ನವದೆಹಲಿ: ದೇಶದಲ್ಲಿ ಆದಷ್ಟು ಬೇಗ ಜನಗಣತಿ ನಡೆಬೇಕೆಂದು ಕಾಂಗ್ರೆಸ್ ಹಿರಿಯ ನಾಯಕಿ ಸೋನಿಯಾ ಗಾಂಧಿ ಸೋಮವಾರ ಕೇಂದ್ರ ಸರಕಾರಕ್ಕೆ ಆಗ್ರಹಿಸಿದ್ದಾರೆ. ಆಹಾರ ಭದ್ರತಾ ಕಾನೂನಿನಡಿ ಸೌಲಭ್ಯಗಳಿಂದ ವಂಚಿತರಾಗಿರುವ ದೇಶದ ಸುಮಾರು 14 ಕೋಟಿ ಜನರಿಗೆ ಆಹಾರ ಭದ್ರತೆ ಒದಗಿಸಲು ಬೇಗನೆ ಜನಸಂಖ್ಯಾ ಗಣತಿ ನಡೆಸಬೇಕು ಎಂದು ಅವರು ಹೇಳಿದ್ದಾರೆ.
ರಾಜ್ಯಸಭೆಯಲ್ಲಿ ಇದೇ ಮೊದಲ ಬಾರಿಗೆ ಶೂನ್ಯ ವೇಳೆಯಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ (ಎನ್ಎಫ್ಎಸ್ಎ) ಅಡಿ ಫಲಾನುಭವಿಗಳನ್ನು ಈಗಲೂ 2011 ರ ಜನಗಣತಿಯ ಆಧಾರದಲ್ಲಿ ಗುರುತಿಸಲಾಗುತ್ತಿದೆಯೇ ಹೊರತು ಇತ್ತೀಚಿನ ಜನಸಂಖ್ಯೆಯ ಅಂಕಿ - ಅಂಶಗಳ ಮೇಲಲ್ಲ ಎಂದು ಹೇಳಿದರು.
ನಾವು ತಂದ ಆಹಾರ ಭದ್ರತೆ ಕಾಯ್ದೆಯೇ ಕೋವಿಡ್ನಲ್ಲಿ ಪ್ರಮುಖ ಪಾತ್ರ ವಹಿಸಿದ್ದು: ಸೆಪ್ಟೆಂಬರ್ 2013 ರಲ್ಲಿ ಯುಪಿಎ ಸರ್ಕಾರ ಪರಿಚಯಿಸಿದ ಎನ್ಎಫ್ಎಸ್ಎ ದೇಶದ 140 ಕೋಟಿ ಜನಸಂಖ್ಯೆಗೆ ಆಹಾರ ಮತ್ತು ಪೌಷ್ಠಿಕಾಂಶದ ಭದ್ರತೆಯನ್ನು ಖಾತ್ರಿಪಡಿಸುವ ಗುರಿ ಹೊಂದಿರುವ ಹೆಗ್ಗುರುತು ಕಾಯ್ದೆಯಾಗಿದೆ. ವಿಶೇಷವಾಗಿ ಕೋವಿಡ್ -19 ಬಿಕ್ಕಟ್ಟಿನ ಸಮಯದಲ್ಲಿ ಲಕ್ಷಾಂತರ ದುರ್ಬಲ ಕುಟುಂಬಗಳನ್ನು ಹಸಿವಿನಿಂದ ರಕ್ಷಿಸುವಲ್ಲಿ ಈ ಶಾಸನವು ಪ್ರಮುಖ ಪಾತ್ರ ವಹಿಸಿದೆ ಎಂದು ಸೋನಿಯಾ ಬಣ್ಣಿಸಿದರು.
ಫಲಾನುಭವಿಗಳಿಗೆ ನೀಡಲಾಗುವ ಆಹಾರದ ಕೋಟಾವನ್ನು ಈಗಲೂ 2011 ರ ಜನಗಣತಿಯ ಆಧಾರದ ಮೇಲೆ ನಿರ್ಧರಿಸಲಾಗುತ್ತಿದೆ. ಆದರೆ, ಈ ಅಂಕಿ - ಸಂಖ್ಯೆಗಳು ಒಂದು ದಶಕದಷ್ಟು ಹಳೆಯದಾಗಿವೆ ಎಂದು ಅವರು ಹೇಳಿದರು.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013ರ ಅನ್ವಯ ದೇಶದ ಗ್ರಾಮೀಣ ಜನಸಂಖ್ಯೆಯ 75 ಪ್ರತಿಶತ ಮತ್ತು ನಗರ ಜನಸಂಖ್ಯೆಯ 50 ಪ್ರತಿಶತದಷ್ಟು ಜನರಿಗೆ ಸಾರ್ವಜನಿಕ ಪಡಿತರ ವಿತರಣಾ ವ್ಯವಸ್ಥೆ (ಟಿಪಿಡಿಎಸ್) ಅಡಿಯಲ್ಲಿ ಸಬ್ಸಿಡಿ ದರದಲ್ಲಿ ಆಹಾರ ಧಾನ್ಯಗಳನ್ನು ನೀಡಲಾಗುತ್ತಿದೆ. 2011 ರ ಜನಗಣತಿಯ ಪ್ರಕಾರ ಸುಮಾರು 81.35 ಕೋಟಿಯಷ್ಟು ಜನರಿಗೆ ಈ ವ್ಯವಸ್ಥೆಯಡಿ ಆಹಾರ ಧಾನ್ಯ ಪೂರೈಸಲಾಗುತ್ತಿದೆ. ಪ್ರಸ್ತುತ, ಕೇಂದ್ರ ಸರ್ಕಾರವು ಆಹಾರ ಭದ್ರತಾ ಕಾನೂನಿನ ಅಡಿಯಲ್ಲಿ ಪ್ರತಿ ವ್ಯಕ್ತಿಗೆ ತಿಂಗಳಿಗೆ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ಒದಗಿಸುತ್ತದೆ.
"ಸ್ವತಂತ್ರ ಭಾರತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಹತ್ತು ವರ್ಷಗಳಿಗೊಮ್ಮೆ ನಡೆಯಬೇಕಾದ ಜನಗಣತಿ ನಾಲ್ಕು ವರ್ಷಗಳಿಗಿಂತ ಹೆಚ್ಚು ವಿಳಂಬವಾಗಿದೆ. ಮೂಲತಃ 2021 ರಲ್ಲಿ ಜನಗಣತಿ ನಡೆಯಬೇಕಿತ್ತು. ಆದರೆ, ಈಗ ಜನಗಣತಿ ಯಾವಾಗ ನಡೆಯಲಿದೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟತೆ ಸಿಗುತ್ತಿಲ್ಲ. ಬಜೆಟ್ ಅವಲೋಕಿಸಿದರೆ ಈ ವರ್ಷವೂ ಜನಗಣತಿ ನಡೆಯುವ ಸಾಧ್ಯತೆಗಳು ಕಾಣಿಸುತ್ತಿಲ್ಲ" ಎಂದು ಅವರು ಹೇಳಿದರು.
ಹೊಸದಾಗಿ ಜನಗಣತಿ ನಡೆಯದ್ದರಿಂದ ಸುಮಾರು 14 ಕೋಟಿ ಅರ್ಹ ಭಾರತೀಯರು ಎನ್ಎಫ್ಎಸ್ಎ ಅಡಿಯಲ್ಲಿನ ಆಹಾರ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಅವರು ನುಡಿದರು.
ಇದನ್ನೂ ಓದಿ : ದೆಹಲಿ ಚುನಾವಣೆಯಲ್ಲಿ ಅತಿಹೆಚ್ಚು, ಅತಿ ಕಡಿಮೆ ಮತಗಳ ಅಂತರದಿಂದ ಗೆದ್ದ ಅಭ್ಯರ್ಥಿಗಳು ಇವರೇ ನೋಡಿ! - DELHI ELECTIONS 2025