ನವದೆಹಲಿ: ಈ ಬಾರಿಯ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಫೆ.15ರಂದು ದುಬೈಗೆ ತೆರಳಲಿರುವ ಭಾರತೀಯ ಕ್ರಿಕೆಟ್ ಆಟಗಾರರೊಂದಿಗೆ ಅವರ ಕುಟುಂಬಸ್ಥರಾರೂ ಪ್ರವಾಸ ಬೆಳೆಸುತ್ತಿಲ್ಲ. ಆಟಗಾರರೊಂದಿಗೆ ಕುಟುಂಬಸ್ಥರು ತೆರಳುವಂತಿಲ್ಲ ಎಂಬ ಬಿಸಿಸಿಐನ ಹೊಸ ನಿಯಮ ಇದೇ ಮೊದಲ ಬಾರಿಗೆ ಜಾರಿಗೆ ಬರಲಿದೆ.
ಭಾರತದ ವೇಳಾಪಟ್ಟಿ ಹೀಗಿದೆ: ಭಾರತ ತಂಡ ಫೆಬ್ರವರಿ 20ರಂದು ಬಾಂಗ್ಲಾದೇಶದ ವಿರುದ್ಧ ದುಬೈನಲ್ಲಿ ತನ್ನ ಪ್ರಥಮ ಪಂದ್ಯ ಆಡಲಿದೆ. ನಂತರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಫೆಬ್ರವರಿ 23 ಮತ್ತು ನ್ಯೂಜಿಲೆಂಡ್ ವಿರುದ್ಧ ಮಾರ್ಚ್ 2ರಂದು ಪಂದ್ಯಗಳನ್ನು ಆಡಲಿದೆ. ರೋಹಿತ್ ಶರ್ಮಾ ನೇತೃತ್ವದ ತಂಡವು ದುಬೈನಲ್ಲಿ ತನ್ನ ಪಂದ್ಯಗಳನ್ನು ಆಡಲಿದ್ದು, ಟ್ರೋಫಿಯ ಉಳಿದ ಪಂದ್ಯಗಳು ಫೆಬ್ರವರಿ 19ರಿಂದ ಪಾಕಿಸ್ತಾನದಲ್ಲಿ ಮೂರು ಸ್ಥಳಗಳಲ್ಲಿ ನಡೆಯಲಿವೆ.
ಬಿಸಿಸಿಐ ಹೊಸ ನಿಯಮವೇನು?: ಮಾರ್ಚ್ 9ರಂದು ನಡೆಯಲಿರುವ ಫೈನಲ್ ಪಂದ್ಯವನ್ನು ಗಣನೆಗೆ ತೆಗೆದುಕೊಂಡರೂ ಪ್ರವಾಸದ ಅವಧಿ ಕೇವಲ ಮೂರು ವಾರಗಳಾಗಿರುವುದರಿಂದ, ಆಟಗಾರರು ತಮ್ಮ ಜೊತೆಗೆ ಕುಟುಂಬಸ್ಥರನ್ನು ಕರೆದೊಯ್ಯಲು ಬಿಸಿಸಿಐ ಅವಕಾಶ ನೀಡುವುದಿಲ್ಲ. ಹೊಸ ನೀತಿಯ ಪ್ರಕಾರ, 45 ದಿನಗಳು ಅಥವಾ ಅದಕ್ಕಿಂತ ಹೆಚ್ಚಿನ ಪ್ರವಾಸದ ಸಮಯದಲ್ಲಿ ಮಾತ್ರ ಕುಟುಂಬದವರು ಗರಿಷ್ಠ ಎರಡು ವಾರಗಳವರೆಗೆ ಆಟಗಾರರೊಂದಿಗೆ ಇರಲು ಅವಕಾಶವಿದೆ.
"ಈ ವಿಷಯದಲ್ಲಿ ಮುಂದಿನ ದಿನಗಳಲ್ಲಿ ಏನಾದರು ಬದಲಾವಣೆಯಾದರೂ ಆಗಬಹುದು. ಆದರೆ ಈಗಿನಂತೆ, ಆಟಗಾರರು ಈ ಪ್ರವಾಸಕ್ಕೆ ತಮ್ಮ ಹೆಂಡತಿ ಅಥವಾ ಸಂಗಾತಿಯನ್ನು ಕರೆದುಕೊಂಡು ಹೋಗುವ ಸಾಧ್ಯತೆಯಿಲ್ಲ. ಹಿರಿಯ ಆಟಗಾರರೊಬ್ಬರು ಈ ಬಗ್ಗೆ ವಿಚಾರಿಸಿದಾಗ ನಿಯಮಾವಳಿಗಳನ್ನು ಪಾಲಿಸಲಾಗುವುದು ಎಂದು ಅವರಿಗೆ ತಿಳಿಸಲಾಗಿದೆ" ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ.
"ಪ್ರವಾಸವು ಒಂದು ತಿಂಗಳಿಗಿಂತ ಕಡಿಮೆ ಅವಧಿಯದ್ದಾಗಿರುವುದರಿಂದ ಆಟಗಾರರು ಕುಟುಂಬಸ್ಥರನ್ನು ಕರೆದೊಯ್ಯಲು ಅವಕಾಶವಿಲ್ಲ. ಆದರೆ ಈ ನಿಯಮದಲ್ಲಿ ವಿನಾಯಿತಿ ನೀಡಿದರೂ, ತಾವು ಕರೆದುಕೊಂಡು ಹೋಗುವ ಕುಟುಂಬಸ್ಥರ ವೆಚ್ಚವನ್ನು ಆಟಗಾರರೇ ಭರಿಸಬೇಕಾಗುತ್ತದೆ" ಎಂದು ಅವರು ಹೇಳಿದರು.
"ವಿದೇಶಿ ಪ್ರವಾಸಗಳಲ್ಲಿ 45 ದಿನಗಳಿಗಿಂತ ಹೆಚ್ಚು ಕಾಲ ಭಾರತದಿಂದ ಹೊರಗಿರುವ ಆಟಗಾರರು ಪ್ರತಿ ಸರಣಿಯ ಸಮಯದಲ್ಲಿ ಎರಡು ವಾರಗಳ ಅವಧಿಗೆ ತಮ್ಮ ಸಂಗಾತಿ ಹಾಗೂ ಮಕ್ಕಳನ್ನು ತಮ್ಮ ಜೊತೆಗೆ ಇಟ್ಟುಕೊಳ್ಳಬಹುದು" ಎಂದು ಬಿಸಿಸಿಐನ ಹೊಸ ನಿಯಮಾವಳಿ ಹೇಳುತ್ತದೆ.
"ಈ ನೀತಿಯಿಂದ ಯಾವುದೇ ವಿನಾಯಿತಿ ಪಡೆಯಲು ಕೋಚ್, ನಾಯಕ ಮತ್ತು ಆಪರೇಶನ್ಸ್ ಜಿಎಂ ಅವರಿಂದ ಪೂರ್ವಾನುಮತಿ ಪಡೆಯಬೇಕಾಗುತ್ತದೆ. ಸಂದರ್ಶನದ ಅವಧಿಯ ಹೊರಗಿನ ಹೆಚ್ಚುವರಿ ವೆಚ್ಚಗಳನ್ನು ಬಿಸಿಸಿಐ ಭರಿಸುವುದಿಲ್ಲ. ಆದಾಗ್ಯೂ, ಜೂನ್-ಜುಲೈ-ಆಗಸ್ಟ್ನಲ್ಲಿ ಇಂಗ್ಲೆಂಡ್ನಲ್ಲಿ ನಡೆಯುವ ಐದು ಟೆಸ್ಟ್ ಪ್ರವಾಸದಲ್ಲಿ ಐದೂ ಪಂದ್ಯಗಳ ಸಮಯದಲ್ಲಿ ಆಟಗಾರರೊಂದಿಗೆ ಕುಟುಂಬಸ್ಥರು ಇರಲು ಅವಕಾಶ ನೀಡಲಾಗುವುದು. ಪ್ರವಾಸದ ಸಮಯದಲ್ಲಿ ಅವರ ಎರಡು ವಾರಗಳ ವಾಸ್ತವ್ಯದ ಪಟ್ಟಿಯನ್ನು ನಂತರ ರೂಪಿಸಲಾಗುವುದು." ಎಂದು ಅಧಿಕಾರಿ ತಿಳಿಸಿದರು.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿಯಿಂದ ಬುಮ್ರಾ, ಜೈಸ್ವಾಲ್ ಔಟ್: ಕನ್ನಡಿಗನಿಗೆ ಲಕ್ಕಿ ಚಾನ್ಸ್!
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ 2025: ಯಾವ ಪಂದ್ಯಕ್ಕೆ ಯಾರು ಅಂಪೈರ್, ರೆಫರಿ?