ಹುಬ್ಬಳ್ಳಿ: ಸಾರ್ವಜನಿಕ ಷೇರು ಹಂಚಿಕೆ (ಐಪಿಒ) ಅಲಾಟ್‌ಮೆಂಟ್ ಮಾಡಿಕೊಡುವುದಾಗಿ ನಂಬಿಸಿ ಇಲ್ಲಿನ ಆದರ್ಶ ನಗರದ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಜಗದೀಶ್ ಚಂದನ್ ಎಂಬುವರಿಗೆ 26.50 ಲಕ್ಷ ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.
ಯೂಟ್ಯೂಬ್‌ನಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಕುರಿತು - ವಿಡಿಯೋ ನೋಡುತ್ತಿದ್ದಾಗ ಸಿಕ್ಕ ಮೊಬೈಲ್ ಸಂಖ್ಯೆಗೆ ಜಗದೀಶ್ ಅವರು ಕರೆ ಮಾಡಿದ್ದರು. ಆಗ ಮೆಹ್ರಾ ಎಂದು ಪರಿಚಯಿಸಿಕೊಂಡ ಅಪರಿಚಿತ ವ್ಯಕ್ತಿ, ಐಪಿಒ ಅಲಾಟ್‌ಮೆಂಟ್ ಮಾಡಿಕೊಡಲಾಗುವುದು ಎಂದು 37.50 ಲಕ್ಷ ರೂ. ಹಣ ವರ್ಗಾಯಿಸಿಕೊಂಡಿದ್ದಾನೆ. ಬಳಿಕ 11 ಲಕ್ಷ ವಾಪಸ್ ಹಾಕಿ, ಉಳಿದ 26.50 ಲಕ್ಷ ರೂ. ಹಣವನ್ನು ನೀಡದೆ ವಂಚಿಸಿದ್ದಾನೆ ಎಂದು ದೂರಿನಲ್ಲಿ ಮೋಸ ಹೋಗಿರುವ ಜಗದೀಶ್ ವಿವರಿಸಿದ್ದಾರೆ. ಈ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
11.74 ಲಕ್ಷ ವಂಚನೆ : ಮತ್ತೊಂದು ಕಡೆ ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಹೆಸರಿನಲ್ಲಿ ಅಮರಗೋಳದ ಮೃತ್ಯುಂಜಯ ಎಂಬುವರಿಗೆ 11.74 ವಂಚಿಸಲಾಗಿದೆ.
ಇನ್‌ಸ್ಟಾಗ್ರಾಂನಲ್ಲಿ ಸಿಕ್ಕ ಸ್ಪಾಕ್ ಮಾರ್ಕೆಟ್‌ನಲ್ಲಿ ಹಣ ಹೂಡಿಕೆಯ ಜಾಹೀರಾತು ಲಿಂಕ್ ಓಪನ್ ಮಾಡಿದಾಗ ಮೃತ್ಯುಂಜಯ ಅವರ ಮೊಬೈಲ್ ಸಂಖ್ಯೆಯನ್ನು 'ಆರ್111 ಟಿಆರ್‌ಜಿ ಆನ್‌ಲೈನ್ ಸ್ಟಾಕ್ ಫೈನಾನ್ಶಿಯಲ್ ಅಡಾಡೆಮಿ ಎಂಬ ವಾಟ್ಸ್ಯಾಪ್ ಗ್ರೂಪ್‌ಗೆ ಸೇರಿಸಲಾಗಿದೆ. ನಂತರ ಅವರ ಮೊಬೈಲ್‌ನಲ್ಲಿ 'ಎಎಸ್‌ಎಲ್' 5 ಆ್ಯಪ್ ಅನ್ನು ಅಪರಿಚಿತರು ಇನ್‌ಸ್ಟಾಲ್ ಮಾಡಿಸಿದ್ದಾರೆ. ಅದರಲ್ಲಿ ನೀಡಿದ್ದ ಬ್ಯಾಂಕ್ ಖಾತೆಗಳಿಗೆ ಮೃತ್ಯುಂಜಯ ಅವರು 8.01 ಲಕ್ಷ ಹಾಗೂ ಗೆಳೆಯನ ಬ್ಯಾಂಕ್ ಖಾತೆಯಿಂದ 3.73 ಲಕ್ಷ ಸೇರಿ ಒಟ್ಟು 11.74 ಲಕ್ಷ ಹಾಕಿದ್ದಾರೆ. ಆದರೆ, ಅವರಿಗೆ ಲಾಭಾಂಶ ನೀಡದೆ, ಹೂಡಿಕೆ ಮಾಡಿದ ಹಣ ವಾಪಸ್ ನೀಡದೆ ವಂಚಿಸಿರುವ ಕುರಿತು ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮಲೇಷಿಯಾದ ಕಂಪೆನಿಯಲ್ಲಿ ಹಣ ಹೂಡಿದರೆ ಹೆಚ್ಚು ಲಾಭಾಂಶ ನೀಡುವುದಾಗಿ ₹2 ಕೋಟಿ ವಂಚನೆ; 7 ಮಂದಿ ಸೆರೆ