ಹೊಸ ವರ್ಷಕ್ಕೆ ಪುಷ್ಪಾಲಂಕೃತಗೊಂಡ ಶ್ರೀಕ್ಷೇತ್ರ ಧರ್ಮಸ್ಥಳ: ಮಂಜುನಾಥನ ದರ್ಶನಕ್ಕೆ ಭಕ್ತರ ದಂಡು - DECORATION FOR DHARMASTHALA TEMPLE
🎬 Watch Now: Feature Video
Published : Jan 1, 2025, 4:11 PM IST
ಮಂಗಳೂರು: ಹೊಸ ವರ್ಷವನ್ನು ಸ್ವಾಗತಿಸುವ ಸುಸಂದರ್ಭದ ಹಿನ್ನೆಲೆಯಲ್ಲಿ ಬುಧವಾರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಆಲಯಕ್ಕೆ ಪ್ರತಿ ವರ್ಷದಂತೆ ಭಕ್ತರು ವಿಶೇಷವಾಗಿ ಹೂವಿನ ಅಲಂಕಾರ ಮಾಡಿದ್ದಾರೆ. ಬೆಂಗಳೂರಿನ ಟಿವಿಎಸ್ ಕಂಪನಿಯ ಉದ್ಯಮಿ ಗೋಪಾಲ್ ರಾವ್ ಹಾಗೂ ಆನಂದ ಮೂರ್ತಿ ಅವರ ತಂಡ ಧರ್ಮಸ್ಥಳದ ದೇವಸ್ಥಾನ, ಧರ್ಮಾಧಿಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆಯವರ ಬೀಡು, ಅನ್ನಛತ್ರ ಸಹಿತ ಮುಂಭಾಗ, ಒಳಾಂಗಣ, ಹೊರಾಂಗಣ, ಗೋಪುರ ಹಾಗೂ ಮುಖಮಂಟಪವನ್ನು ಹೂ-ಹಣ್ಣುಗಳಿಂದ ಸಿಂಗರಿಸಿದ್ದಾರೆ. ಡಿ.25ರಿಂದ 80 ಮಂದಿಯ ತಂಡವು ಸತತವಾಗಿ ಅಲಂಕಾರ ಕಾರ್ಯದಲ್ಲಿ ತೊಡಗಿದ್ದು, ಅದನ್ನು ಪೂರ್ಣಗೊಳಿಸಿದೆ. ಈ ಬಾರಿ ದೇವಸ್ಥಾನದ ಮುಂಭಾಗ ಆದಿಯೋಗಿಯ ಪ್ರತಿಮೆಯೊಂದಿಗೆ ಸಿಂಗಾರಗೊಳಿಸಲಾಗಿದೆ. 16 ವರ್ಷಗಳಿಂದ ಈ ತಂಡ ಅಲಂಕಾರ ಮಾಡುತ್ತಿದ್ದು, ಪ್ರಸಕ್ತ ವರ್ಷ ಸುಮಾರು 20 ಲಕ್ಷ ರೂ. ವೆಚ್ಚದಲ್ಲಿ ಅಲಂಕರಿಸಲಾಗಿದೆ. ಸ್ವದೇಶಿ, ವಿದೇಶಿ ಹೂವುಗಳು, ಅಡಿಕೆ, ಭತ್ತದ ತೆನೆ, ಹೊಂಬಾಳೆ, ದಾಳಿಂಬೆ, ತೆಂಗಿನಕಾಯಿ, ಬಾಳೆಹಣ್ಣು, ಮೂಸಂಬಿ, ಕಬ್ಬು ಸಹಿತ 1 ಟನ್ ಹಣ್ಣು ಬಳಸಲಾಗಿದೆ. ಹೊಸ ವರ್ಷದ ಹಿನ್ನೆಲೆಯಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಉತ್ತರ ಕರ್ನಾಟಕ ಸೇರಿದಂತೆ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿನಿಂದಲೂ ಭಕ್ತರ ದಂಡು ಹರಿದು ಬರುತ್ತಿದೆ.
ಇದನ್ನೂ ಓದಿ: 2024 ಕ್ಕೆ ಬೈ ಬೈ ; ಹೊಸ ವರ್ಷದ ಸಂಭ್ರಮದಲ್ಲಿ ವಾಣಿಜ್ಯ ನಗರಿ ಮಂದಿ