ಮುಂಬೈ(ಮಹಾರಾಷ್ಟ್ರ): ದೇಶದ ಹಲವಾರು ರಾಜ್ಯಗಳಲ್ಲಿ ಸ್ವಂತ ಬಲದ ಮೇಲೆ ಗೆಲ್ಲುವ ಶಕ್ತಿಯನ್ನು ಕಳೆದುಕೊಂಡಿರುವ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳನ್ನು ಲಘುವಾಗಿ ಪರಿಗಣಿಸಬಾರದು ಎಂದು ಶಿವಸೇನಾ (ಯುಬಿಟಿ) ಹೇಳಿದೆ. ಐಎನ್ಡಿಐಎ ಮೈತ್ರಿಕೂಟ ಮತ್ತು ಮಹಾ ವಿಕಾಸ್ ಅಘಾಡಿ ಮೈತ್ರಿಕೂಟಗಳ ವಿಸರ್ಜನೆಯ ಬಗ್ಗೆ ಚರ್ಚೆಗಳು ನಡೆದಿರುವ ಮಧ್ಯೆ ಶಿವಸೇನಾ (ಯುಬಿಟಿ) ತನ್ನ ಮುಖವಾಣಿ 'ಸಾಮ್ನಾ' ಸಂಪಾದಕೀಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕುಟುಕಿದೆ.
"ತನ್ನ ಹೋರಾಡುವ ಶಕ್ತಿಯನ್ನು ಕಳೆದುಕೊಂಡಿದ್ದರೂ ಕಾಂಗ್ರೆಸ್ ಪ್ರಾದೇಶಿಕ ಪಕ್ಷಗಳ ಪಾಲು ಕಸಿಯಲು ಯತ್ನಿಸುತ್ತಿದೆ. ಕಾಂಗ್ರೆಸ್ನ ಇಂಥ ಕೃತ್ಯದ ಫಲಿತಾಂಶ ಏನಾಗುತ್ತದೆ ಎಂಬುದು ಮಹಾರಾಷ್ಟ್ರದಲ್ಲಿ ಈಗಾಗಲೇ ಕಂಡು ಬಂದಿದೆ. ಬಿಜೆಪಿಯ ಗುಹೆಯೊಳಗೆ ಪ್ರವೇಶಿಸಿದ ಮಿತ್ರ ಪಕ್ಷಗಳು ತಮ್ಮ ಅಸ್ತಿತ್ವವನ್ನೇ ಕಳೆದುಕೊಂಡಿವೆ ಎಂಬುದು ಒಪ್ಪಿಕೊಳ್ಳಬೇಕಾದ ವಿಚಾರ. ಕಾಂಗ್ರೆಸ್ ಕೂಡ ಅಂಥದೇ ಮನೋಭಾವನೆಯನ್ನು ಪ್ರದರ್ಶಿಸಬಾರದು. ಕಾಂಗ್ರೆಸ್ ರಾಷ್ಟ್ರೀಯ ಪಕ್ಷವಾಗಿದೆ ಮತ್ತು ಅದು ರಾಷ್ಟ್ರೀಯ ಪಕ್ಷವಾಗಿಯೇ ಮುಂದುವರಿಯಲಿದೆ. ಈ ಬಗ್ಗೆ ಯಾರಿಗೂ ಯಾವುದೇ ಅನುಮಾನ ಬೇಡ" ಎಂದು ಸಾಮ್ನಾ ಸಂಪಾದಕೀಯದಲ್ಲಿ ಬರೆಯಲಾಗಿದೆ.
"ಮಳೆಗಾಲದಲ್ಲಿ ಹುಟ್ಟುವ ಎರೆಹುಳುಗಳು ಅಥವಾ ಕಪ್ಪೆಗಳು ಮಳೆಗಾಲ ಮುಗಿದ ಕೂಡಲೇ ನಾಶವಾಗುತ್ತವೆ. ಚುನಾವಣೆಗಾಗಿ ರಚಿಸಲಾದ 'ಐಎನ್ಡಿಎಐ' ದಂಥ ಮೈತ್ರಿಕೂಟಗಳು ಅಲ್ಪಾವಧಿಗೆ ಮುಗಿದು ಹೋಗಬಾರದು. ಬದಲಿಗೆ ಅವು ರಾಷ್ಟ್ರ ಹಿತಾಸಕ್ತಿಗಾಗಿ ಕೆಲಸ ಮಾಡಬೇಕು ಎಂದು ನಾವು ಭಾವಿಸುತ್ತೇವೆ. ದೆಹಲಿಯಲ್ಲಿ ಕಾಂಗ್ರೆಸ್ ಮತ್ತು ಎಎಪಿ ಪರಸ್ಪರರ ವಿರುದ್ಧ ಹೋರಾಡುತ್ತಿರಬಹುದು. ಆದರೆ ಚುನಾವಣಾ ಪ್ರಚಾರದಲ್ಲಿ ಕೇಜ್ರಿವಾಲ್ ಅವರನ್ನು ರಾಷ್ಟ್ರ ವಿರೋಧಿ ಎಂದು ಬಿಂಬಿಸುವುದು ಕಾಂಗ್ರೆಸ್ನ ಸಂಸ್ಕೃತಿಗೆ ಸೂಕ್ತವಲ್ಲ. ಮೋದಿ ಮನಸ್ಥಿತಿಯನ್ನು ಸೋಲಿಸುವ ಸಾಮರ್ಥ್ಯ ಕಾಂಗ್ರೆಸ್ಗೆ ಇದ್ದರೆ, ಅವರು ಖಂಡಿತವಾಗಿಯೂ ಅದನ್ನು ಮಾಡಲಿ. ಆದರೆ, ಮಹಾರಾಷ್ಟ್ರದಂತಹ ರಾಜ್ಯದಲ್ಲಿ ಬಿಜೆಪಿ ಮತ್ತು ಅದರ ಅಂಗ ಪಕ್ಷಗಳು ಮಾಫಿಯಾ ರೀತಿಯಲ್ಲಿ ಗೆದ್ದಿರುವುದು ಅವು ಯಾವ ರೀತಿಯ ರಾಜಕೀಯ ಮಾಡುತ್ತಿವೆ ಎಂಬುದಕ್ಕೆ ಪುರಾವೆಯಾಗಿದೆ. ಈ ಮಾಫಿಯಾ ವ್ಯವಸ್ಥೆಯ ವಿರುದ್ಧ ಹೋರಾಡಲು ನಮಗೆ ಏಕತೆ, ಐಎನ್ಡಿಐಎ ಬಣದ ನಾಯಕತ್ವ ಮತ್ತು ಸಾಧ್ಯವಾದರೆ ಸಂಚಾಲಕರ ಅಗತ್ಯವಿದೆ. ಇಲ್ಲದಿದ್ದರೆ, ಎಲ್ಲವೂ ವ್ಯರ್ಥವಾಗುತ್ತದೆ. ಹಾಗಾಗಲು ಬಿಡಬೇಕೆ ಎಂಬುದನ್ನು ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಯೋಚಿಸಬೇಕಿದೆ" ಎಂದು ಸಂಪಾದಕೀಯದಲ್ಲಿ ಬರೆದಿರುವ ಶಿವಸೇನಾ (ಯುಬಿಟಿ) ಪ್ರತಿಪಕ್ಷಗಳ ಮೈತ್ರಿಕೂಟವನ್ನು ಮತ್ತಷ್ಟು ಬಲಪಡಿಸಬೇಕೆಂದು ಕಾಂಗ್ರೆಸ್ಗೆ ಕರೆ ನೀಡಿದೆ.
"ರಾಷ್ಟ್ರ ಮಟ್ಟದಲ್ಲಿ ಐಎನ್ಡಿಐಎ ಮೈತ್ರಿಕೂಟ ಮತ್ತು ಮಹಾರಾಷ್ಟ್ರದಲ್ಲಿ ಎಂವಿಎ ಮೈತ್ರಿಕೂಟಗಳಿದ್ದರೂ, ಅವುಗಳ ಮಧ್ಯೆ ಎಲ್ಲವೂ ಸರಿಯಾಗಿಲ್ಲ ಎಂಬ ಭಾವನೆ ಜನರಲ್ಲಿದೆ. ಇದಕ್ಕೆ ಯಾರು ಜವಾಬ್ದಾರರು? ಈ ಎರಡು ಮೈತ್ರಿಗಳು ರೂಪುಗೊಂಡು ಕೆಲಸ ಮಾಡಲು ಪ್ರಾರಂಭಿಸಿದಾಗ, ಮೈತ್ರಿಕೂಟದ ಪ್ರತಿಯೊಂದು ಘಟಕ ಪಕ್ಷದಲ್ಲಿ ಮತ್ತು ಒಟ್ಟಾರೆ ಸಾರ್ವಜನಿಕ ಮನಸ್ಸಿನಲ್ಲಿ ಉತ್ಸಾಹ ಸೃಷ್ಟಿಯಾಗಿತ್ತು. ದೇಶದ ಮೇಲೆ ಹೇರಲಾದ ನಿರಂಕುಶ ಆಡಳಿತ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಒಂದು ಶಕ್ತಿಯು ಹೊರಹೊಮ್ಮಿದೆ ಎಂದು ಭಾರತೀಯರು ವಿಶ್ವಾಸ ಹೊಂದಿದ್ದರು. ದೇಶದಲ್ಲಿ ಮೋದಿಯನ್ನು ಮತ್ತು ಮಹಾರಾಷ್ಟ್ರದಲ್ಲಿನ ಅಕ್ರಮ ಸರ್ಕಾರವನ್ನು ಸೋಲಿಸಬಹುದು ಎಂಬ ಭಾವನೆ ಮಿಂಚಿನಂತೆ ಹರಿಯಲು ಪ್ರಾರಂಭಿಸಿತ್ತು. ಆದರೆ ಈ ಎರಡು ಮೈತ್ರಿಗಳು ಈಗ ಮಂದ ಮತ್ತು ನಿಷ್ಕ್ರಿಯವಾಗುತ್ತಿವೆಯೇ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಇದು ದೇಶಕ್ಕೆ ಒಳ್ಳೆಯದಲ್ಲ" ಎಂದು ಸಂಪಾದಕೀಯದಲ್ಲಿ ಬರೆಯಲಾಗಿದೆ.