ಬೆಂಗಳೂರು : ರಕ್ಷಣಾ ಕ್ಷೇತ್ರದಲ್ಲಿ ಭವಿಷ್ಯದಲ್ಲಿ ಡ್ರೋನ್‌ಗಳು ಹೆಚ್ಚು ನಿರ್ಣಾಯಕ ಪಾತ್ರ ವಹಿಸಲಿವೆ ಎನ್ನುವುದು ಈಗಾಗಲೇ ಸಾಕಷ್ಟು ವೇದಿಕೆಗಳಲ್ಲಿ ಸಾಬೀತಾಗಿದೆ. ಭಾರತದಲ್ಲಿಯೂ ಡ್ರೋನ್ ಕ್ಷೇತ್ರದಲ್ಲಿ ಹೆಚ್ಚು ಆವಿಷ್ಕಾರಗಳ ನಡೆಯುತ್ತಿವೆ ಎಂಬುದಕ್ಕೆ ಏರೋ ಇಂಡಿಯಾ - 2025 ಸಾಕ್ಷಿಯಾಗಿದೆ. ಏರೋ ಇಂಡಿಯಾದಲ್ಲಿರುವ ಉತ್ಪನ್ನ ಪ್ರದರ್ಶನಗಳ ವೇದಿಕೆಯಲ್ಲಿ ಎಲ್ಲೆಡೆ ಡ್ರೋನ್‌ಗಳು ಗಮನ ಸೆಳೆಯುತ್ತಿವೆ.
ಆತ್ಮಾಹುತಿ ಬಾಂಬರ್ ರೀತಿ ಕೆಲಸ : ಅವುಗಳ ಪೈಕಿ ಏರೋ ಇಂಡಿಯಾ- 2025ನ ಐಡೆಕ್ಸ್ ಪೆವಿಲಿಯನ್‌ನಲ್ಲಿ 'ಆತ್ಮಾಹುತಿ ಬಾಂಬರ್' ಮಾದರಿಯಲ್ಲಿ ಕಾರ್ಯನಿರ್ವಹಿಸುವ ಡ್ರೋನ್‌ವೊಂದು ಹೆಚ್ಚು ಗಮನ ಸೆಳೆಯುತ್ತಿದೆ. ಚೆನ್ನೈ ಮೂಲದ ಹಿಲ್ಡ್ ಡಿಫೆನ್ಸ್ ಆ್ಯಂಡ್ ಏರೋಸ್ಪೇಸ್ ಲಿಮಿಟೆಡ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಟಾಲೋನ್ ಎಂಬ ಡ್ರೋನ್ ತನ್ನ ವಿಶಿಷ್ಠ ಗುಣದಿಂದಾಗಿ ಇತರೆ ಡ್ರೋನ್‌ಗಳ ನಡುವೆ ವಿಭಿನ್ನವಾಗಿ ನಿಂತಿದೆ. ಶತ್ರು ದೇಶದ, ಅನುಮಾನಾಸ್ಪದ ಮಾನವರಹಿತ ವೈಮಾನಿಕ ವಾಹನಗಳು, ಡ್ರೋನ್‌ಗಳು, ಹೆಲಿಕಾಪ್ಟರ್‌ಗಳು ಸೇರಿದಂತೆ ಆಕಾಶದಲ್ಲಿ ತೇಲುವ ಕಾಯಗಳನ್ನು ಹೊಡೆದುರುಳಿಸುವ ಸಾಮರ್ಥ್ಯದೊಂದಿಗೆ ಟಾಲೋನ್ ಅನ್ನು ಅಭಿವೃದ್ಧಿಪಡಿಸಲಾಗಿದೆ. ಕೃತಕ ಬುದ್ಧಿಮತ್ತೆಯೊಂದಿಗೆ ಕಾರ್ಯನಿರ್ವಹಿಸುವ ಟ್ಯಾಲೋನ್ ಆಗಸದಲ್ಲಿನ ಅನುಮಾನಾಸ್ಪದ ಕಾಯಗಳ ಸಮೀಪಕ್ಕೆ ಹೋಗಿ ಅಥವಾ ಡಿಕ್ಕಿ ಹೊಡೆಯುವ ಮೂಲಕ ತನ್ನನ್ನು ತಾನೇ ಸ್ಫೋಟಿಸಿಕೊಳ್ಳಲಿದೆ. ಆ ಮೂಲಕ ಸಂಭವನೀಯ ಅನಾಹುತವನ್ನು ತಪ್ಪಿಸಲಿದೆ.
ಐದು ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಸ್ವಯಂಚಾಲಿತ ಕಾರ್ಯ : ಸ್ವಯಂಚಾಲಿತವಾಗಿ ಅಥವಾ ದೂರದಿಂದ ನಿಯಂತ್ರಿಸುವ ಮೂಲಕ ಕಾರ್ಯನಿರ್ವಹಿಸುವ ಟ್ಯಾಲೋನ್, 5 ಕಿ.ಮೀ ವ್ಯಾಪ್ತಿಯಲ್ಲಿ ಹಾರಾಡುವ ವ್ಯಾಪ್ತಿಯನ್ನು ಹೊಂದಿದೆ.
ಎಲ್ಲಾ ರೀತಿಯ ಹವಾಮಾನದಲ್ಲೂ ಕಾರ್ಯಾಚರಣೆ : ಮೈನಸ್ 10 ಡಿಗ್ರಿಯಿಂದ 50 ಡಿಗ್ರಿ ಉಷ್ಣತೆಯಿರುವ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುವ ಕ್ಷಮತೆಯನ್ನು ಟ್ಯಾಲೋನ್ ಹೊಂದಿದೆ. ಮತ್ತು ಗಂಟೆಗೆ 200 ಕಿ.ಮೀ ವೇಗದಲ್ಲಿ ಸಾಗಬಲ್ಲ ಈ ಡ್ರೋನ್ ಒಂದು ವೇಳೆ ತನ್ನ ಗುರಿ ತಪ್ಪಿದರೆ ಮತ್ತೆ ಸ್ವಸ್ಥಾನಕ್ಕೆ ಮರಳಬಲ್ಲ ವಿಶೇಷ ಗುಣವನ್ನು ಸಹ ಹೊಂದಿದೆ.
ಬೇಹುಗಾರಿಕೆ, ಮಾದಕ ಪದಾರ್ಥಗಳ ನಿಯಂತ್ರಣ : ಶತ್ರುರಾಷ್ಟ್ರಗಳು ನಮ್ಮ ಗಡಿಯೊಳಗೆ ಬೇಹುಗಾರಿಕೆ ಮಾಡಲು ಬಳಸುವ ಡ್ರೋನ್ ಮತ್ತಿತರ ಮಾನವರಹಿತ ವೈಮಾನಿಕ ವಾಹನಗಳನ್ನ ಹೊಡೆದುರುಳಿಸಲು ಟ್ಯಾಲೋನ್ ಡ್ರೋನ್ ಅನ್ನು ಬಳಸಬಹುದು. ಅಲ್ಲದೆ ಸ್ಫೋಟಕಗಳು, ಮಾದಕ ಪದಾರ್ಥಗಳನ್ನು ಗಡಿ ದಾಟಿಸಲು ಯತ್ನಿಸುವ ಶತ್ರುಗಳ ಪ್ರಯತ್ನಗಳನ್ನು ಪರಿಣಾಮಕಾರಿಯಾಗಿ ವಿಫಲಗೊಳಿಸಲು ಇದು ಹೆಚ್ಚು ಸಹಕಾರಿಯಾಗಲಿದೆ.
ಇದನ್ನೂ ಓದಿ: ನೀರಿನಾಳದ ಕಾರ್ಯಾಚರಣೆಗಳಿಗೆ ನೆರವಾಗಲಿದೆ SEGROV ಡ್ರೋನ್: ವೈಶಿಷ್ಟ್ಯಗಳಿವು