ಹುಬ್ಬಳ್ಳಿಗೆ ಆಗಮಿಸಿ ಸಿದ್ಧಾರೂಢರ ದರ್ಶನ ಪಡೆದ ಜಗದೀಶ್ ಶೆಟ್ಟರ್ - Jagadish Shettar - JAGADISH SHETTAR
Published : Jun 5, 2024, 7:06 PM IST
ಹುಬ್ಬಳ್ಳಿ: ಬೆಳಗಾವಿ ಲೋಕಸಭಾ ಚುನಾವಣೆ ಗೆಲುವಿನ ಹುರುಪಿನಲ್ಲಿರುವ ಜಗದೀಶ್ ಶೆಟ್ಟರ್ ತಮ್ಮ ಆರಾಧ್ಯ ದೈವ ಶ್ರೀ ಸದ್ಗುರು ಸಿದ್ಧಾರೂಢರ ಮಠಕ್ಕೆ ಇಂದು ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಗದ್ದುಗೆ ದರ್ಶನ ಪಡೆದರು.
ಇದಕ್ಕೂ ಮುನ್ನ ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಶೆಟ್ಟರ್ ಅವರನ್ನು ಅದ್ಧೂರಿಯಾಗಿ ಸ್ವಾಗತಿಸಿದರು. ಆರತಿ ಬೆಳಗಿ ಬರಮಾಡಿಕೊಂಡರು. ಶೆಟ್ಟರ್ ಪರ ಘೋಷಣೆ ಕೂಗಿ ಸಂಭ್ರಮಾಚರಣೆ ಮಾಡಿದರು.
ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಎಂಎಲ್ಸಿ ಪ್ರದೀಪ್ ಶೆಟ್ಟರ್, ಬಿಜೆಪಿ ಮಹಾನಗರ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ಹಾಗೂ ಪ್ರಮುಖ ಮುಖಂಡರು ಸೇರಿದಂತೆ ಕಾರ್ಯಕರ್ತರು ಇದ್ದರು.
ಕಾರ್ಯಕರ್ತರ ಸಹಕಾರವೇ ನನ್ನ ಗೆಲುವಿಗೆ ಕಾರಣ- ಶೆಟ್ಟರ್: ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ನಾನು 1 ಲಕ್ಷ 80 ಸಾವಿರ ಮತಗಳ ಅಂತರದಿಂದ ಗೆದ್ದಿದ್ದೇನೆ. ಅಲ್ಲಿನ ಸಾಕಷ್ಟು ನಾಯಕರು, ಕಾರ್ಯಕರ್ತರು ಸಹಕಾರ ನೀಡಿದ್ದರಿಂದ ಗೆಲುವಾಗಿದೆ. ನಾನು ಹೊರಗಿನವನು ಎಂಬ ಟೀಕೆ ಮಾಡಿದವರಿಗೆ ಜನರು ಉತ್ತರ ಕೊಟ್ಟಿದ್ದಾರೆ ಎಂದರು.
ಜನರು ಯಾವುದನ್ನೂ ಮನಸ್ಸಿನಲ್ಲಿ ಇಟ್ಟುಕೊಳ್ಳದೇ ನನಗೆ ಆಶೀರ್ವಾದ ಮಾಡಿದ್ದಾರೆ. ನಾನು ಯಾವುದೇ ಸಚಿವ ಸ್ಥಾನದ ನಿರೀಕ್ಷೆ ಇಟ್ಟುಕೊಂಡಿಲ್ಲ. ಪಕ್ಷ ಏನೇ ಜವಾಬ್ದಾರಿ ಕೊಟ್ಟರೂ ಅದನ್ನು ನಿಭಾಯಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ರಾಜ್ಯ ರಾಜಕಾರಣದಿಂದ ರಾಷ್ಟ್ರಕ್ಕೆ: ಒಟ್ಟಿಗೆ ದೆಹಲಿ ವಿಮಾನವೇರಿದ ಇಬ್ಬರು ಮಾಜಿ ಸಿಎಂಗಳು - Union Cabinet Meeting