ನವದೆಹಲಿ/ ನ್ಯೂಯಾರ್ಕ್ : ಪ್ರಧಾನಿ ನರೇಂದ್ರ ಮೋದಿ ಸರ್ಕಾರಕ್ಕೆ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಸುಮಾರು 175 ಜನರ ಸಾವಿಗೆ ಕಾರಣವಾದ 2008 ರ 26/11 ಮುಂಬೈ ಭಯೋತ್ಪಾದಕ ದಾಳಿಯ ಸಂಚುಕೋರ ಪಾಕಿಸ್ತಾನ - ಕೆನಡಾ ಮೂಲದ ತಹವ್ವುರ್ ರಾಣಾನನ್ನು ಅಮೆರಿಕ ಶೀಘ್ರದಲ್ಲೇ ಭಾರತಕ್ಕೆ ಹಸ್ತಾಂತರಿಸುವ ಕಾಲ ಸನ್ನಿಹಿತವಾಗಿದೆ.
ಮುಂಬೈ ಉಗ್ರ ದಾಳಿ ಪ್ರಕರಣದಲ್ಲಿ ಬೇಕಾಗಿರುವ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಿ ಎಂದು ಭಾರತ ಅಮೆರಿಕಕ್ಕೆ ಮನವಿ ಮಾಡಿತ್ತು. ಅಮೆರಿಕದ ಬಂಧನದಲ್ಲಿರುವ ತಹವ್ವುರ್ ರಾಣಾ ತನ್ನನ್ನು ಭಾರತಕ್ಕೆ ಕೊಡದಂತೆ ಮಾಡಿದ್ದ ಅರ್ಜಿಯನ್ನು ಅಲ್ಲಿನ ಫೆಡರಲ್ ನ್ಯಾಯಾಲಯವು ತಿರಸ್ಕರಿಸಿತ್ತು. ಇದರ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಕ್ಯಾಲಿಫೋರ್ನಿಯಾದ ಒಂಬತ್ತನೇ ಸರ್ಕ್ಯೂಟ್ ಮೇಲ್ಮನವಿ ನ್ಯಾಯಾಲಯವೂ ತಿರಸ್ಕರಿಸಿದೆ.
ಆರೋಪಿ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಯಾವುದೇ ಅಡ್ಡಿ ಇಲ್ಲ ಎಂದು ಕೋರ್ಟ್ ಇದೇ ವೇಳೆ ಹೇಳಿದೆ. ಇದರ ಬೆನ್ನಲ್ಲೇ, ರಾಣಾ ಭಾರತದ ಸುಪರ್ದಿಗೆ ಸಿಗುವ ಕಾಲ ಸನಿಹವಾಗಿದೆ. ಗಡೀಪಾರು ಪ್ರಕ್ರಿಯೆಗಳು ಚುರುಕು ಪಡೆದಿವೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಮೂಲಗಳು ತಿಳಿಸಿವೆ.
ಯಾರೀ ತಹವ್ವುರ್ ರಾಣಾ?: ಪಾಕಿಸ್ತಾನದ ಮೂಲದ ತಹವ್ವುರ್ ರಾಣಾ ಕೆನಡಾದಲ್ಲಿ ನೆಲೆಸಿದ್ದಾನೆ. ಈತನ ವಿರುದ್ಧ ಭಾರತ, ಅಮೆರಿಕ ಪೊಲೀಸರು ಹಲವು ಕೇಸ್ ದಾಖಲಿಸಿದ್ದಾರೆ. ಡ್ಯಾನಿಷ್ ಪ್ರಕರಣ, ಲಷ್ಕರ್ ಭಯೋತ್ಪಾದನಾ ಸಂಘಟನೆಗೆ ಬೆಂಬಲ ಹಾಗೂ 26/11 ರ ದಾಳಿಯ ಹಿಂದೆ ಸಂಚು ಸೇರಿ ಪ್ರಮುಖ ಮೂರು ಆರೋಪಗಳು ಈತನ ಮೇಲಿವೆ. ಇದರಲ್ಲಿ ಮೊದಲೆರಡು ಪ್ರಕರಣಗಳಲ್ಲಿ ಅಪರಾಧಿ ಎಂದು ಘೋಷಿತನಾಗಿ 14 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದಾನೆ.
ಕೆನಡಾ ಪ್ರಜೆಯಾಗಿರುವ ಈತನನ್ನು ಭಾರತದ ಮನವಿಯ ಮೇರೆಗೆ ಅಮೆರಿಕ ಪೊಲೀಸರು ಬಂಧಿಸಿದ್ದರು. ಬಳಿಕ ಆತನನ್ನು ತನಗೆ ಹಸ್ತಾಂತರಿಸುವಂತೆ ಕೋರಿತ್ತು. ಮುಂಬೈ ದಾಳಿ ಹಿಂದೆ ಆತನ ಕೈವಾಡವಿದೆ ಎಂದು ಅಮೆರಿಕ ಕೋರ್ಟ್ಗೆ ಮನವಿ ಮಾಡಿತ್ತು. ಇದನ್ನು ಅಂಗೀಕರಿಸಿರುವ ಅಲ್ಲಿನ ಕೋರ್ಟ್ನ ತ್ರಿಸದಸ್ಯ ಪೀಠವು, ರಾಣಾ ಜೈಲು ಶಿಕ್ಷೆಗೆ ಗುರಿಯಾಗಿದ್ದರೂ, ಆತನನ್ನು ಭಾರತಕ್ಕೆ ಹಸ್ತಾಂತರಿಸಲು ಯಾವುದೇ ಸಮಸ್ಯೆ ಇಲ್ಲ. ಭಾರತ ಮತ್ತು ಯುಎಸ್ ನಡುವಿನ 1997 ರ ಹಸ್ತಾಂತರ ಒಪ್ಪಂದದಂತೆ ಭಾರತಕ್ಕೆ ನೀಡಬಹುದು ಎಂದಿದೆ.
ದಾವೂದ್ ಗಿಲಾನಿಗೂ ಕುಣಿಕೆ ಬಿಗಿ: ಅಮೆರಿಕ ಕೋರ್ಟ್ ತಹವ್ವುರ್ ರಾಣಾನನ್ನು ಹಸ್ತಾಂತರಕ್ಕೆ ಒಪ್ಪಿದ ಬೆನ್ನಲ್ಲೇ, ಇನ್ನೊಬ್ಬ ಉಗ್ರಗಾಮಿ ದಾವೂದ್ ಗಿಲಾನಿಯನ್ನು ವಶಕ್ಕೆ ನೀಡುವಂತೆ ಭಾರತ ಮತ್ತೊಮ್ಮೆ ಕೋರುವ ಅವಕಾಶಗಳು ತೆರೆದುಕೊಂಡಿವೆ. ಈ ಹಿಂದೆ, ಡೇವಿಡ್ ಹೆಡ್ಲಿ ಆಲಿಯಾಸ್ ದಾವೂದ್ ಗಿಲಾನಿಯನ್ನು ಹಸ್ತಾಂತರಿಸಲು ಅಮೆರಿಕ ನಿರಾಕರಿಸಿತ್ತು.
ಇದನ್ನೂ ಓದಿ: ಮೂವರು ಬಾಲಕಿಯರ ಮೇಲೆ ಅತ್ಯಾಚಾರ ಎಸಗಿದ 67 ವರ್ಷದ ವೃದ್ಧನಿಗೆ 20 ವರ್ಷ ಜೈಲು ಶಿಕ್ಷೆ