ಸಂಬಲ್‌ಪುರ (ಒಡಿಶಾ): ಸಂಬಲ್‌ಪುರ ಮತ್ತು ಅದರ ಸುತ್ತಮುತ್ತಲಿನ ಜಿಲ್ಲೆಗಳ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳ ಮಹಿಳೆಯರನ್ನು ಸಾಮಾನ್ಯವಾಗಿ ಮೂಲೆಗುಂಪು ಮಾಡಲಾಗುತ್ತದೆ. ಕುಟುಂಬಕ್ಕೆ ಆದಾಯ ಗಳಿಸುವುದಕ್ಕಾಗಿ ಇವರನ್ನ ದೂರದ ನಗರಗಳಿಗೆ ಕಳುಹಿಸಲಾಗುತ್ತದೆ. ಇವರಲ್ಲಿ ಹೆಚ್ಚಿನ ಯುವತಿಯರು ಮಾನವ ಕಳ್ಳಸಾಗಣೆದಾರರಿಗೆ ಬಲಿಯಾಗುತ್ತಿರುವುದು ಈ ಸಮುದಾಯದವರ ಆತಂಕವನ್ನ ಹೆಚ್ಚಿಸಿದೆ. ಹೀಗಾಗಿ, ಬುಡಕಟ್ಟು ಮಹಿಳೆಯರನ್ನು ಸ್ವಾವಲಂಬಿಯನ್ನಾಗಿ ಮಾಡುವ ಮೂಲಕ ಕಳ್ಳಸಾಗಣೆಯನ್ನ ತಡೆಗಟ್ಟುವ ನಿಟ್ಟಿನಲ್ಲಿ ಕೆಲವು ಸಮಾನ ಮನಸ್ಕ ಜನರು ಒಗ್ಗೂಡಿ ತರಬೇತಿ ಶಿಬಿರವನ್ನ ಆಯೋಜಿಸಿದ್ದಾರೆ.
ಬ್ಯೂಟಿಷಿಯನ್ ಮತ್ತು ಉದ್ಯಮಿ ಪುಷ್ಪಾಂಜಲಿ ಮಹಾಕುರ್ ಮತ್ತು ಸ್ವರ್ಣನಾರಿ ದೇವಿ ಕಲ್ಯಾಣ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲೆಯ ಆದಿವಾಸಿಗಳಿಗಾಗಿ ಕೆಲಸ ಮಾಡುವ ಕಾರ್ಯಕರ್ತೆ ಸಂಜುಲತಾ ನಾಯಕ್ ಅವರು ಬುಡಕಟ್ಟು ಜನಾಂಗದ ಮಹಿಳೆಯರನ್ನು ವೃತ್ತಿಪರ ಸೌಂದರ್ಯ ಹಾಗೂ ಮೇಕಪ್ ತರಬೇತಿದಾರರನ್ನಾಗಿ ಸಜ್ಜುಗೊಳಿಸುವ ಮೂಲಕ ಸ್ವಾವಲಂಬಿಯಾಗಳನ್ನಾಗಿಸಲು ಕೈಜೋಡಿಸಿದರು.
ಅವರು ಜಿಲ್ಲೆಯ 35 ಬುಡಕಟ್ಟು ಮಹಿಳೆಯರಿಗೆ ಮೂರು ದಿನಗಳ ಕಾರ್ಯಾಗಾರವನ್ನು ಆಯೋಜಿಸಿದರು ಮತ್ತು ಅಹಮದಾಬಾದ್‌ನ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಧೀರಾ ಕಪೂರ್ ಮತ್ತು ರಾಜೇಶ್ ಪರೇಖ್ ಅವರಂತಹ ವೃತ್ತಿಪರ ತರಬೇತುದಾರರನ್ನು ಕರೆದು ಸಾಫ್ಟ್ ಸ್ಕಿಲ್ ತರಬೇತಿಯನ್ನು ನೀಡಿದರು.
ಮೂಲ ತರಬೇತಿಯೊಂದಿಗೆ ಈ ಬುಡಕಟ್ಟು ಮಹಿಳೆಯರಿಗೆ ಉದ್ಯೋಗ ನೀಡಲಾಗುವುದು ಅಥವಾ ಬ್ಯೂಟಿ ಪಾರ್ಲರ್ ಪ್ರಾರಂಭಿಸಲು ಸಹಾಯ ಮಾಡಲಾಗುವುದು ಎಂದು ಸಂಘಟಕರು ಭರವಸೆ ನೀಡಿದರು.
"ಈ ಅಲ್ಪಾವಧಿಯ ಕೋರ್ಸ್ 50,000 ರೂಪಾಯಿಗಳಿಗಿಂತ ಕಡಿಮೆಯಿಲ್ಲ. ಆದರೆ ನಾವು ಇದನ್ನು ಬುಡಕಟ್ಟು ಮಹಿಳೆಯರಿಗಾಗಿ ಉಚಿತವಾಗಿ ಆಯೋಜಿಸಿದ್ದೇವೆ. ಏಕೆಂದರೆ ದೂರದ ಸ್ಥಳಗಳಿಂದ ಬರುವ ಬುಡಕಟ್ಟು ಜನಾಂಗದವರು ಹೆಚ್ಚಿನ ಮೊತ್ತವನ್ನು ಪಾವತಿಸುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ನಾನು ತರಬೇತಿ ಪಡೆದ ಕಲಾವಿದೆ. ಹೀಗಾಗಿ ಇವರನ್ನೂ ಸಬಲೀಕರಣಗೊಳಿಸಲು ಯೋಚಿಸಿದೆ. ಆರ್ಥಿಕ ಸ್ವಾವಲಂಬನೆ ಬಹಳ ಮುಖ್ಯ. ಆದ್ದರಿಂದ, ಈ ನಿಟ್ಟಿನಲ್ಲಿ ಇದೊಂದು ಸಣ್ಣ ಪ್ರಯತ್ನ'' ಎಂದು ಪುಷ್ಪಾಂಜಲಿ ವಿವರಿಸಿದರು.
ಕಾರ್ಯಾಗಾರದಲ್ಲಿ ತರಬೇತಿ ಪಡೆದವರಿಗೆ ಮೂಲ ಬಣ್ಣದ ಮೇಕಪ್ ಮತ್ತು ಕೇಶವಿನ್ಯಾಸವನ್ನು ಅರ್ಥ ಮಾಡಿಸಲಾಯಿತು. ಸರಿಯಾದ ಉತ್ಪನ್ನವನ್ನು ಆಯ್ಕೆ ಮಾಡುವುದು ಮತ್ತು ಅಂದವನ್ನ ಹೆಚ್ಚಿಸಲು ಮುಖದ ಮೇಲೆ ನೈಸರ್ಗಿಕ ಬಣ್ಣ ಹೇಗೆ ಕೆಲಸ ಮಾಡುತ್ತದೆ ಎಂಬುದರ ಬಗ್ಗೆ ಅವರಿಗೆ ತರಬೇತಿ ನೀಡಲಾಯಿತು ಎಂದರು.
ಪ್ರತಿವಾ ಪಟ್ಟಾ ಎಂಬುವವರು ಮಾತನಾಡಿ, ''ನನ್ನ ಭವಿಷ್ಯವನ್ನು ಬದಲಾಯಿಸಬಹುದಾದ ಕಾರ್ಯಾಗಾರಕ್ಕೆ ಹಾಜರಾಗುವಂತೆ ಸಂಜುಲತಾ ನಾಣಿ ಹೇಳಿದರು ಮತ್ತು ನಾನು ಮತ್ತು ಇತರ ಅನೇಕರನ್ನು ಭಾಗವಹಿಸಲು ಪ್ರೋತ್ಸಾಹಿಸಿದರು. ಕಲಿಯಲು ನಾವು ಏನನ್ನೂ ಖರ್ಚು ಮಾಡಬೇಕಾಗಿಲ್ಲ'' ಎಂದರು.
ಇದನ್ನೂ ಓದಿ : ವಿಶ್ವದಲ್ಲೇ ಅತ್ಯುತ್ತಮವಾಗಿ ಇಂಗ್ಲಿಷ್ ಮಾತನಾಡುವ ದೇಶ ಭಾರತ! - SPEAKING ENGLISH GLOBAL AVERAGE