ಹೈದರಾಬಾದ್ : ಜನ ಸಾಮಾನ್ಯರು ನಿರಾಯಾಸವಾಗಿ ಮಾಡುವ ಪ್ರಕ್ರಿಯೆಯಲ್ಲಿ ನಿದ್ದೆಯೂ ಒಂದು. ಪ್ರತಿದಿನ ಚಟುವಟಿಕೆಯಿಂದ ಕೂಡಿರುವ ವ್ಯಕ್ತಿಗೆ ನಿಯಮಿತ ನಿದ್ದೆ ಅವಶ್ಯಕ. ನಿದ್ದೆಯು ಮಾನವನ ದೇಹಕ್ಕೆ ವಿಶ್ರಾಂತಿ ಪಡೆಯಲು ಸಹಕರಿಸುತ್ತದೆ. ಅಮೆರಿಕದ ನ್ಯಾಷನಲ್ ಸ್ಲೀಪ್ ಫೌಂಡೇಶನ್ ಪ್ರಕಾರ, ಪ್ರಪಂಚದಾದ್ಯಂತ ಸುಮಾರು ಮೂರನೇ ಒಂದು ಭಾಗದಷ್ಟು ಜನರು ನಿದ್ರೆಯ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಜನರು ಸಾಮಾನ್ಯವಾಗಿ ನಿದ್ರಾಹೀನತೆಯಂತಹ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾರೆ. ಆದರೆ ಈ ರೀತಿ ನಿದ್ರಾಹೀನತೆ ಅಥವಾ ಇತರೆ ಯಾವುದೇ ನಿದ್ರಾ ಸಮಸ್ಯೆಯು ದೈಹಿಕ ಮತ್ತು ಮಾನಸಿಕ ಆರೋಗ್ಯದ ಗಾಢ ಪರಿಣಾಮ ಬೀರಬಹುದು.
ಭೋಪಾಲ್ನ ಆಯುರ್ವೇದ ವೈದ್ಯರಾದ ಡಾ ರಾಜೇಶ್ ಶರ್ಮಾ ಅವರು, ನಿದ್ರೆಯನ್ನು 'ತ್ರಯೋಪಸ್ತಂಭ' ಅಥವಾ ಜೀವನದ ಪ್ರಮುಖ ಮೂರು ಪೋಷಕ ಸ್ತಂಭಗಳಲ್ಲಿ ಒಂದು ಎಂದು ಹೇಳುತ್ತಾರೆ. ನಿದ್ರಾಹೀನತೆ ಅಥವಾ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಅನೇಕ ಸಮಸ್ಯೆಗಳಿಗೆ ಮೂಲ ಕಾರಣ ಎಂದು ಆಯುರ್ವೇದದಲ್ಲಿ ಪರಿಗಣಿಸಲಾಗಿದೆ.
ನಿದ್ರಾಹೀನತೆಯು ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇದು ವ್ಯಕ್ತಿಯ ಕಡಿಮೆ ನಿದ್ರೆ, ಕಳಪೆ ಗುಣಮಟ್ಟದ ನಿದ್ರೆಯನ್ನು ಒಳಗೊಂಡಿದೆ. ಈ ನಿದ್ರಾಹೀನತೆ ಸಮಸ್ಯೆಯು ಕೆಲವೊಮ್ಮೆ ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು. ಅಲ್ಲದೆ ಇದು ವ್ಯಕ್ತಿಯು ಮಾಡುವ ಕೆಲಸದ ಮೇಲೆ ಮತ್ತು ಆತನ ನಡವಳಿಕೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ರಾಜೇಶ್ ಶರ್ಮಾ ಹೇಳುತ್ತಾರೆ.
ನಿದ್ರಾಹೀನತೆಯ ಸಾಮಾನ್ಯ ಲಕ್ಷಣಗಳು :
- ನಿದ್ರಾಹೀನತೆ ಅಥವಾ ಕಡಿಮೆ ನಿದ್ರೆ
- ಹಗಲಿನಲ್ಲಿ ಅರೆನಿದ್ರಾವಸ್ಥೆ ಅಥವಾ ಚಿಕ್ಕನಿದ್ರೆ
- ನಿದ್ರೆ ಮತ್ತು ಎಚ್ಚರದ ಸಮಯದಲ್ಲಿ ಬದಲಾವಣೆಗಳು
- ನಿದ್ರಿಸಲು ತೊಂದರೆ ಅಥವಾ ನಿದ್ರಾ ಭಂಗ
- ಹೆಚ್ಚಿದ ಆತಂಕ, ಉದ್ವೇಗ ಮತ್ತು ಚಡಪಡಿಕೆ
- ಹೆಚ್ಚಿದ ಕಿರಿಕಿರಿ ಮತ್ತು ಕೋಪದ ವರ್ತನೆ
- ಮರೆವು ಮತ್ತು ಏಕಾಗ್ರತೆಯ ಕೊರತೆ
ಸಾಮಾನ್ಯವಾಗಿ ವಯಸ್ಸಾದಂತೆ ನಿದ್ರೆಯ ಸಮಸ್ಯೆ ಕಾಣಿಸಿಕೊಳ್ಳಲು ಆರಂಭವಾಗುತ್ತದೆ. ಯುವಕರು ಮತ್ತು ವೃದ್ಧರಲ್ಲಿ ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ನಿದ್ರಾಹೀನತೆಗೆ ಕಾರಣವಾಗಬಹುದು. ಇದೇ ರೀತಿ ಜೀವನಶೈಲಿಯ ಬದಲಾವಣೆಯೂ ನಿದ್ರಾಹೀನತೆಗೆ ಕಾರಣವಾಗುವ ಪ್ರಮುಖ ಅಂಶಗಳಲ್ಲಿ ಒಂದಾಗಿದೆ.
ನಿದ್ರಾಹೀನತೆಗೆ ಕಾರಣವಾಗುವ ಸಾಮಾನ್ಯ ಅಂಶಗಳು :
1) ಮಾನಸಿಕ ಸಮಸ್ಯೆಗಳು : ಒತ್ತಡ, ಖಿನ್ನತೆ ಮತ್ತು ಆತಂಕದಂತಹ ಅಂಶಗಳು ಹೆಚ್ಚಿನ ಸಂದರ್ಭಗಳಲ್ಲಿ ನಿದ್ರಾಹೀನತೆಗೆ ಕಾರಣವಾಗಬಹುದು. ಸಾಮಾನ್ಯವಾಗಿ ಒತ್ತಡದಿಂದಾಗಿ ಜನರು ನಿದ್ರಾಹೀನತೆಯ ಸಮಸ್ಯೆಯನ್ನು ಹೊಂದುತ್ತಾರೆ ಎಂದು ಹೇಳಲಾಗಿದೆ. ಈ ರೀತಿಯ ನಿದ್ರಾಹೀನತೆಯು ಒತ್ತಡದ ಸಂದರ್ಭಗಳು ನಿವಾರಣೆಯಾದಾಗ ದೂರವಾಗುತ್ತದೆ. ಒತ್ತಡ, ಖಿನ್ನತೆ ಅಥವಾ ಆತಂಕದಂತಹ ಸಮಸ್ಯೆಗಳು ಮಾನಸಿಕವಾಗಿ ಗಾಢ ಪರಿಣಾಮ ಬೀರಿದರೆ, ನಿದ್ರಾಹೀನತೆಯು ಒಂದು ಕಾಯಿಲೆಯಾಗಿ ಪರಿವರ್ತನೆಯಾಗುವ ಸಾಧ್ಯತೆ ಇದೆ. ನಿದ್ರಾಹೀನತೆಯು ಅನೇಕ ರೀತಿಯ ಮಾನಸಿಕ ಅಸ್ವಸ್ಥತೆಗಳ ಮುಖ್ಯ ಲಕ್ಷಣಗಳಲ್ಲಿ ಒಂದಾಗಿದೆ.
2) ಶಾರೀರಿಕ ಸಮಸ್ಯೆಗಳು: ಶಾರೀರಿಕ ಸಮಸ್ಯೆಗಳಿಂದಲೂ ನಿದ್ರಾಹೀನತೆ ಉಂಟಾಗುತ್ತದೆ. ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗ ಮತ್ತು ಇತರ ಅನೇಕ ಕಾಯಿಲೆಗಳು ನಿದ್ರಾಹೀನತೆ ಕಾರಣವಾಗಬಹುದು. ಇದರ ಪಟ್ಟಿ ಕೆಳಗಿನಂತಿದೆ.
ದುರ್ಬಲ ಜೀರ್ಣಾಂಗ ವ್ಯವಸ್ಥೆ: ದುರ್ಬಲ ಜೀರ್ಣಾಂಗ ವ್ಯವಸ್ಥೆ ಹೊಂದಿರುವ ಜನರು ನಿದ್ರಾಹೀನತೆಯ ಸಮಸ್ಯೆಗಳನ್ನು ಹೊಂದಿರುತ್ತಾರೆ. ಜೀರ್ಣಿಸಿಕೊಳ್ಳಲು ಕಷ್ಟಕರವಾದ ಅಶಿಸ್ತಿನ ಮತ್ತು ಅಸಮತೋಲಿತ ಆಹಾರವು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುವುದಲ್ಲದೆ ನಮ್ಮ ಚಯಾಪಚಯ ಕ್ರಿಯೆಯನ್ನು ಹಾನಿಗೊಳಿಸುತ್ತದೆ.
ರೋಗ ಮತ್ತು ಔಷಧಿಗಳ ಅಡ್ಡ ಪರಿಣಾಮಗಳು: ದೀರ್ಘಕಾಲದ ಕಾಯಿಲೆಯ ಪರಿಣಾಮ ಅಥವಾ ಔಷಧಿಗಳ ಅಡ್ಡ ಪರಿಣಾಮಗಳಿಂದಾಗಿ ಕೆಲವರಲ್ಲಿ ನಿದ್ರಾಹೀನತೆ ಉಂಟಾಗಬಹುದು.
ಹಾರ್ಮೋನ್ ಅಸಮತೋಲನ: ಹಾರ್ಮೋನ್ ಅಸಮತೋಲನ ನಿದ್ರಾಹೀನತೆಗೆ ಕಾರಣವಾಗಬಹುದು. ವಿಶೇಷವಾಗಿ ಮಹಿಳೆಯರಲ್ಲಿ, ಗರ್ಭಾವಸ್ಥೆಯಲ್ಲಿ ಮತ್ತು ಋತುಬಂಧದ ಸಮಯದಲ್ಲಿ ಹಾರ್ಮೋನ್ ಅಸಮತೋಲನ ಉಂಟಾಗುತ್ತದೆ.ಇದರಿಂದ ನಿದ್ರಾ ಹೀನತೆ ಉಂಟಾಗುತ್ತದೆ.
ವೃದ್ಧಾಪ್ಯ : ವೃದ್ಧಾಪ್ಯದಲ್ಲಿ ಹೆಚ್ಚಿನ ಜನರು ನಿದ್ರಾಹೀನತೆ ಮತ್ತು ರಾತ್ರಿಯಲ್ಲಿ ಕಡಿಮೆ ನಿದ್ರೆಯಂತಹ ಸಮಸ್ಯೆಗಳನ್ನು ಅನುಭವಿಸುತ್ತಾರೆ.
3) ಜೀವನಶೈಲಿ : ಯಾವ ವ್ಯಕ್ತಿಯು ಹೆಚ್ಚು ಸಕ್ರಿಯವಾಗಿ ದೈನಂದಿನ ಚಟುವಟಿಕೆಯನ್ನು ನಡೆಸುತ್ತಾನೋ ಆತನು ಉತ್ತಮ ಗುಣಮಟ್ಟದ ನಿದ್ರೆಯನ್ನು ಪಡೆಯುತ್ತಾನೆ.ಇತ್ತೀಚಿನ ದಿನಗಳಲ್ಲಿ ಜನರು ಕೆಲಸ ಅಥವಾ ವಿವಿಧ ಕಾರಣಗಳಿಂದ ನಿರ್ದಿಷ್ಟ ದಿನಚರಿಯನ್ನು ಅನುಸರಿಸುವುದಿಲ್ಲ. ರಾತ್ರಿಯಲ್ಲಿ ಮಲಗಲು ಮತ್ತು ಬೆಳಿಗ್ಗೆ ಏಳಲು ಯಾವುದೇ ನಿರ್ದಿಷ್ಟ ಸಮಯವನ್ನು ಪಾಲನೆ ಮಾಡುತ್ತಿಲ್ಲ.
ಕೋವಿಡ್ ಸಂದರ್ಭದಲ್ಲಿ ಜನರು ತಡರಾತ್ರಿವರೆಗೆ ಎಚ್ಚರಗೊಳ್ಳುವ ಅಭ್ಯಾಸವನ್ನು ಬೆಳೆಸಿಕೊಂಡರು. ಈ ಅಭ್ಯಾಸವು ಅವರ ದೇಹದ ಸಿರ್ಕಾಡಿಯನ್ ರಿದಮ್ ಅಥವಾ ಜೈವಿಕ ಗಡಿಯಾರದ ಮೇಲೆ ಪರಿಣಾಮ ಬೀರಿದೆ. ಇದು ಜನರಲ್ಲಿ ನಿದ್ರೆಯ ಸಮಸ್ಯೆಗಳನ್ನು ಹೆಚ್ಚಿಸಲು ಪ್ರಮುಖ ಕಾರಣವಾಗಿದೆ.
ಉತ್ತಮ ಮತ್ತು ಅಗತ್ಯ ಪ್ರಮಾಣದ ನಿದ್ರೆಯು ದೇಹದ ಪ್ರಮುಖ ಅಗತ್ಯಗಳಲ್ಲಿ ಒಂದಾಗಿದೆ. ನಿದ್ರಾಹೀನತೆಗೆ ಕಾರಣ ಏನೇ ಇರಲಿ, ಸಮಯಕ್ಕೆ ಸರಿಯಾಗಿ ಅದನ್ನು ತೊಡೆದುಹಾಕಲು ಪ್ರಯತ್ನಿಸಬೇಕು. ಆಯುರ್ವೇದದಲ್ಲಿ ನಿದ್ರಾಹೀನತೆಗೆ 'ಶಿರೋಧರ' ಮತ್ತು 'ಪಂಚಕರ್ಮ' ಚಿಕಿತ್ಸೆ ಬಹಳ ಉಪಯುಕ್ತವೆಂದು ಪರಿಗಣಿಸಲಾಗಿದೆ. ಬ್ರಾಹ್ಮಿ, ಅಶ್ವಗಂಧ ಮತ್ತು ಶಂಖಪುಷ್ಪ ಮುಂತಾದ ಅನೇಕ ರೀತಿಯ ಗಿಡಮೂಲಿಕೆಗಳ ಸೇವನೆಯು ಈ ಸಮಸ್ಯೆಯನ್ನು ಪರಿಹರಿಸುವಲ್ಲಿ ಪ್ರಯೋಜನಕಾರಿ ಎಂದು ಹೇಳಲಾಗಿದೆ.
ಈ ಗಿಡಮೂಲಿಕೆಗಳು ಮತ್ತು ಇವುಗಳಿಂದ ತಯಾರಿಸಿದ ವಿವಿಧ ರೀತಿಯ ಔಷಧಿಗಳು ನಿದ್ರಾಹೀನತೆಯ ಸಮಸ್ಯೆಯನ್ನು ನಿವಾರಿಸುವ ಜೊತೆಗೆ ನಿದ್ರಾಹೀನತೆಯಿಂದ ಉಂಟಾಗುವ ಸಮಸ್ಯೆಗಳಾದ ಆತಂಕ, ಏಕಾಗ್ರತೆ ಮತ್ತು ಜ್ಞಾಪಕಶಕ್ತಿ ಕೊರತೆ ಮುಂತಾದ ಸಮಸ್ಯೆಗಳಿಗೂ ಪರಿಹಾರ ನೀಡುತ್ತದೆ.
ನಿದ್ರಾ ಹೀನತೆಯನ್ನು ನಿವಾರಿಸಲು ಕೈಗೊಳ್ಳಬೇಕಾದ ಕ್ರಮಗಳು :
- ನಿಯಮಿತವಾಗಿ ಯೋಗಾಭ್ಯಾಸ, ಪ್ರಾಣಾಯಾಮ ಮಾಡಿ.
- ದೈಹಿಕ ಚಟುವಟಿಕೆ, ವ್ಯಾಯಾಮಗಳನ್ನು ಮಾಡಿ.
- ರಾತ್ರಿ ಮಲಗುವ ಮುನ್ನ ಬೆಚ್ಚಗಿನ ಹಾಲನ್ನು ಸೇವಿಸಿ.
- ಮಲಗುವ ಮುನ್ನ ಎಳ್ಳೆಣ್ಣೆಯಿಂದ ನಿಮ್ಮ ಪಾದಗಳನ್ನು ಮಸಾಜ್ ಮಾಡಿ.
- ತಡರಾತ್ರಿಯಲ್ಲಿ ಟಿವಿ ನೋಡುವುದನ್ನು ಅಥವಾ ಕಂಪ್ಯೂಟರ್ನಲ್ಲಿ ಕೆಲಸ ಮಾಡುವುದನ್ನು ತಪ್ಪಿಸಿ.
- ಸಂಜೆಯ ನಂತರ ಕಾಫಿ ಅಥವಾ ಟೀ ಸೇವಿಸಬೇಡಿ.
- ಮಲಗುವ ಕನಿಷ್ಠ 2 ಗಂಟೆಗಳ ಮೊದಲು ರಾತ್ರಿಯ ಊಟವನ್ನು ಸೇವಿಸಿ.
- ಮಲಗುವ ಮೊದಲು ಧ್ಯಾನ ಮಾಡಿದರೆ ಒತ್ತಡವನ್ನು ಕಡಿಮೆ ಮಾಡಬಹುದು
- ಜನರು ನಿದ್ರಿಸಲು ಸಾಧ್ಯವಾಗದಿದ್ದಾಗ ಯೋಗ ನಿದ್ರಾವನ್ನು ಮಾಡಬಹುದು
ಇದನ್ನೂ ಓದಿ : ಆಸ್ಟ್ರೇಲಿಯಾದಲ್ಲಿ ಪತ್ತೆಯಾಯ್ತು ಮೊದಲ ಮಂಕಿಪಾಕ್ಸ್ ಪ್ರಕರಣ