ಬೆಂಗಳೂರು: ರ‍್ಯಾಪರ್ ಆಗಿ ಒಡಿಶಾದಲ್ಲಿ ಜನಪ್ರಿಯತೆ ಗಳಿಸಿದ್ದ ಅಭಿನವ್ ಸಿಂಗ್ ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಅತ್ಮಹತ್ಯೆ ಮಾಡಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಮೃತನ ಸಹೋದರ ಅಮಿತ್ ಸಾವನ್ ನೀಡಿದ ದೂರಿನ ಮೇರೆಗೆ ಅಸಹಜ ಸಾವು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಪತ್ನಿ ಕಿರುಕುಳದಿಂದ ಅಭಿನವ್ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ಪೋಷಕರು ಆರೋಪಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
32 ವರ್ಷದ ಅಭಿನವ್ ಕಾಡುಬೀಸನಹಳ್ಳಿಯ ಯುಟೇಪಿಯಾ ಅಪಾರ್ಟ್ಮೆಂಟ್ನ ನಾಲ್ಕನೇ ಮಹಡಿಯಲ್ಲಿ ವಾಸಿಸುತ್ತಿದ್ದರು. ಒಂದು ವಾರದ ಹಿಂದಷ್ಟೇ ಸಾಫ್ಟ್ವೇರ್ ಕಂಪೆನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದರು. ಫೆ. 9ರಂದು ಸ್ನೇಹಿತನೊಂದಿಗೆ ಊಟ ಮಾಡಿದ ಬಳಿಕ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆ ನಡೆಸಿದ ಮೃತದೇಹವನ್ನ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಮರಣಪತ್ರ ದೊರೆತಿಲ್ಲ. ವಾಸವಿದ್ದ ಫ್ಲ್ಯಾಟ್ ಅನ್ನು ಪರಿಶೀಲಿಸಲಾಗಿದೆ. ಯಾವ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ತಿಳಿದುಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ 9ರಂದು ಮಾರತ್ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಟೆಕ್ಕಿ ಅತುಲ್ ಸುಭಾಶ್ ಎಂಬವರು ಸುದೀರ್ಘ ಡೆತ್ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದರು. ಪತ್ನಿ ಹಾಗೂ ಆಕೆಯ ಮನೆಯವರು ಕಿರುಕುಳ ನೀಡುತ್ತಿರುವುದಾಗಿ ಅತುಲ್ ಆರೋಪಿಸಿದ್ದರು.
ಇದನ್ನೂ ಓದಿ: ಹಾಸನ: ಮುಖದ ಮೇಲೆ ಕಲ್ಲು ಎತ್ತಿಹಾಕಿ ಅಪರಿಚಿತ ಮಹಿಳೆಯ ಭೀಕರ ಕೊಲೆ