ನವದೆಹಲಿ: ದೆಹಲಿ ಮುಖ್ಯಮಂತ್ರಿ ಮತ್ತು ಎಎಪಿ ಅಭ್ಯರ್ಥಿ ಅತಿಶಿ ಇಂದು ತಮ್ಮ ಚುನಾವಣಾ ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದಾರೆ. ಕಲ್ಕಜಿ ಕ್ಷೇತ್ರದಿಂದ ಕಣಕ್ಕೆ ಇಳಿಯುತ್ತಿರುವ ಅವರು, ನಾಮಪತ್ರ ಸಲ್ಲಿಕೆಗೆ ಮುನ್ನ ಕ್ಷೇತ್ರದಲ್ಲಿನ ಕಲ್ಕಜಿ ದೇಗುಲಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಈ ಮುನ್ನ ಇಂದು ಎಕ್ಸ್ ಜಾಲತಾಣದಲ್ಲಿ ತಿಳಿಸಿದ್ದ ಅವರು, ಇಂದು ನಾನು ನಾಮಪತ್ರ ಸಲ್ಲಿಕೆ ಮಾಡುತ್ತಿದ್ದೇನೆ, ಈ ವೇಳೆ ಕಲ್ಕಜಿ ದೇಗುಲಕ್ಕೆ ಭೇಟಿ ನೀಡಲಿದ್ದು, ಕಲ್ಕ ದೇವಿ ಆಶೀರ್ವಾದ ಪಡೆಯುತ್ತೇನೆ. ಇಲ್ಲಿ ಪ್ರಾರ್ಥನೆ ಸಲ್ಲಿಸಿದ ಬಳಿಕ ಗಿರಿ ನಗರ್ ಗುರುದ್ವಾರಗೆ ಭೇಟಿ ನೀಡಲಿದ್ದು, ಬಳಿಕ ಅವರ ನಾಮಪತ್ರ ರ್ಯಾಲಿ ಆರಂಭವಾಗಲಿದೆ. ಕಳೆದ ಐದು ವರ್ಷದಿಂದ ನಮ್ಮ ಕಲ್ಕಜಿ ಕುಟುಂಬದಿಂದ ಸಾಕಷ್ಟು ಪ್ರೀತಿಯನ್ನು ಪಡೆದಿದ್ದು, ಈ ಆಶೀರ್ವಾದವೂ ಮುಂದೆ ಕೂಡ ನನಗೆ ಮಾರ್ಗದರ್ಶನ ತೋರಲಿದೆ ಎಂಬ ನಂಬಿಕೆ ಇದೆ ಎಂದು ಪೋಸ್ಟ್ನಲ್ಲಿ ತಿಳಿಸಿದ್ದರು.
ಇನ್ನು, ತಮ್ಮ ಚುನಾವಣಾ ಪ್ರಚಾರದ ವೆಚ್ಚಕ್ಕಾಗಿ ಸಿಎಂ ಆತಿಶಿ ಕ್ರೌಡ್ ಫಂಡಿಂಗ್ ಮೊರೆ ಹೋಗಿದ್ದು, ಭಾನುವಾರ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದಾರೆ. ನಮ್ಮ ಪಕ್ಷ ಕಾರ್ಯ ಮತ್ತು ಪ್ರಾಮಾಣಿಕತೆಯ ರಾಜಕೀಯಕ್ಕೆ ಬದ್ಧವಾಗಿದೆ ಎಂದು ಒತ್ತಿ ಹೇಳಿದರು.
ಮಾಧ್ಯಮಗೋಷ್ಟಿಯಲ್ಲಿ ಆನ್ಲೈನ್ ದೇಣಿಗೆ ಲಿಂಕ್ ಹಂಚಿಕೊಂಡಿದ್ದ ಅವರು, ಚುನಾವಣಾ ಪ್ರಚಾರಕ್ಕಾಗಿ ತಮಗೆ 40 ಲಕ್ಷ ರೂಪಾಯಿ ಆರ್ಥಿಕ ಸಹಾಯದ ಅವಶ್ಯಕತೆ ಇದ್ದು, ಈ ಹಣವನ್ನು ಕ್ರೌಂಡ್ ಫಂಡಿಂಗ್ ಮೂಲಕ ಪಡೆಯಲಾಗುವುದು. ಎಎಪಿ ಚುನಾವಣೆ ಎದುರಿಸಲು ಸಾಮಾನ್ಯ ಜನರಿಂದ ಸಣ್ಣ ಕೊಡುಗೆಯನ್ನು ಯಾವಾಗಲೂ ಎದುರು ನೋಡುತ್ತದೆ. ಈ ಮೂಲಕ ಪ್ರಾಮಾಣಿಕ ಮತ್ತು ಪಾರದರ್ಶಕ ರಾಜಕೀಯ ನಡೆಸಲಾಗುವುದು ಎಂದು ತಿಳಿಸಿದ್ದರು.
ಮುಂದುವರೆದು ಮಾತನಾಡಿದ ಅವರು, ಶಾಸಕಿಯಾಗಿ, ಸಚಿವೆಯಾಗಿ ಇದೀಗ ದೆಹಲಿ ಸಿಎಂ ಆಗಿ ನನಗೆ ಬೆಂಬಲವನ್ನು ನೀಡಿದ್ದೀರ. ನಿಮ್ಮ ಅಗಾದ ನಂಬಿಕೆ ಮತ್ತು ಆಶೀರ್ವಾದವಿಲ್ಲದೇ ಈ ನನ್ನ ಪ್ರಯಾಣ ಸಾಗುತ್ತಿರಲಿಲ್ಲ ಎಂದಿದ್ದಾರೆ. ಸಿಎಂ ಅತಿಶಿ ಎದುರು ಬಿಜೆಪಿಯಿಂದ ರಮೇಶ್ ಬಿಂಧುರಿ ಮತ್ತು ಕಾಂಗ್ರೆಸ್ನಿಂದ ಅಲ್ಕ ಲಾಂಬಾ ಚುನಾವಣಾ ಕಣದಲ್ಲಿದ್ದಾರೆ.
70 ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ದೆಹಲಿ ಚುನಾವಣೆಗೆ ಫೆಬ್ರವರಿ 5ರಂದು ಮತದಾನ ನಡೆಯಲಿದ್ದು, ಫೆಬ್ರವರಿ 8ರಂದು ಮತ ಎಣಿಕೆ ನಡೆಯಲಿದೆ. (ಐಎಎನ್ಎಸ್)
ಇದನ್ನೂ ಓದಿ: ಆಟವಾಡುತ್ತಾ ನಕ್ಸಲರಿಟ್ಟ ಐಇಡಿ ಮೇಲೆ ಕಾಲಿಟ್ಟ ಬಾಲಕಿ!