಇದರ ಒಂದು ಚಿಕ್ಕ ನೋಟ ಸಿಕ್ಕಿದೆ.
ಕುಟುಂಬದ ವಿಚಾರದಲ್ಲಿ ಬಹಳ ಭಾವುಕ ಇವರು: ನಟಿ ಮೋಕ್ಷಿತಾ ಪೈ ಅವರ ಸಹೋದರ ವಿಶೇಷ ಚೇತನ ಅನ್ನೋದು ಎಲ್ಲರಿಗೂ ತಿಳಿದಿರುವ ವಿಚಾರವೇ. ಬಿಗ್ ಬಾಸ್ ಮನೆಯಲ್ಲೂ ಆಗಾಗ್ಗೆ ತಮ್ಮನ ಬಗ್ಗೆ ಹೇಳಿಕೊಂಡು ಭಾವುಕರಾಗಿದ್ದರು. ತಮ್ಮ ಮಗನಂತೆ ನೋಡಿಕೊಳ್ಳುವ ಸಹೋದರನ ವಿಡಿಯೋ ಒಮ್ಮೆ ಬಿಗ್ ಬಾಸ್ ಮನೆಯಲ್ಲಿ ಪ್ಲೇ ಆದಾಗ ಕಣ್ಣೀರಿಟ್ಟಿದ್ದರು. ಹೀಗೆ ತಮ್ಮ ಕುಟುಂಬದ ವಿಚಾರದಲ್ಲಿ ಬಹಳ ಭಾವುಕರಾಗುವ ಮೋಕ್ಷಿತಾ ಅವರ ಸದ್ಯದ ಪರಿಸ್ಥಿತಿ ಎಂಥವರನ್ನೂ ಮರುಗುವಂತೆ ಮಾಡುತ್ತದೆ.
ಇದನ್ನೂ ಓದಿ: ನಿರ್ದೇಶಕಿಯಾದ 'ಕನ್ನಡತಿ' ರಂಜನಿ ರಾಘವನ್: ಸಂಗೀತ ಮಾಂತ್ರಿಕ ಇಳಯರಾಜರಿಗೂ ಹಿಡಿಸಿತು ಕಥೆ
ಮನೆಯವರ ಕಂಡು ಓಡೋಡಿ ಬಂದ ಸ್ಪರ್ಧಿ: ತಮ್ಮ ಮನೆಯವರನ್ನು ಕಂಡು ಮೋಕ್ಷಿತಾ ಓಡೋಡಿ ಬಂದಿದ್ದಾರೆ. ತಮ್ಮನನ್ನು ಮಾತನಾಡಿಸುವ ಪ್ರಯತ್ನ ಮಾಡಿದ್ದಾರೆ. ಆದ್ರೆ ಆತ ಅಕ್ಕನನ್ನು ಮರೆತು ಹೋದಂತೆ ತೋರಿದೆ. ಅವನು ನನ್ನನ್ನು ಮರೆತು ಹೋಗಿದ್ದಾನೆ ಎಂದು ಹೇಳುತ್ತಾ ಕಣ್ಣೀರಿಟ್ಟಿದ್ದಾರೆ. ಪುಟಾಣಿ ಅಕ್ಕ ಎಲ್ಲಿ ಅಂತಾ ಪ್ರಶ್ನಿಸಿದ್ರೂ ಪ್ರತಿಕ್ರಿಯೆ ಇಲ್ಲ. ಮೋಕ್ಷಿತಾ ಅವರ ಈ ಪರಿಸ್ಥಿತಿ ಕಂಡು ಮನೆಯ ಇತರ ಸ್ಪರ್ಧಿಗಳು ಮರುಗಿದ್ದಾರೆ. ಅದರಲ್ಲೂ ಗೆಳತಿ ಗೌತಮಿ ಕೂಡಾ ಕಣ್ಣೀರಿಟ್ಟಿದ್ದಾರೆ.
ಇದನ್ನೂ ಓದಿ: ಚಿತ್ರರಂಗಕ್ಕೆ ಜೂ.ಕಿಚ್ಚನ ಎಂಟ್ರಿ: ಸುದೀಪ್ ಸಿನಿಮಾದಲ್ಲಿ ಅಕ್ಕನ ಮಗ ಸಂಚಿತ್ ಸಂಜೀವ್
ಆಟದಲ್ಲಿ ಆರ್ಭಟಿಸುವ ಇವರು ತಂದೆ ನೋಡಿ ಗಳಗಳನೇ ಅತ್ತರು: ಇನ್ನೂ, ಉಗ್ರಂ ಮಂಜು ಅವರ ಮನೆಯವರೂ ಕೂಡಾ ಎಂಟ್ರಿ ಕೊಟ್ಟಿದ್ದಾರೆ. ಆಟದಲ್ಲಿ ಆರ್ಭಟಿಸುವ ಮಂಜು ತಂದೆಯನ್ನು ಕಂಡೊಡನೆ ಗಳಗಳನೆ ಕಣ್ಣೀರಿಟ್ಟಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಇಷ್ಟೊಂದು ಭಾವುಕರಾಗಿದ್ದು, ಬಹಶಃ ಇದೇ ಮೊದಲಿರಬಹುದು. ನಂತರ ರಜತ್ ಮತ್ತು ಚೈತ್ರಾ ಮನೆಯಲ್ಲಿ ನಗು ತರಿಸುವ ಕೆಲಸ ಮಾಡಿದ್ದಾರೆ.