ಹಾಸನ (ಬೇಲೂರು): ಹೊಸ ವರ್ಷದ ಆಚರಣೆ ಮಾಡುವ ಸಂದರ್ಭದಲ್ಲಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಹಾಸನದ ಜಿಲ್ಲೆಯಲ್ಲಿ ನಡೆದಿದೆ.
ಬೇಲೂರು ತಾಲೂಕಿನ ಮಲಸಾವರ ಗ್ರಾಮದ ಲಕ್ಷ್ಮಿಪುರ ಬಡಾವಣೆಯ ನಿವಾಸಿಗಳಾದ ಅಜಿತ್ (30 ) ಹಾಗೂ ಅಶೋಕ್ (35) ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದವರು. ಮಂಗಳವಾರ ರಾತ್ರಿ ಹೊಸ ವರ್ಷದ ಆಚರಣೆಗೆ ಬೇಲೂರಿನ ಮಲಸಾವರ ಗ್ರಾಮದ ಲಕ್ಷ್ಮಿಪುರ ಕೆರೆ ಏರಿಯ ಮೇಲೆ ಯುವಕರು ಪಾರ್ಟಿ ಮಾಡಿದ್ದಾರೆ. ಆದರೆ, ಬುಧವಾರ ಬೆಳಿಗ್ಗೆಯಾದರೂ ಮನೆಗೆ ಯುವಕರು ಬಾರದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ಈ ವೇಳೆ ಕೆರೆಯ ಏರಿಯ ಮೇಲೆ ವಾಹನ, ಚಪ್ಪಲಿಗಳು ಕಂಡು ಬಂದಿವೆ.
ಈ ಬಗ್ಗೆ ಸಂಶಯಗೊಂಡ ಗ್ರಾಮಸ್ಥರು ಅಗ್ನಿಶಾಮಕ ಹಾಗೂ ಪೊಲೀಸ್ ಠಾಣೆಗೆ ಕರೆ ಮಾಡಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ, ಕೆರೆಯಲ್ಲಿ ಶೋಧಕಾರ್ಯ ನಡೆಸಿದ್ದು, ಸಂಜೆ ವೇಳೆಗೆ ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ಈ ಬಗ್ಗೆ ಅರೇಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಘಟನೆ ಕುರಿತಂತೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ದಾವಣಗೆರೆಯಲ್ಲಿ ಪಾರ್ಟಿ ಬಳಿಕ ಅಪಘಾತದಲ್ಲಿ ಯುವಕ ಸಾವು: ಇನ್ನೊಂದೆಡೆ, ಹೊಸ ವರ್ಷಾಚರಣೆ ವೇಳೆ ಸಂಭವಿಸಿದ ಅಪಘಾತದಲ್ಲಿ ಮನೆಗೆ ಆಧಾರವಾಗಿದ್ದ ಯುವಕ ಪ್ರಾಣ ಕಳೆದುಕೊಂಡಿದ್ದ. ಪಾರ್ಟಿ ಮಾಡಿ ಮನೆಗೆ ತೆರಳುತ್ತಿದ್ದ ಯುವಕನ ಬೈಕ್ ಹಾಗೂ ಕಾರಿನ ನಡುವೆ ನಡೆದ ಅಪಘಾತದಲ್ಲಿ ಆತ ಸ್ಥಳದಲ್ಲೇ ಕೊನೆಯುಸಿರೆಳೆದ ಘಟನೆ ನಗರದ ನೂತನ್ ಕಾಲೇಜು ಮುಂಭಾಗ ಮಂಗಳವಾರ ತಡರಾತ್ರಿ ಸಂಭವಿಸಿತ್ತು.
ಎದುರಿನಿಂದ ಬಂದ ಕಾರು ಹಾಗೂ ಬೈಕ್ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ದಾವಣಗೆರೆಯ ನಿಟ್ಟುವಳ್ಳಿಯ ಯುವಕ ಕಾರ್ತಿಕ್ (19) ಸ್ಥಳದಲ್ಲೇ ಸಾವನಪ್ಪಿದ್ದ. ಬೈಕ್ ಹಿಂಬದಿ ಸವಾರ ಕೂಡ ಗಂಭೀರವಾಗಿ ಗಾಯಗೊಂಡಿದ್ದಾನೆ. ಘಟನೆ ಬಗ್ಗೆ ದಾವಣಗೆರೆ ದಕ್ಷಿಣ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಶಿವಮೊಗ್ಗ : ಹೊಸ ವರ್ಷಾಚರಣೆ ಮುಗಿಸಿ ಬರುವಾಗ ಅಪಘಾತ, ಬೈಕ್ ಸವಾರ ಸಾವು