ನವದೆಹಲಿ: ಕುಕಿ ಮತ್ತು ಮೈಥೇಯಿ ಸಮುದಾಯಗಳ ಮಧ್ಯೆ ವರ್ಷಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಸಿಲುಕಿರುವ ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಗುರುವಾರದಿಂದ ಜಾರಿಯಾಗಿದೆ.
ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರು ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಲ್ಕು ದಿನಗಳ ನಂತರ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಆದೇಶ ಮಾಡಿದ್ದಾರೆ.
President's Rule imposed in Manipur.
— ANI (@ANI) February 13, 2025
Manipur CM N Biren Singh resigned from his post on 9th February. https://t.co/vGEOV0XIrt pic.twitter.com/S9wymA13ki
ಸದ್ಯ ಅಸ್ತಿತ್ವದಲ್ಲಿರುವ ಸರ್ಕಾರ ಮತ್ತು ವಿಧಾನಸಭೆಯನ್ನು ಅಮಾನತಿನಲ್ಲಿಡಲಾಗುವುದು. ಸಂವಿಧಾನದ ಪ್ರಕಾರ, ರಾಜ್ಯದಲ್ಲಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ ಎಂದು ರಾಷ್ಟ್ರಪತಿಗಳು ಅಭಿಪ್ರಾಯಪಟ್ಟಿದ್ದಾಗಿ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆಯಲ್ಲಿದೆ.
ರಾಜ್ಯದಲ್ಲಿ ರಾಜಕೀಯ ಅಸ್ತಿರತೆ ಉಂಟಾಗಿದೆ. ಹೀಗಾಗಿ, ಸಂವಿಧಾನದ 356ನೇ ವಿಧಿಯಡಿ ದತ್ತವಾಗಿರುವ ಅಧಿಕಾರವನ್ನು ಬಳಸಿ, ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರಲಾಗುತ್ತಿದೆ. ರಾಜ್ಯ ಸರ್ಕಾರ ನಿರ್ವಹಿಸಬೇಕಿದ್ದ ಎಲ್ಲಾ ಕಾರ್ಯ, ಅಧಿಕಾರವನ್ನು ಇಂದಿನಿಂದ ಆ ರಾಜ್ಯದ ರಾಜ್ಯಪಾಲರು ವಹಿಸಿಕೊಳ್ಳಲಿದ್ದಾರೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಬಿರೇನ್ ಸಿಂಗ್ ರಾಜೀನಾಮೆ: ಮಣಿಪುರದಲ್ಲಿ ವರ್ಷಗಳಿಂದ ಎರಡು ಬುಡಕಟ್ಟು ಸಮುದಾಯಗಳ ಮಧ್ಯೆ ಸಂಘರ್ಷ ನಡೆಯುತ್ತಿದೆ. ಇದರಿಂದ 200ಕ್ಕೂ ಅಧಿಕ ಜನರು ಸಾವಿಗೀಡಾಗಿದ್ದಾರೆ. ಪರಿಸ್ಥಿತಿ ಹತೋಟಿಗೆ ತರಲು ಬಿಜೆಪಿ ನೇತೃತ್ವದ ಸರ್ಕಾರ ಪ್ರಯತ್ನಿಸಿದರೂ ಯಾವುದೇ ಪ್ರಯೋಜವಾಗಿರಲಿಲ್ಲ.
ಜೊತೆಗೆ, ಸಂಘರ್ಷಕ್ಕೆ ಮುಖ್ಯಮಂತ್ರಿ ಎನ್.ಬಿರೇನ್ ಸಿಂಗ್ ಅವರೇ ಕಾರಣ ಎಂಬ ಆಡಿಯೋ ವೈರಲ್ ಆಗಿದ್ದು, ಈ ಕುರಿತು ಸುಪ್ರೀಂ ಕೋರ್ಟ್ಗೆ ದೂರು ನೀಡಲಾಗಿದೆ. ಪ್ರಕರಣ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದ್ದು, ಅದಕ್ಕೂ ಮೊದಲು ಇದೇ ಫೆಬ್ರವರಿ 9ರಂದು ಮುಖ್ಯಮಂತ್ರಿ ಸ್ಥಾನಕ್ಕೆ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದಾರೆ.
ಬಿಜೆಪಿ ಮತ್ತು ಅದರ ಮಿತ್ರ ಪಕ್ಷಗಳ ನಡುವೆ ನೂತನ ಸಿಎಂ ಆಯ್ಕೆಗೆ ಒಮ್ಮತ ಮೂಡುತ್ತಿಲ್ಲ. ರಾಜೀನಾಮೆ ನೀಡಿರುವ ಬಿರೇನ್ ಸಿಂಗ್ ಅವರಿಗೆ 60 ಶಾಸಕರ ಪೈಕಿ 20 ಜನರು ಮಾತ್ರ ಬೆಂಬಲ ನೀಡಿದ್ದರು. ಮಿತ್ರಪಕ್ಷಗಳು ಕೂಡ ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಇದನ್ನೂ ಓದಿ: ಮಣಿಪುರ ಸಿಎಂ ಬಿರೇನ್ ಸಿಂಗ್ ದಿಢೀರ್ ರಾಜೀನಾಮೆ