ಚಾಮರಾಜನಗರ: ಮೂರು ಬಾರಿಗೆ ದಿನಾಂಕ ಬದಲಾದ ನಂತರ ಸಚಿವ ಸಂಪುಟ ಸಭೆ ಚಾಮರಾಜನಗರದಲ್ಲಿ ನಡೆಯುತ್ತಾ, ಇಲ್ವಾ ಎಂಬ ಚರ್ಚೆ ಸಾರ್ವಜನಿಕ ವಲಯದಲ್ಲಿ ಜೋರಾಗಿ ನಡೆಯುತ್ತಿರುವ ಬೆನ್ನಲ್ಲೇ ಇದೀಗ ಮತ್ತೊಂದು ಮುಹೂರ್ತ ನಿಗದಿಯಾಗಿದೆ.
ರೈತ ಮುಖಂಡರ ಪ್ರತಿಕ್ರಿಯೆ: "ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಚಾಮರಾಜನಗರದಲ್ಲಿ ಸಚಿವ ಸಂಪುಟ ನಡೆಸಲು ಸರ್ಕಾರ ನಿರ್ಧರಿಸಿತ್ತು. ಇದಕ್ಕೆ ಈಗಾಗಲೇ ಮೂರು ಬಾರಿ ದಿನಾಂಕ ಕೂಡ ನಿಗದಿಯಾಗಿತ್ತು. ಆದರೆ ಮೂರು ಬಾರಿಯೂ ದಿನಾಂಕ ಬದಲಾಗುತ್ತಲೇ ಇದೆ. ಜಿಲ್ಲೆಯ ಪವಿತ್ರ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಸಚಿವ ಸಂಪುಟ ಸಭೆ ನಿಗದಿಯಾಗಿತ್ತು. ಜನರು ವಿದ್ಯುತ್, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ನಿರೀಕ್ಷಿಸುತ್ತಿದ್ದಾರೆ" ಎಂದು ರೈತ ಮುಖಂಡ, ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಹೇಳಿದರು.
"ಕ್ಯಾಬಿನೆಟ್ ಸಭೆಯಲ್ಲಿ ವಿಶೇಷ ಪ್ಯಾಕೇಜ್ ಘೋಷಿಸುವ ಬಗ್ಗೆ ಜನರಲ್ಲಿ ಭರವಸೆಯಿತ್ತು. ಆದರೆ ಇದೀಗ ಮೂರನೇ ಬಾರಿಗೆ ಸಚಿವ ಸಂಪುಟ ಮುಂದೂಡಿಕೆ ಆಗಿರುವುದರಿಂದ ಜಿಲ್ಲೆಗೆ ಸಾಕಷ್ಟು ಅನುದಾನ ಕೊಡುವ ಅನಿವಾರ್ಯತೆ ಎದುರಾಗುವ ದೃಷ್ಟಿಯಿಂದ ಸರ್ಕಾರ ಪದೇ ಪದೇ ದಿನಾಂಕ ಬದಲಾವಣೆ ಮಾಡುತ್ತಿದೆ. ಇದು ಸರ್ಕಾರ ಜಿಲ್ಲೆಯ ಜನರಿಗೆ ಮಾಡುತ್ತಿರುವ ಮೋಸ" ಎಂದು ಅವರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![Date set for cabinet meeting at Male Mahadeshwara Hills Chamarajanagar](https://etvbharatimages.akamaized.net/etvbharat/prod-images/13-02-2025/kn-cnr-cabinet-av-ka10038_13022025140913_1302f_1739435953_728.jpg)
ಮಾರ್ಚ್ 8ರಂದು ಸಂಪುಟ ಸಭೆ- ಜಿಲ್ಲಾಧಿಕಾರಿ: "ಫೆ.16ರಂದು ಚಾಮರಾಜನಗರದಲ್ಲಿ ಸಮಾವೇಶ ಹಾಗೂ ಫೆ.17ರಂದು ಸಚಿವ ಸಂಪುಟ ಸಭೆ ನಡೆಸಲು ದಿನಾಂಕ ಕೂಡ ಫೈನಲ್ ಆಗಿತ್ತು. ಇದಕ್ಕೆ ಮುಂಚೆ ಎರಡು ಬಾರಿ ದಿನಾಂಕ ಬದಲಾಗಿತ್ತು. ಇದೂ ಸೇರಿ ಮೂರನೇ ಬಾರಿಗೆ ದಿನ ಬದಲಾವಣೆಯಾಗಿದೆ. ಮತ್ತೆ ನಮಗೆ ಮಾರ್ಚ್ 8ರಂದು ಸಂಪುಟ ಸಭೆ ಹಾಗೂ ಮಾರ್ಚ್ 9ರಂದು ಚಾಮರಾಜನಗರದಲ್ಲಿ ಸಮಾವೇಶ ನಡೆಸಲು ನಿರ್ಧರಿಸಲಾಗಿದೆ" ಎಂದು ಜಿಲ್ಲಾಧಿಕಾರಿ ಶಿಲ್ಪಾನಾಗ್ ತಿಳಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ 5 ವರ್ಷ ಸಿಎಂ ಆಗಿರ್ತಾರೆ ಅಂತಾನೇ ನಾವೆಲ್ಲ ಭಾವಿಸಿದ್ದೇವೆ: ಸಚಿವ ಜಿ.ಪರಮೇಶ್ವರ್
"ಸಿಎಂಗೆ ಅನಾರೋಗ್ಯ ಉಂಟಾದ ಹಿನ್ನೆಲೆಯಲ್ಲಿ ಸಂಪುಟ ಸಭೆ ಮುಂದೂಡಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸಿಎಂ ಅವರನ್ನು ಭೇಟಿ ಮಾಡಿದ್ದು, ಚಾಮರಾಜನಗರದಲ್ಲಿ ಮಾ.8ರಂದು ಸಂಪುಟ ಸಭೆ, ಮಾ.9ರಂದು ಬೃಹತ್ ಸಮಾವೇಶ ನಡೆಸಲು ದಿನಾಂಕ ನಿಗದಿ ಮಾಡಿದ್ದಾರೆ. ತಯಾರಿ ಮಾಡಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಮಾಹಿತಿ ಕೊಟ್ಟಿದ್ದಾರೆ" ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.
ಈ ಬಾರಿಯಾದರೂ ನಡೆಯುತ್ತಾ ಸಂಪುಟ ಸಭೆ?: ಚಾಮರಾಜನಗರಕ್ಕೆ ಬಂದರೆ ಅಧಿಕಾರ ಹೋಗುತ್ತೆ ಎಂಬ ಭಯ ಈ ಹಿಂದೆ ರಾಜ್ಯದ ಬಹುತೇಕ ಮುಖ್ಯಮಂತ್ರಿಗಳಲ್ಲಿತ್ತು. ಆ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದ ಸಿಎಂ ಸಿದ್ದರಾಮಯ್ಯ ಸಾಕಷ್ಟು ಬಾರಿ ಜಿಲ್ಲೆಗೆ ಭೇಟಿ ನೀಡಿದ್ದಾರೆ. ಪದೇ ಪದೇ ದಿನಾಂಕ ಬದಲಾಗುತ್ತಿರುವುದ್ಯಾಕೆ? ಬಜೆಟ್ ಅಧಿವೇಶನ ಮಾರ್ಚ್ನಲ್ಲಿ ನಡೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಮುಂದೆ ನಿಗದಿಯಾಗಿರುವ ದಿನಾಂಕದಲ್ಲಾದರೂ ಸಚಿವ ಸಂಪುಟ ನಡೆಯುತ್ತಾ? ಎಂಬುದನ್ನು ಕಾದು ನೋಡಬೇಕಿದೆ.
ಇದನ್ನೂ ಓದಿ: ಮಾದಪ್ಪನ ಬೆಟ್ಟದಲ್ಲಿ ನಡೆಯಬೇಕಿದ್ದ ಸಂಪುಟ ಸಭೆ ಮತ್ತೆ ಮುಂದೂಡಿಕೆ; ಬದಲಾಗುತ್ತಲೇ ಇದೆ ದಿನಾಂಕ