ನವದೆಹಲಿ: ಮುಂಬೈ ಮೂಲದ ಡೀಪ್ ಟೆಕ್ ಸ್ಟಾರ್ಟಪ್ ಮನಸ್ತು ಸ್ಪೇಸ್ ಟೆಕ್ನಾಲಜೀಸ್, ಉಪಗ್ರಹಗಳನ್ನು ಅಪೇಕ್ಷಿತ ಕಕ್ಷೆಗಳಲ್ಲಿ ಇರಿಸಲು ಬಳಸುವ ತನ್ನ ಹಸಿರು ಪ್ರೊಪಲ್ಷನ್ ತಂತ್ರಜ್ಞಾನವನ್ನು ಬುಧವಾರ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ)ಗೆ ಹಸ್ತಾಂತರಿಸಿದೆ. ಸ್ಟಾರ್ಟ್ ಅಪ್ ಸಂಸ್ಥಾಪಕರಾದ ತುಷಾರ್ ಜಾಧವ್ ಮತ್ತು ಅಷ್ಟೇಶ್ ಕುಮಾರ್ ಅವರು ಐಬೂಸ್ಟರ್ ಗ್ರೀನ್ ಪ್ರೊಪಲ್ಷನ್ ಸಿಸ್ಟಮ್ (iBooster Green Propulsion System) ಅನ್ನು ಡಿಆರ್‌ಡಿಒ ಅಧ್ಯಕ್ಷ ಸತೀಶ್ ಕಾಮತ್ ಅವರಿಗೆ ಹಸ್ತಾಂತರಿಸಿದರು.
ಏನಿದರ ಕೆಲಸ?: 100-500 ಕೆ.ಜಿ ಉಪಗ್ರಹಗಳಿಗಾಗಿ ನಿರ್ದಿಷ್ಟವಾಗಿ ವಿನ್ಯಾಸಗೊಳಿಸಲಾದ ಐಬೂಸ್ಟರ್ ವ್ಯವಸ್ಥೆಯು ಕಕ್ಷೆಯನ್ನು ಹೆಚ್ಚಿಸುವುದು, ಸ್ಟೇಷನ್-ಕೀಪಿಂಗ್ ಮತ್ತು ಡಿ ಆರ್ಬಿಟಿಂಗ್ನಂಥ ಪ್ರಮುಖ ಕಾರ್ಯಾಚರಣೆಗಳನ್ನು ಸುಗಮಗೊಳಿಸುತ್ತದೆ. ಜಾಗತಿಕ ಮಟ್ಟದಲ್ಲಿ ಈ ತಂತ್ರಜ್ಞಾನದ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಇಸ್ರೋದ ಮುಂಬರುವ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ಮಿಷನ್‌ನಲ್ಲಿ ಈ ತಂತ್ರಜ್ಞಾನವನ್ನು ಬಾಹ್ಯಾಕಾಶದಲ್ಲಿ ಪರೀಕ್ಷಿಸಲಾಗುವುದು. ಸಾಂಪ್ರದಾಯಿಕ ವಿಷಕಾರಿ ಇಂಧನಗಳು ಮತ್ತು ಇತರ ದುಬಾರಿ ಪರ್ಯಾಯ ಇಂಧನಗಳಿಗೆ ಹೋಲಿಸಿದರೆ ಈಗ ತಯಾರಿಸಲಾದ ಹೈಡ್ರೋಜನ್ ಪೆರಾಕ್ಸೈಡ್ ಆಧಾರಿತ ಇಂಧನವು ವರ್ಧಿತ ಕಾರ್ಯಕ್ಷಮತೆ, ಸುರಕ್ಷತೆ ಮತ್ತು ಸುಸ್ಥಿರತೆಯನ್ನು ಖಚಿತಪಡಿಸುತ್ತದೆ.
ಈ ವಿಶಿಷ್ಟ ಪ್ರೊಪಲ್ಷನ್ ವ್ಯವಸ್ಥೆಯು ಭಾರತದ ರಕ್ಷಣೆಯನ್ನು ಹೆಚ್ಚಿಸುವಲ್ಲಿ ಡಿಆರ್ಡಿಒದ ಉಪಗ್ರಹ ಕಾರ್ಯಾಚರಣೆಗಳಿಗೆ ಸಾಟಿಯಿಲ್ಲದ ದಕ್ಷತೆ ಮತ್ತು ವಿಶ್ವಾಸಾರ್ಹತೆಯನ್ನು ನೀಡುತ್ತದೆ. ನಾಲ್ಕು ವರ್ಷಗಳ ಸಂಶೋಧನೆಯ ನಂತರ ಹೊಸ ತಂತ್ರಜ್ಞಾನವನ್ನು ಆವಿಷ್ಕರಿಸಲಾಗಿದ್ದು, ಇದಕ್ಕೆ ಡಿಆರ್ಡಿಒದ ತಂತ್ರಜ್ಞಾನ ಅಭಿವೃದ್ಧಿ ನಿಧಿ (ಟಿಡಿಎಫ್) ಬೆಂಬಲ ನೀಡಿತ್ತು. ರಾಷ್ಟ್ರೀಯ ರಕ್ಷಣಾ ಮತ್ತು ಬಾಹ್ಯಾಕಾಶ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಭಾರತೀಯ ಸ್ಟಾರ್ಟ್ಅಪ್ಗಳ ಹೆಚ್ಚುತ್ತಿರುವ ಪಾತ್ರವನ್ನು ಈ ಸಂಶೋಧನೆ ಅನಾವರಣಗೊಳಿಸಿದೆ.