ಹಾಸನ: ಅಪರಿಚಿತ ಮಹಿಳೆ ಮೇಲೆ ಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿರುವ ಘಟನೆ ನಗರದ ರೈಲ್ವೆ ನಿಲ್ದಾಣದ ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ನಡೆದಿದೆ.
ಮೃತ ಮಹಿಳೆಯ ಗುರುತು ಪತ್ತೆಯಾಗಿಲ್ಲ. ಸುಮಾರು 40 ವರ್ಷ ವಯಸ್ಸಿನ ಮಹಿಳೆಯಾಗಿದ್ದಾರೆ. ರಾಜಘಟ್ಟದ ರೈಲು ನಿಲ್ದಾಣದ ಪಕ್ಕದಲ್ಲಿ ರೈಲ್ವೆ ಇಲಾಖೆಯ ಕಾಮಗಾರಿ ನಡೆಯುತ್ತಿದ್ದು, ಕಟ್ಟಡದ ಒಳಗಡೆ ಮಹಿಳೆಯ ಮೃತದೇಹ ಪತ್ತೆಯಾಗಿದೆ. ಮಹಿಳೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ಕೆಲಸಕ್ಕೆ ಬಂದ ಕಾರ್ಮಿಕರು ಕಾಮಗಾರಿ ನಡೆಯುತ್ತಿದ್ದ ಕಟ್ಟಡದ ಬಳಿ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ಯಾವುದೇ ಗುರುತು ಸಿಗಬಾರದು ಎಂಬ ಉದ್ದೇಶದಿಂದ ಉದ್ದೇಶದಿಂದ ಆಕೆಯ ಮುಖದ ಮೇಲೆ ಕಲ್ಲು ಎತ್ತಿಹಾಕಿ ಕೊಲೆ ಮಾಡಲಾಗಿದೆ.
ಸ್ಥಳಕ್ಕೆ ಹಾಸನ ನಗರದ ಬಡಾವಣೆ ಠಾಣೆ ಪೊಲೀಸರು ಮತ್ತು ರೈಲ್ವೆ ಎಸ್ಪಿ ಸೌಮ್ಯಲತಾ ಮತ್ತು ಸಿಬ್ಬಂದಿ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ.
ರೈಲ್ವೆ ಎಸ್ಪಿ ಮಾಹಿತಿ: ''ರೈಲ್ವೆಯ ನಿರ್ಮಾಣ ಹಂತದ ಕಟ್ಟಡದಲ್ಲಿ ಮಹಿಳೆಯ ಮೃತದೇಹ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ಮುಖಕ್ಕೆ ಕಲ್ಲಿನಿಂದ ಜಜ್ಜಲಾಗಿದೆ. ಗುರುತು ಸಿಗಬಾರದೆಂದು ಹೀಗೆ ಮಾಡಲಾಗಿದೆ. ಮಹಿಳೆ ಯಾರೆಂಬುದು ಇನ್ನೂ ಗುರುತು ಪತ್ತೆಯಾಗಿಲ್ಲ. ನಿರ್ಮಾಣ ಹಂತದ ಕಾಮಗಾರಿ ಆಗಿರುವುದರಿಂದ ಯಾವುದೇ ಸೆಕ್ಯೂರಿಟಿ ಗಾರ್ಡ್ಗಳು ಕಾರ್ಯ ನಿರ್ವಹಿಸುತ್ತಿರಲಿಲ್ಲ. ಈ ಬಗ್ಗೆ ತನಿಖೆ ನಡೆಯುತ್ತಿದೆ'' ಎಂದು ರೈಲ್ವೆ ಎಸ್ಪಿ ಸೌಮ್ಯಲತಾ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಹಾಸನ: ಜಾನುವಾರು ಹುಡುಕಲು ಹೋದ ಮಹಿಳೆ ಕಾಡಾನೆ ದಾಳಿಗೆ ಬಲಿ