ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಿಂದ ಬಿಡುಗಡೆಗೊಂಡ ಬಳಿಕ ಇದೇ ಮೊದಲ ಬಾರಿಗೆ ನಟ ದರ್ಶನ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ತಮ್ಮ ಪ್ರೀತಿಯ ಸೆಲೆಬ್ರಿಟಿಗಳಿಗೆ (ಅಭಿಮಾನಿಗಳು) ಧನ್ಯವಾದ ತಿಳಿಸಿದ್ದಲ್ಲದೆ, ಕ್ಷಮೆಯನ್ನೂ ಕೋರಿದ್ದಾರೆ. ಅಲ್ಲದೆ, ಮೂವರಿಗೆ ವಿಶೇಷ ಧನ್ಯವಾದಗಳನ್ನು ಹೇಳಿದ್ದಾರೆ.
ವಿಡಿಯೋದಲ್ಲಿ ಏನಿದೆ?: "ಎಲ್ಲ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನಮಸ್ಕಾರ ಹೇಳಲಾ, ಧನ್ಯವಾದ ಎನ್ನಲಾ, ನಾನು ಯಾವುದೇ ಪದ ಬಳಸಿದರೂ ತುಂಬಾ ಕಡಿಮೆ. ನೀವು ತೋರಿರುವ ಪ್ರೀತಿಯನ್ನು ಯಾವ ರೀತಿ ಮರಳಿಸಲಿ ಎಂದು ತಿಳಿಯುತ್ತಿಲ್ಲ. ಮುಖ್ಯವಾದ ವಿಷಯವೆಂದರೆ, ನನ್ನ ಹುಟ್ಟಹಬ್ಬ. ನೀವು ತುಂಬಾನೆ ಆಸೆಪಟ್ಟಿರುತ್ತೀರಿ, ನನಗೂ ಕೂಡ ತುಂಬಾನೇ ಆಸೆ ಇತ್ತು ಬರ್ತ್ ಡೇಯನ್ನು ನಿಮ್ಮ ಜೊತೆ ಆಚರಿಸಿಕೊಳ್ಳಬೇಕೆಂದು. ಆದರೆ ಅದು ಈ ಸಲ ಸಾಧ್ಯವಾಗುತ್ತಿಲ್ಲ, ಯಾಕೆಂದರೆ ತುಂಬಾ ಸಮಯದವರೆಗೆ ನನಗೆ ನಿಂತುಕೊಳ್ಳಲು ಆಗುವುದಿಲ್ಲ. ಇಂಜೆಕ್ಷನ್ ಪವರ್ ಇರುವವರೆಗೆ ಮಾತ್ರ ನನಗೆ ನೋವು ಇರಲ್ಲ. ಆಪರೇಷನ್ ಅನ್ನೋದು ಕಟ್ಟಿಟ್ಟ ಬುತ್ತಿ. ನಾನು ಅದನ್ನು ಮಾಡಿಸಿಕೊಳ್ಳಲೇಬೇಕು. ನಾನು ಒಪ್ಪಿಕೊಂಡಿರುವ ಸಿನಿಮಾ ನಿರ್ಮಾಪಕರಿಗೆ ಥ್ಯಾಂಕ್ಸ್ ಹೇಳುತ್ತೇನೆ. ಯಾಕೆಂದರೆ ನನಗೋಸ್ಕರ ಅವರು ಕಾಯ್ದಿದ್ದಾರೆ. ದಯಮಾಡಿ ಇದೊಂದು ಸಲ ನನ್ನ ಸೆಲೆಬ್ರಿಟಿಗಳು ಕ್ಷಮಿಸಿ. ಮುಂದೊಂದು ದಿನ ಖಂಡಿತಾ ಸಿಗುತ್ತೇನೆ, ಧನ್ಯವಾದ ಹೇಳುತ್ತೇನೆ" ಎಂದು ದರ್ಶನ್ ಮನವಿ ಮಾಡಿದ್ದಾರೆ.
ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ನನ್ನ ಪ್ರೀತಿಯ ಮನವಿ ಈ ವರ್ಷ ನನ್ನ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿಲ್ಲ ಕ್ಷಮೆ ಇರಲಿ
— Darshan Thoogudeepa (@dasadarshan) February 8, 2025
ಇಂತಿ ನಿಮ್ಮ ದಾಸ ದರ್ಶನ್ pic.twitter.com/ERczhYj6DC
ಊಹಾಪೋಹಗಳಿಗೆ ಕಿವಿಗೊಡಬೇಡಿ: "ದಯಮಾಡಿ ಯಾವ ಊಹಾಪೋಹಗಳನ್ನೂ ನನ್ನ ಸೆಲೆಬ್ರಿಟಿಗಳು ನಂಬಬಾರದು. ನಿರ್ಮಾಪಕರೊಬ್ಬರಿಗೆ ಅಡ್ವಾನ್ಸ್ ಹಣ ವಾಪಸ್ ಕೊಟ್ಟೆ, ಸೂರಪ್ಪ ಬಾಬು ಅವರಿಗೆ ತುಂಬಾ ಕಮಿಟ್ಮೆಂಟ್ಗಳು ಇದ್ದವು. ನಿಮಗೆಲ್ಲ ಗೊತ್ತಿರುವಂತೆ ಸಮಯವೆಲ್ಲ ವೇಸ್ಟ್ ಆಗೋಗಿದೆ. ಹೀಗಾಗಿ, ಆ ಹಣವನ್ನು ವಾಪಸ್ ಕೊಟ್ಟೆ. ಮುಂದೊಂದು ದಿನ ಅವರೊಂದಿಗೆ ಸಿನಿಮಾ ಮಾಡೋಣ ಎಂದಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ.
"ನಾನು, ಪ್ರೇಮ್ ಖಂಡಿತಾ ಸಿನಿಮಾ ಮಾಡುತ್ತೇವೆ. ಅದು ನಮ್ಮ ಗುರುಗಳು ಹಾಗೂ ನನ್ನ ಪ್ರೀತಿಯ ಸ್ನೇಹಿತೆ ರಕ್ಷಿತಾ ಅವರ ಆಸೆ. ಪ್ರೊಡಕ್ಷನ್ ಬ್ಯುಸಿ ಇಲ್ಲದೇ ಇರುವವರ ಜೊತೆ ಸಿನಿಮಾ ಮಾಡಬೇಕು. ಯಾಕೆಂದರೆ, ಸಿನಿಮಾ ನಿರ್ಮಾಪಕನಾದವನಿಗೆ ತುಂಬಾ ಕೆಲಸಗಳಿರುತ್ತವೆ. ಹೀಗಾಗಿ, ಫ್ರೀಯಾಗಿರುವವರ ಜೊತೆ ಚಿತ್ರ ಮಾಡಬೇಕು" ಎಂದು ದರ್ಶನ್ ಹೇಳಿದ್ದಾರೆ.
"ನಿಮ್ಮ ಪ್ರೀತಿ, ಅಭಿಮಾನ, ಪ್ರೋತ್ಸಾಹ ನನ್ನಂತವನ ಮೇಲೆ ಇರೋದಕ್ಕೆ ನಾನು ಯಾವಾಗಲೂ ಚಿರಋಣಿ. ಪ್ರೀತಿಗಿಂತ ಹೆಚ್ಚಾಗಿ ನೀವು ಬೆಂಬಲ ನೀಡಿದ್ದೀರಿ. ಅದನ್ನು ತೀರಿಸಲು ನನ್ನಿಂದ ಆಗಲ್ಲ. ನನ್ನ ನಮ್ಮಿಕೊಂಡವರೆಲ್ಲರಿಗೂ ಋಣಿಯಾಗಿರುತ್ತೇನೆ" ಎಂದು ತಿಳಿಸಿದ್ದಾರೆ.
ಮೂವರಿಗೆ ಧನ್ಯವಾದ: ಇದೇ ವೇಳೆ ದರ್ಶನ್ ಅವರು ಮೂವರಿಗೆ ಧನ್ಯವಾದ ತಿಳಿಸಿದ್ದಾರೆ. "ನಮ್ಮ ಹೀರೋ ಧನ್ವೀರ್ ಅವರಿಗೆ ತುಂಬಾ ಥ್ಯಾಂಕ್ಸ್, ಅವರು ಸದಾ ನನ್ನ ಜೊತೆಯಲ್ಲೇ ಇದ್ದರು. ಹಾಗೆಯೇ, ಬುಲ್ ಬುಲ್ ರಕ್ಷಿತಾ ರಾಮ್ ಹಾಗೂ ನನ್ನ ಸ್ನೇಹಿತೆ ರಕ್ಷಿತಾ ಅವರಿಗೂ ಥ್ಯಾಂಕ್ಸ್. ಹಾಗೆಯೇ, ನನ್ನ ಎಲ್ಲ ಸೆಲೆಬ್ರಿಟಿಗಳಿಗೂ ಅನಂತ ಅನಂತ ಧನ್ಯವಾದಗಳು" ಎಂದಿದ್ದಾರೆ.
ಕನ್ನಡ ಸಿನಿಮಾವನ್ನೇ ಮಾಡುವುದು: "ನಾನು ಬೇರೆ ಭಾಷೆಯ ಸಿನಿಮಾ ಮಾಡಲು ಹೋಗುವುದಿಲ್ಲ. ಇಲ್ಲೇ ಇಷ್ಟೊಂದು ಪ್ರೀತಿ ತೋರಿಸಿರುವಾಗ ಬೇರೆ ಕಡೆ ನಾನು ಯಾಕೆ ಹೋಗಲಿ. ಸಾಯೋವರೆಗೂ ಇಲ್ಲೇ ಇರುತ್ತೇನೆ. ಕಾವೇರಿ ಹುಟ್ಟಿರುವ ಕೊಡಗಿನಲ್ಲೇ ನಾನೂ ಹುಟ್ಟಿದ್ದೇನೆ. ಕಾವೇರಿ ಎಲ್ಲಾ ಕಡೆ ಹರಿದುಕೊಂಡು ಬರುತ್ತಾಳೆ, ಹಾಗೆಯೇ ನನ್ನದು ಸೀಮಿತ ಇರುವುದು ಮೇಕೆದಾಟುವರೆಗೆ ಮಾತ್ರ. ನಾನು ಯಾವಾಗ ಸಿನಿಮಾ ಮಾಡಿದರೂ ಅದು ಕನ್ನಡದ ಸಿನಿಮಾ ಮಾತ್ರ. ಅದು ಡಬ್ ಆದರೆ ಅದು ಬೇರೆ ವಿಚಾರ. ಆದರೆ ನಾನು ಕನ್ನಡಲ್ಲೇ ಇರೋದು, ಕನ್ನಡ ಸಿನಿಮಾವನ್ನೇ ಮಾಡುವುದು" ಎಂದು ದರ್ಶನ್ ತಿಳಿಸಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಹತ್ಯೆ: ದರ್ಶನ್ ಸೇರಿ 7 ಆರೋಪಿಗಳ ಜಾಮೀನು ರದ್ದುಗೊಳಿಸಲು ನಿರಾಕರಿಸಿದ ಸುಪ್ರೀಂ ಕೋರ್ಟ್
"ನನ್ನ ಬರ್ತ್ ಡೇಗೆ ಹಾಡುಗಳನ್ನು ಮಾಡಿರುವವರಿಗೆ ತುಂಬಾ ಧನ್ಯವಾದಗಳು. ತುಂಬಾ ಒಳ್ಳೆ ಸಾಂಗ್ ಮಾಡಿದ್ದೀರಿ. ಇದೊಂದು ಸಲ ಬರ್ತ್ ಡೇಗೆ ಸಿಗದಿದ್ದಕ್ಕೆ ಕ್ಷಮೆ ಇರಲಿ. ನಾನು ಏನೇ ಹೇಳಿದರೂ ತುಂಬಾ ಕಡಿಮೇನೆ. ಮುಂದೆ ಖಂಡಿತಾ ಸಿಗುತ್ತೇನೆ. ಪ್ರತಿ ಸಲ ಕೈಕೊಟ್ಟೇ ಮಾತನಾಡಿಸಿ ರೂಢಿ, ಯಾವುದೋ ಬಿಲ್ಡಿಂಗ್ ಮೇಲೆ ನಿಂತು ಕೈ ಬೀಸುವುದು ನನ್ನ ಮನಸ್ಸಿಗೆ ಒಪ್ಪಿಗೆ ಆಗುವುದಿಲ್ಲ. ಎಲ್ಲ ನನ್ನ ಪ್ರೀತಿಯ ಸೆಲೆಬ್ರಿಟಿಗಳಿಗೆ ತುಂಬಾ ಧನ್ಯವಾದಗಳು" ಎಂದು ವಿಡಿಯೋದಲ್ಲಿ ದರ್ಶನ್ ಮಾತನಾಡಿದ್ದಾರೆ.
ದರ್ಶನ್ ಹುಟ್ಟುಹಬ್ಬ ಫೆಬ್ರವರಿ 16ರಂದು ಇದ್ದು, 48ನೇ ವಸಂತಕ್ಕೆ ಕಾಲಿಡಲಿದ್ದಾರೆ.
ಇದನ್ನೂ ಓದಿ: ಪಿಸ್ತೂಲ್ ಮುಟ್ಟುಗೋಲು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ನಟ ದರ್ಶನ್