ಹಾಸನ : ಜಾನುವಾರುಗಳನ್ನು ಹುಡುಕಲು ಹೋಗಿದ್ದ ಮಹಿಳೆಯೊಬ್ಬರ ಮೇಲೆ ಕಾಡಾನೆ ದಾಳಿ ಮಾಡಿ ಸಾಯಿಸಿರುವ ಘಟನೆ ಜಿಲ್ಲೆಯ ಬೇಲೂರು ತಾಲೂಕಿನ ಬೆಳ್ಳಾವರ ಗ್ರಾಮದಲ್ಲಿ ಗುರುವಾರ (ಇಂದು) ಬೆಳಗ್ಗೆ ನಡೆದಿದೆ.
ಕನಗುಪ್ಪೆ ಗ್ರಾಮದ ದ್ಯಾವಮ್ಮ (60) ಕಾಡಾನೆ ದಾಳಿಯಿಂದ ಸಾವನ್ನಪ್ಪಿರುವ ಮಹಿಳೆ. ದ್ಯಾವಮ್ಮ ಬೆಳಗ್ಗೆ ಜಾನುವಾರುಗಳನ್ನು ಹುಡುಕಲು ಹೋಗಿದ್ದು, ಬಳಿಕ ಮನೆಗೆ ಮರಳಿರಲಿಲ್ಲ. ಕುಟುಂಬಸ್ಥರು ಹುಡುಕಾಟ ನಡೆಸಿದಾಗ ಅವರು ಮುಳ್ಳಿನ ಪೊದೆಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮಹಿಳೆಯ ದೇಹದ ಮೇಲಿನ ಗಾಯದ ಗುರುತು ಮತ್ತು ಸ್ಥಳದಲ್ಲಿ ಆನೆಯ ಹೆಜ್ಜೆ ಗುರುತು ಕಂಡುಬಂದಿದೆ. ಕಾಡಾನೆ ದಾಳಿಯಿಂದಲೇ ದ್ಯಾವಮ್ಮ ಮೃತಪಟ್ಟಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಮಹಿಳೆಯ ಶವ ಮನೆಯ ಸಮೀಪವೇ ಕಂಡುಬಂದಿದೆ.
ಘಟನೆಯ ಮಾಹಿತಿ ತಿಳಿದ ತಕ್ಷಣ ಅರೇಹಳ್ಳಿ ಠಾಣೆ ಪೊಲೀಸರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳ ಮೇಲೆ ಆಕ್ರೋಶಗೊಂಡ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ವಾಗ್ವಾದ ನಡೆಸಿದರು. ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸಪಟ್ಟರು.
ಮೈಸೂರಲ್ಲಿ ಕಾಡಾನೆ ದಾಳಿಗೆ ಯುವಕ ಬಲಿ : ಇನ್ನೊಂದೆಡೆ, ಜಮೀನಿಗೆ ಹೋಗಿದ್ದ ಯುವಕನ ಮೇಲೆ ಕಾಡಾನೆ ದಾಳಿಗೆ ಬಲಿಯಾದ ಘಟನೆ ಹೆಚ್.ಡಿ. ಕೋಟೆ ಸರಗೂರು ತಾಲೂಕಿನ ಗದ್ದೆ ಹಳ್ಳ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ನಡೆದಿದೆ. ಯುವಕ ಅವಿನಾಶ್ (21) ಎಂಬಾತನೆ ಕಾಡಾನೆ ದಾಳಿಯಿಂದ ಮೃತಪಟ್ಟವರು.
ಇದನ್ನೂ ಓದಿ: ಮೈಸೂರು; ಜಮೀನಿಗೆ ಹೋಗಿದ್ದ ಯುವಕ ಕಾಡಾನೆ ದಾಳಿಗೆ ಬಲಿ
ಜಮೀನಿಗೆ ಹೋಗಿದ್ದ ಸಂದರ್ಭದಲ್ಲಿ ಕಾಡಾನೆಗಳ ಗುಂಪು ಏಕಾಏಕಿ ಯುವಕನ ಮೇಲೆ ದಾಳಿ ಮಾಡಿದೆ. ಇದರಿಂದ ತೀವ್ರ ಗಾಯಗೊಂಡ ಯುವಕ ಜಮೀನಿನಲ್ಲೇ ಮೃತಪಟ್ಟಿದ್ದಾನೆ. ಸ್ಥಳದಲ್ಲಿ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು. ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳನ್ನು ಮೃತನ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ತರಾಟೆ ತೆಗೆದುಕೊಂಡರು. ಸ್ಥಳದಲ್ಲಿ ಗ್ರಾಮಸ್ಥರು ಹಾಗೂ ಅರಣ್ಯಾಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಆನೆಗಳನ್ನು ಕಾಡಿಗೆ ಅಟ್ಟಿದ್ದಾರೆ.
ಇದನ್ನೂ ಓದಿ: ಹಾವೇರಿ: 50ಕ್ಕೂ ಹೆಚ್ಚು ಆಡು, ಕುರಿಗಳ ಬಲಿ ಪಡೆದಿದ್ದ ಚಿರತೆ ಸೆರೆ