ಬೆಂಗಳೂರು: ಅಂಗಡಿಯೊಂದರಲ್ಲಿ ಸಿಗರೇಟ್ ಪಡೆದು ಹಣ ನೀಡದೇ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಬೆದರಿಸಿದ್ದ ಆರೋಪಿಯನ್ನು ಆಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಜೇಂದ್ರನಗರದ ನಿವಾಸಿ ಗೌತಮ್ (25) ಬಂಧಿತ.
ಫೆಬ್ರವರಿ 4ರಂದು ಕೋರಮಂಗಲದ ರಾಜೇಂದ್ರ ನಗರದ 80 ಅಡಿ ರಸ್ತೆಯ ಸಭಾನಾ ಸ್ಟೋರ್ ಎಂಬ ಅಂಗಡಿಯ ಸಿಬ್ಬಂದಿ ನಿಸಾರ್ ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಫೆಬ್ರವರಿ 4ರಂದು ರಾತ್ರಿ 10.15ರ ಸುಮಾರಿಗೆ ಅಂಗಡಿಗೆ ತೆರಳಿದ್ದ ಆರೋಪಿ, ಸಿಗರೇಟ್ ಪ್ಯಾಕ್ ಮತ್ತು ಬೆಂಕಿಪೊಟ್ಟಣ ಪಡೆದಿದ್ದ. ಅಂಗಡಿ ಸಿಬ್ಬಂದಿ ನಿಸಾರ್ ಹಣ ಪಾವತಿಸುವಂತೆ ಕೇಳಿದ್ದರು. ಸಿಟ್ಟಿಗೆದ್ದ ಆರೋಪಿ, "ನನ್ನ ಬಳಿಯೇ ಹಣ ಕೇಳುತ್ತೀಯಾ?, ನಾನು ಯಾರು ಗೊತ್ತಾ?, ಹಣ ಕೇಳಿದರೆ ನಿನ್ನ ಅಂಗಡಿ ಚಿಂದಿ ಮಾಡುತ್ತೇನೆ" ಎಂದು ಮಾರಕಾಸ್ತ್ರ ತೋರಿಸಿ ಬೆದರಿಸಿದ್ದಾನೆ. ಅಲ್ಲದೇ, "ನಾನು ಕೇಳಿದಾಗಲೆಲ್ಲಾ ಕೊಡಬೇಕು" ಎಂದು ಬೆದರಿಸಿ ತೆರಳಿದ್ದ. ಈ ಕುರಿತು ನಿಸಾರ್ ಆಡುಗೋಡಿ ಠಾಣೆಗೆ ದೂರು ನೀಡಿದ್ದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ಪತಿಯ ಕೊಂದ ಪತ್ನಿ ಬಂಧನ : ಪೊಲೀಸ್ ಆಯುಕ್ತರು ಹೇಳಿದ್ದೇನು?