ಕಾರವಾರ(ಉತ್ತರ ಕನ್ನಡ): ಕರಾವಳಿಯಲ್ಲಿ ಮೀನುಗಾರಿಕೆ ಅವಧಿ ಆರಂಭವಾಗಿ ಐದು ತಿಂಗಳು ಮಾತ್ರ ಕಳೆದಿದೆ. ತರಹೇವಾರಿ ಮೀನುಗಳನ್ನು ಹೊತ್ತು ತರಬೇಕಿದ್ದ ಬೋಟುಗಳು ಮತ್ಸ್ಯಬೇಟೆಯ ಅವಧಿಯಲ್ಲೇ ಬಂದರಿನಲ್ಲೇ ಲಂಗರು ಹಾಕತೊಡಗಿದ್ದು ಬಲ್ಟ್ರಾಲ್, ಲೈಟ್ ಫಿಶಿಂಗ್ ನಡೆಸುವ ತಮ್ಮದೇ ಮೀನುಗಾರರ ವಿರುದ್ಧ ಇದೀಗ ಆಕ್ರೋಶ ಹೊರಹಾಕುತ್ತಿದ್ದಾರೆ.
ಕರಾವಳಿಯಲ್ಲಿ ಮೀನುಗಾರರು ಸರ್ಕಾರದ ಆದೇಶದಂತೆ 2024ರ ಆಗಸ್ಟ್ 1ರಿಂದ ಮೀನುಗಾರಿಕೆ ಆರಂಭಿಸಿದ್ದರು. ಆರಂಭದಲ್ಲಿ ಉತ್ತಮ ಮೀನುಗಾರಿಕೆಯೂ ನಡೆದಿತ್ತು. ಆದರೆ ಇದೀಗ ಕಳೆದ 15 ದಿನಗಳಿಂದ ಆಳಸಮುದ್ರಕ್ಕೆ ತೆರಳಿದರೂ ಸಹ ಬೋಟುಗಳಿಗೆ ಮೀನುಗಳೇ ಸಿಗುತ್ತಿಲ್ಲ. ಆಳಸಮುದ್ರಕ್ಕೆ ಒಂದು ಬಾರಿ ಮೀನುಗಾರಿಕೆಗೆ ತೆರಳಲು ಒಂದು ಬೋಟಿಗೆ ಡೀಸೆಲ್, ಕಾರ್ಮಿಕರು ಸೇರಿದಂತೆ ಸುಮಾರು ಒಂದು ಲಕ್ಷದವರೆಗೂ ಖರ್ಚಾಗುತ್ತದೆ. ಆದರೆ ಸಮುದ್ರದಲ್ಲಿ ಕೇವಲ 25 ರಿಂದ 30 ಸಾವಿರ ರೂಪಾಯಿ ಆಗುವಷ್ಟು ಮಾತ್ರ ಮೀನುಗಳು ಸಿಗುತ್ತಿದೆ. ಇದರಿಂದ ಮೀನುಗಾರರು ನಷ್ಟ ಅನುಭವಿಸುವಂತಾಗಿದೆ.
"ಮೀನುಗಾರಿಕೆಗೆ ಮಾಡಿದ ಖರ್ಚಿನ ಹಣ ಕೂಡ ಸಿಗದ ಕಾರಣ ಮೀನುಗಾರಿಕೆ ನಷ್ಟ ಅನುಭವಿಸುತ್ತಿದೆ. ಹೀಗಾಗಿ ಮೀನುಗಾರರು ಮೀನುಗಾರಿಕೆಗೆ ತೆರಳದೇ ಬಂದರಿನಲ್ಲೇ ಲಂಗರು ಹಾಕಿ ನಿಲ್ಲುವಂತಾಗಿದೆ" ಎನ್ನುತ್ತಾರೆ ಮೀನುಗಾರರಾದ ದೇವರಾಜ್ ತಾಂಡೇಲ್.
ಅವೈಜ್ಞಾನಿಕ ಮೀನುಗಾರಿಕೆಯ ವಿರುದ್ಧ ಕ್ರಮ ಕೈಗೊಳ್ಳಬೇಕು: ಸ್ಥಳೀಯರಾದ ಸಂಪತ್ ಹರಿಕಂತ್ರ ಪ್ರತಿಕ್ರಿಯಿಸಿ, "ಪ್ರತಿವರ್ಷ ಈ ಅವಧಿಯಲ್ಲಿ ಬಂಗುಡೆ, ಸೀಗಡಿ, ಲೆಪ್ಪೆ, ಪಾಪ್ಲೆಟ್ ಸೇರಿದಂತೆ ಸಾಕಷ್ಟು ಮೀನುಗಳು ಸಿಗುತ್ತಿದ್ದವು. ಇದರಿಂದ ಸಾಲ ಮಾಡಿ ಮೀನುಗಾರಿಕೆ ಆರಂಭಿಸಿದ್ದ ಮೀನುಗಾರರು ಉತ್ತಮ ಮೀನುಗಾರಿಕೆ ನಡೆಸುವ ಮೂಲಕ ಹೆಚ್ಚಿನ ಆದಾಯ ಗಳಿಸಿ ಸಾಲ ತೀರಿಸಿಕೊಳ್ಳುತ್ತಿದ್ದರು. ಆದರೆ ಈ ಬಾರಿ ಮೀನುಗಾರಿಕೆ ಆರಂಭವಾದ ಐದು ತಿಂಗಳಲ್ಲೇ ಮತ್ಸ್ಯಕ್ಷಾಮ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೋಟ್‍ಗೆ ವ್ಯಯಿಸುವ ಡೀಸೆಲ್ ವೆಚ್ಚವೂ ಸಹ ಸಿಗದ ಪರಿಸ್ಥಿತಿ ಬಂದಿದೆ. ಹೀಗಾಗಿ ಮೀನುಗಾರರೂ ಸಹ ಮೀನುಗಾರಿಕೆ ಸ್ಥಗಿತಗೊಳಿಸಿದ್ದಾರೆ. ಈ ಸ್ಥಿತಿಗೆ ಅವೈಜ್ಞಾನಿಕ ಮತ್ಸ್ಯಬೇಟೆಯೇ ಕಾರಣ. ಬುಲ್ ಟ್ರಾಲ್, ಬೆಳಕು ಮೀನುಗಾರಿಕೆ ಅವ್ಯಾಹತವಾಗಿ ನಡೆಸಲಾಗುತ್ತಿದೆ. ಇದರಿಂದ ಮೀನುಗಾರಿಕೆ ವೇಳೆ ಆಗುವ ವೆಚ್ಚದಷ್ಟು ಮೀನು ಸಿಗುತ್ತಿಲ್ಲ. ಕಾರ್ಮಿಕರು ಕೆಲಸ ಬಿಟ್ಟು ಬೇರೆಡೆ ತೆರಳುತ್ತಿದ್ದಾರೆ. ನಾವು ಈಗಾಗಲೇ ಸಾಲ ಮಾಡಿಕೊಂಡಿದ್ದು ಅರ್ಧದಲ್ಲಿಯೇ ಮೀನುಗಾರಿಕೆ ನಿಂತಿರುವುದರಿಂದ ದೊಡ್ಡ ಹೊಡೆತ ಬಿದ್ದಿದೆ. ಸರ್ಕಾರ ಈ ಅವೈಜ್ಞಾನಿಕ ಮೀನುಗಾರಿಕೆ ವಿರುದ್ಧ ಕ್ರಮ ಕೈಗೊಳ್ಳಬೇಕು" ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ಇಂದಿನಿಂದ ನಮ್ಮ ಮೆಟ್ರೋ ದರ ಏರಿಕೆ: ಎಷ್ಟು ಕಿಲೋಮೀಟರ್‌ಗೆ ಎಷ್ಟು ಟಿಕೆಟ್?