ಹಾವೇರಿ: ಪ್ರತಿಯೊಬ್ಬರಿಗೂ ಒಂದೊಂದು ಹವ್ಯಾಸ ಇರುತ್ತದೆ. ಕೆಲವರಿಗೆ ಹಳೆಯ ಕಾರ್ಗಳ ಸಂಗ್ರಹದ ಹವ್ಯಾಸ, ಇನ್ನು ಕೆಲವರಿಗೆ ಅಂಚೆ ಚೀಟಿ ಸಂಗ್ರಹಿಸುವ ಹವ್ಯಾಸ ಇರುತ್ತದೆ. ಆದರೆ, ಹಾವೇರಿಯಲ್ಲೊಬ್ಬ ವಿಶಿಷ್ಟ ಹವ್ಯಾಸವಿರುವ ಯುವಕನೊಬ್ಬನಿದ್ದಾನೆ.
ಹಾವೇರಿಯ ನಾಗೇಂದ್ರನಮಟ್ಟಿಯ ಮೌಲಾಲಿಗೆ ಪಾರಿವಾಳಗಳನ್ನು ಸಾಕುವ ಹವ್ಯಾಸ. ಪಾರಿವಾಳ ಸಂಗ್ರಹದಲ್ಲಿ ಸುಮಾರು 15ಕ್ಕೂ ಅಧಿಕ ದೇಶ- ವಿದೇಶಗಳ ವಿವಿಧ ಜಾತಿಯ ಪಾರಿವಾಳಗಳಿವೆ. ಸುಮಾರು 120ಕ್ಕೂ ಅಧಿಕ ಪಾರಿವಾಳ ಸಾಕಿರುವ ಮೌಲಾಲಿ ಬಹುತೇಕರಂತೆ ಜೂಜಿಗಾಗಿ ಹಣಕ್ಕಾಗಿ ಸಾಕುತ್ತಿಲ್ಲ ಬದಲಿಗೆ ಪಾರಿವಾಳ ಅಂದರೆ ಇವರಿಗೆ ಇಷ್ಟ. ಪಾರಿವಾಳ ನೋಡದಿದ್ದರೆ ಮೌಲಾಲಿಗೆ ದಿನ ಕಳೆಯುವುದಿಲ್ಲ.
ವಿವಿಧ ಜಾತಿಯ ಪಾರಿವಾಳಗಳು: ಲಕ್ಕಾ, ಹ್ಯಾಂಗರ್, ಕೇಸರ್, ಬಾಮರ್, ರೇಸಿಂಗ್ ಬಾಮರ್, ಅಮೆರಿಕನ್ ಲಕ್ಕಾ, ದುಬಾಸ್, ಗಿರಿಯಾ ಬಾಜಿ ಜಾತಿಯ ಪಾರಿವಾಳಗಳಿವೆ. ಮೌಲಾಲಿ ತಂದೆ ಪಾರಿವಾಳ ಸಾಕುತ್ತಿದ್ದರು. ಅವರು ತೀರಿ ಹೋದ ಮೇಲೆ ಅದೇ ಹವ್ಯಾಸವನ್ನು ಮಗ ಬೆಳೆಸಿಕೊಂಡು ಬಂದಿದ್ದಾರೆ. ಪ್ರತಿಯೊಂದು ಗೂಡಿನಲ್ಲಿ ಒಂದು ಗಂಡು ಹೆಣ್ಣು ಜೋಡಿಯನ್ನು ಇಡುತ್ತಾರೆ. ಅವು ಹಾಕುವ ಮೊಟ್ಟೆಗಳಿಂದ ಮರಿಗಳನ್ನು ಸಹ ಮಾಡುವ ರೂಢಿಯನ್ನು ಮೌಲಾಲಿ ಬೆಳೆಸಿಕೊಂಡು ಬಂದಿದ್ದಾರೆ.
ವಿಶಿಷ್ಟ ಪಾರಿವಾಳಗಳ ಜಾತಿ ಎಲ್ಲಿಯಾದರೂ ಕಾಣಿಸಿಕೊಂಡರೇ ಸಾಕು ಅದನ್ನು ತಮ್ಮ ಮನೆಯಲ್ಲಿ ಸಾಕಬೇಕು ಎನ್ನುವ ಬಯಕೆ ಮೌಲಾಲಿಯವರದ್ದು. ಅಲ್ಲದೇ ಇವರು ಸಾಕಿ ಬೆಳೆಸಿದ ಪಾರಿವಾಳಗಳನ್ನು ರಾಜ್ಯ ಸೇರಿದಂತೆ ನೆರೆಯ ರಾಜ್ಯದ ಹವ್ಯಾಸಿ ಪಾರಿವಾಳ ಪ್ರಿಯರು ಖರೀದಿಸಿದ್ದಾರೆ. ಸುಮಾರು 5 ಸಾವಿರ ರೂಪಾಯಿಯಿಂದ ಹಿಡಿದು 15 ಸಾವಿರ ರೂಪಾಯಿ ಮೌಲ್ಯದ ಪಾರಿವಾಳಗಳು ಇವರ ಬಳಿ ಇವೆ.
ಯಾವುದೇ ರೆಡಿ ಫುಡ್ ಬದಲು ನೈಸರ್ಗಿಕವಾಗಿ ಬೆಳೆದ ಧಾನ್ಯಗಳನ್ನು ಪಾರಿವಾಳಕ್ಕೆ ಹಾಕಲಾಗುತ್ತದೆ. ಅಲ್ಲದೇ ವೈದ್ಯರಿಂದ ಇವುಗಳನ್ನು ತಪಾಸಣೆ ಮಾಡಿಸಲಾಗುತ್ತದೆ. ಅವುಗಳಿಗೆ ಯಾವುದೇ ರೋಗರುಜಿನ ಬರದಂತೆ ಅವುಗಳ ಗೂಡನ್ನು ಸ್ವಚ್ಚವಾಗಿಡಲಾಗುತ್ತದೆ.
"ಮನುಷ್ಯರ ಜೊತೆ ಎಷ್ಟೇ ಆತ್ಮೀಯವಾಗಿ ವರ್ತಿಸಿದರೂ ಸಹ ಅವರು ತಮ್ಮ ಕೆಟ್ಟತನ ಬಿಡುವುದಿಲ್ಲ. ಆದರೆ, ಪ್ರಾಣಿ - ಪಕ್ಷಿಗಳ ಜೊತೆ ಪ್ರೀತಿಯಿಂದ ನಡೆದುಕೊಂಡರೆ ಅವರು ಎಂದಿಗೂ ತಮಗೆ ದ್ರೋಹ ಬಗೆಯುವುದಿಲ್ಲ. ಸದಾ ಪ್ರೀತಿಯನ್ನು ಕೊಡುತ್ತವೆ" ಎಂದು ಮೌಲಾಲಿ ಅವರು ತಮ್ಮ ಅನುಭವ ಹಂಚಿಕೊಂಡಿದ್ದಾರೆ.
"ಮೊಬೈಲ್‌ಗಳು ಬಂದ ನಂತರ ಹಲವು ಹವ್ಯಾಸಗಳು ಮೂಲೆಗುಂಪಾಗಿವೆ. ಆದರೆ, ಹಾವೇರಿ ಜಿಲ್ಲೆಯಲ್ಲಿ ಪರಿವಾಳ ಸಾಕುವವರ ಹವ್ಯಾಸ ಮಾತ್ರ ಕಡಿಮೆಯಾಗಿಲ್ಲ. ನಿತ್ಯ ಜೀವನದಲ್ಲಿ ಹಲವು ಒತ್ತಡ ಜಂಜಾಟ ಅನುಭವಿಸುತ್ತೇವೆ. ಅದೇ ಕೆಲವು ಸಮಯದಲ್ಲಿ ಈ ಪಾರಿವಾಳಗಳ ಜೊತೆ ಕಳೆದರೇ ನೆಮ್ಮದಿ ಉತ್ಸಾಹ ಸಿಗುತ್ತದೆ" ಎನ್ನುತ್ತಾರೆ ಮೌಲಾಲಿ ಸ್ನೇಹಿತ ಅಸ್ಲಂ.
ಇದನ್ನೂ ಓದಿ: ನಿರ್ಬಂಧದ ನಡುವೆ ಜೋಗ ನೋಡುವ ಪ್ರವಾಸಿಗರಿಗೆ ಗುಡ್ ನ್ಯೂಸ್! ಕಾರಣ ಹೀಗಿದೆ