How to Make Sweet Potato Gulab Jamun: ಕೆಂಪು ಮತ್ತು ಗುಲಾಬಿ ಬಣ್ಣದ ಸಿಹಿ ಗೆಣಸು ಅನ್ನು ಹಸಿಯಾಗಿಯೇ ಅಥವಾ ಬೇಯಿಸಿ ತಿಂದರೂ ಹಲವಾರು ಆರೋಗ್ಯ ಲಾಭಗಳಿವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಸಿಹಿ ಗೆಣಸಿನಿಂದ ಅನೇಕ ರೀತಿಯ ಭಕ್ಷ್ಯಗಳನ್ನು ಮಾಡಬಹುದು. ಇದರಲ್ಲಿ ಗುಲಾಬ್ ಜಾಮೂನ್ ಕೂಡ ಒಂದಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಗುಲಾಬ್ ಜಾಮೂನ್ ಹಿಟ್ಟು ಅನೇಕ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ. ಹಿಟ್ಟಿಲ್ಲದೆ ಆರೋಗ್ಯಕರ ಮತ್ತು ರುಚಿಕರವಾಗಿ ಸಿಹಿ ಗೆಣಸಿನ ಗುಲಾಬ್ ಜಾಮೂನ್ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ. ಸಿಹಿ ಗೆಣಸಿನ ಗುಲಾಬ್ ಜಾಮೂನ್ ಮನೆ ಮಂದಿ ಎಲ್ಲರೂ ಖುಷಿಯಿಂದ ಸೇವಿಸುತ್ತಾರೆ. ಈ ಸಿಹಿ ತಿಂಡಿಯನ್ನು ತಯಾರಿಸಲು ಬೇಕಾಗುವ ಪದಾರ್ಥಗಳೇನು? ತಯಾರಿಸುವ ವಿಧಾನ ಹೇಗೆ ಎಂಬುದನ್ನು ತಿಳಿಯೋಣ.
ಗುಲಾಬ್ ಜಾಮೂನ್ಗೆ ಬೇಕಾಗುವ ಪದಾರ್ಥಗಳು:
ಸಿಹಿ ಗೆಣಸು - ಅರ್ಧ ಕೆಜಿ
ತುರಿದ ಬೆಲ್ಲ - 1 ಕಪ್
ನೀರು - ಅರ್ಧ ಕಪ್
ಏಲಕ್ಕಿ ಪುಡಿ - 1 ಟೀಸ್ಪೂನ್
ಗೋಧಿ ಹಿಟ್ಟು - 2 ಟೀಸ್ಪೂನ್
ಹಾಲಿನ ಪುಡಿ - 1 ಟೀಸ್ಪೂನ್ (ಐಚ್ಛಿಕ)
ಉಪ್ಪು - ಚಿಟಿಕೆ
ಅಡಿಗೆ ಸೋಡಾ - ಚಿಟಿಕೆ
ಗುಲಾಬ್ ಜಾಮೂನ್ ತಯಾರಿಸುವ ವಿಧಾನ:
- ಮೊದಲು ಸಿಹಿ ಗೆಣಸನ್ನು ತೊಳೆದು ಪೀಸ್ಗಳಾಗಿ ಕತ್ತರಿಸಿ ಕುಕ್ಕರ್‌ನಲ್ಲಿ ಹಾಕಿ.
- ಸಿಹಿ ಗೆಣಸು ಮುಳುಗುವವರೆಗೆ ನೀರು ಸುರಿಯಿರಿ ಹಾಗೂ ಮುಚ್ಚಿ.
- ಸ್ಟೌ ಆನ್ ಮಾಡಿ ಮಧ್ಯಮ ಉರಿಯಲ್ಲಿ ಇಡಿ, ಅದರ ಮೇಲೆ ಕುಕ್ಕರ್ ಇಟ್ಟು ಎರಡು ಸೀಟಿ ಬರುವವರೆಗೆ ಬೇಯಿಸಿದ ಬಳಿಕ ಸ್ಟೌ ಆಫ್ ಮಾಡಿ.
- ಹಬೆಯ ಕಡಿಮೆಯಾದ ನಂತರ ಕುಕ್ಕರ್‌ನಿಂದ ಸಿಹಿ ಗೆಣಸು ಹೊರಗೆ ತೆಗೆದು ತಣ್ಣಗಾಗುವವರೆಗೆ ಪಕ್ಕಕ್ಕೆ ಇಟ್ಟುಕೊಳ್ಳಿ.
- ಇದಕ್ಕೂ ಮೊದಲು ಪಾಕ ತಯಾರಿಸಿಕೊಳ್ಳಿ. ಅದಕ್ಕಾಗಿ ಸ್ಟೌ ಆನ್ ಮಾಡಿ ಪಾತ್ರೆ ಇಟ್ಟು, ಅದರೊಳಗೆ ತುರಿದ ಬೆಲ್ಲ ಮತ್ತು ನೀರು ಹಾಕಬೇಕು. ಬೆಲ್ಲ ಕರಗಿದ ನಂತರ ಸ್ಟೌ ಅನ್ನು ಮಧ್ಯಮ ಉರಿಯಲ್ಲಿ 5 ನಿಮಿಷಗಳ ಕಾಲ ಕುದಿಸಿ. ಇದು ಸ್ವಲ್ಪ ಜಿಗಿಯಾಗಿರಬೇಕು. ಅದರೊಳಗೆ ಏಲಕ್ಕಿ ಪುಡಿ ಸೇರಿಸಿ ಮತ್ತು ಪಕ್ಕಕ್ಕೆ ಇಡಿ.
- ಈಗ ತಣ್ಣಗಾದ ಸಿಹಿ ಗೆಣಸಿನ ಸಿಪ್ಪೆ ತೆಗೆದುಕೊಳ್ಳಿ. ಬಳಿಕ ತುರಿಯುವ ಮಣೆ ಸಹಾಯದಿಂದ ಸಿಹಿ ಗೆಣಸನ್ನು ತುರಿದುಕೊಳ್ಳಿ.
- ಅದರೊಳಗೆ ಗೋಧಿ ಹಿಟ್ಟು, ಹಾಲಿನ ಪುಡಿ, ಉಪ್ಪು, ಅಡಿಗೆ ಸೋಡಾ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
- ಬಳಿಕ ಈ ಮಿಶ್ರಣದಿಂದ ಸಣ್ಣ ಉಂಡೆಗಳನ್ನು ಮಾಡಿಕೊಂಡು ಪಕ್ಕಕ್ಕೆ ಇರಿಸಿ. ನಿಮಗೆ ಇಷ್ಟವಾಗುವ ಆಕಾರದಲ್ಲಿ ಗುಲಾಬ್ ಜಾಮೂನ್ ಅನ್ನು ಮಾಡಬಹುದು.
- ಈಗ ಸ್ಟೌ ಆನ್ ಮಾಡಿ, ಡೀಪ್ ಫ್ರೈ ಮಾಡಲು ಸಾಕಷ್ಟು ಎಣ್ಣೆಯೊಂದಿಗೆ ಕಡಾಯಿಯಲ್ಲಿ ಹಾಕಿ ಬಿಸಿ ಮಾಡಿ.
- ಎಣ್ಣೆ ಬಿಸಿಯಾದ ನಂತರ, ಅದರೊಳಗೆ ತಯಾರಿಸಿದ ಗುಲಾಬ್ ಜಾಮೂನ್ಗಳನ್ನು ಹಾಕಿ ಹಾಗೂ ಎರಡೂ ಬದಿಗಳಲ್ಲಿ ಗೋಲ್ಡನ್ ಬ್ರೌನ್ ರವರೆಗೆ ಫ್ರೈ ಮಾಡಿಕೊಳ್ಳಿ.
- ಹೀಗೆ ಎಲ್ಲಾ ಗುಲಾಬ್ ಜಾಮೂನ್ಗಳನ್ನು ಫ್ರೈ ಮಾಡಿದ ನಂತರ, ಬೆಲ್ಲದ ಪಾಕದಲ್ಲಿ ಗುಲಾಬ್ ಜಾಮೂನ್ಗಳನ್ನು ಹಾಕಬೇಕು, 2 ಗಂಟೆ ಬಿಟ್ಟು ಅವುಗಳನ್ನು ಸೇವಿಸಬಹುದು.
- ನಿಮಗೆ ಇಷ್ಟವಾದರೆ, ಮನೆಯಲ್ಲಿ ಈ ಸಿಹಿತಿಂಡಿ ಪ್ರಯತ್ನಿಸಿ ನೋಡಿ.
ಇದನ್ನೂ ಓದಿ: ನಿಮ್ಮ ಮನೆಯಲ್ಲಿ ಕೊಬ್ಬರಿ ಉಳಿದಿದೆಯೇ? ಅದರಿಂದಲೇ ಒಮ್ಮೆ ಮಾಡಿ ನೋಡಿ ಸೂಪರ್ ರಸಭರಿತ 'ಕಾಲಾ ಜಾಮೂನ್'!