ISRO Projects 2025: ಮುಂಬರುವ ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ಅಮೆರಿಕದ ಕಮ್ಯುನಿಕೇಶನ್ ಸ್ಯಾಟ್ಲೈಟ್ ಅನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಉಡಾವಣೆ ಮಾಡಲಿದೆ. ಇದರ ಸಹಾಯದಿಂದ ನಿಮ್ಮ ಸ್ಮಾರ್ಟ್‌ಫೋನ್ ನೇರವಾಗಿ ಬಾಹ್ಯಾಕಾಶಕ್ಕೆ ಕನೆಕ್ಟ್ ಆಗುವ ಮೂಲಕ ಇಂಟರ್ನೆಟ್ ಬಳಸಲು ಸಾಧ್ಯವಾಗುತ್ತದೆ.
ವಿಶೇಷವೆಂದರೆ, ಇದಕ್ಕಾಗಿ ಯಾವುದೇ ವಿಶೇಷ ಹ್ಯಾಂಡ್‌ಸೆಟ್ ಅಥವಾ ಟರ್ಮಿನಲ್ ಅಗತ್ಯವಿಲ್ಲ. ಇದು ಸಂಪೂರ್ಣ ಕಮರ್ಶಿಯಲ್ ಉಡಾವಣೆಯಾಗಿದ್ದು, ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂ ಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್‌ಎಸ್‌ಐಎಲ್) ನಡೆಸುತ್ತದೆ.
ಯೋಜನೆಯ ವಿಶೇಷತೆಗಳು: ಇಸ್ರೋ ಅಮೆರಿಕದ AST ಸ್ಪೇಸ್ ಮೊಬೈಲ್ ಕಂಪನಿಯ ಉಪಗ್ರಹವನ್ನು ಉಡಾವಣೆ ಮಾಡಲಿದೆ. ಈ ಮಿಷನ್ ವಿಶೇಷ ತಂತ್ರಜ್ಞಾನವನ್ನು ಆಧರಿಸಿದೆ. ಇದು ಮೊಬೈಲ್ ಫೋನ್‌ಗಳನ್ನು ನೇರವಾಗಿ ಉಪಗ್ರಹಗಳಿಗೆ ಸಂಪರ್ಕಿಸುವ ಸಾಮರ್ಥ್ಯ ನೀಡುತ್ತದೆ. ಅಮೆರಿಕದ ಕಂಪನಿಯೊಂದು ಭಾರತದಿಂದ ಬೃಹತ್ ಸಂವಹನ ಉಪಗ್ರಹವನ್ನು ಉಡಾವಣೆ ಮಾಡುತ್ತಿರುವುದು ಇದೇ ಮೊದಲು. ಭಾರತ ಇದುವರೆಗೆ ಅಮೆರಿಕದ ಕಂಪನಿಗಳ ಸಣ್ಣ ಉಪಗ್ರಹಗಳನ್ನು ಮಾತ್ರ ಉಡಾವಣೆ ಮಾಡಿತ್ತು.
ದಟ್ಟ ಕಾಡಿನಲ್ಲಿರಲಿ, ಸಮುದ್ರದ ಮಧ್ಯದಲ್ಲೇ ಇರಲಿ ಅಥವಾ ಜಗತ್ತಿನ ಯಾವುದೇ ಮೂಲೆಯಲ್ಲೂ ಮೊಬೈಲ್ ನೆಟ್‌ವರ್ಕ್ ಒದಗಿಸುವುದು ಈ ತಂತ್ರಜ್ಞಾನದ ಉದ್ದೇಶ. ಈ ಮೂಲಕ ಮೊಬೈಲ್ ಟವರ್ ಇಲ್ಲದೇ ಇದ್ದರೂ ಕರೆಗಳು ಮತ್ತು ಇಂಟರ್ನೆಟ್ ಸೇವೆ ದೊರೆಯಲಿದೆ. ನೆಟ್‌ವರ್ಕ್ ಕವರೇಜ್ ಪ್ರಮುಖ ಸವಾಲಾಗಿರುವ ಪ್ರದೇಶಗಳಿಗೆ ಇದು ಕ್ರಾಂತಿಕಾರಿಯಾಗಲಿದೆ.
ಹೇಗೆ ಕೆಲಸ ಮಾಡುತ್ತದೆ?: ಇದು ದೊಡ್ಡ ಮತ್ತು ಸುಧಾರಿತ ಉಪಗ್ರಹ. ಇದನ್ನು ಡೈರೆಕ್ಟ್-ಟು-ಸೆಲ್ ತಂತ್ರಜ್ಞಾನದಲ್ಲಿ ವಿನ್ಯಾಸಗೊಳಿಸಲಾಗಿದೆ. ಈ ಉಪಗ್ರಹ ನೇರವಾಗಿ ಫೋನ್‌ಗೆ ಸಂಕೇತಗಳನ್ನು ಕಳುಹಿಸುತ್ತದೆ. ಇದರಿಂದ ಮೊಬೈಲ್ ಯಾವುದೇ ಮಧ್ಯಂತರ ಟವರ್ ಅಥವಾ ನೆಟ್‌ವರ್ಕ್ ಇಲ್ಲದೆಯೇ ಕಾರ್ಯನಿರ್ವಹಿಸುತ್ತದೆ. ಅಂದರೆ ನಿಮ್ಮ ಸ್ಮಾರ್ಟ್‌ಫೋನ್ ನೇರವಾಗಿ ಬಾಹ್ಯಾಕಾಶಕ್ಕೆ ಸಂಪರ್ಕಗೊಳ್ಳುತ್ತದೆ.
ಆಂಟೆನಾ ಹೇಗಿದೆ?: ಈ ಉಪಗ್ರಹದ ಆಂಟೆನಾ ಸರಿಸುಮಾರು 64 ಚದರ ಮೀಟರ್ ಆಗಿರುತ್ತದೆ. ಅಂದರೆ, ಅರ್ಧ ಫುಟ್ಬಾಲ್ ಮೈದಾನದ ಗಾತ್ರಕ್ಕೆ ಸಮ. ಸುಮಾರು 6,000 ಕೆ.ಜಿ ತೂಗುತ್ತದೆ.
ಶ್ರೀಹರಿಕೋಟಾದಿಂದ ಇಸ್ರೋದ LVM-3 ರಾಕೆಟ್ (ಬಾಹುಬಲಿ) ಮೂಲಕ ಉಪಗ್ರಹವನ್ನು ಕಡಿಮೆ ಕಕ್ಷೆಯಲ್ಲಿ ಇರಿಸಲಾಗುತ್ತದೆ.
ಭಾರತದ ರಾಕೆಟ್ ಮತ್ತು ಉಡಾವಣಾ ವ್ಯವಸ್ಥೆಗಳ ಮೇಲೆ ಅಮೆರಿಕದ ಕಂಪನಿಗಳ ವಿಶ್ವಾಸವನ್ನು ಹೆಚ್ಚಿಸುವಲ್ಲಿ ಈ ಉಡಾವಣೆ ಇಸ್ರೋಗೆ ಮಹತ್ವದ್ದಾಗಿದೆ. ಈ ಹಿಂದೆ ಇಸ್ರೋ LVM-3 OneWeb ಉಪಗ್ರಹ ಸಮೂಹವನ್ನು ಎರಡು ಬಾರಿ ಯಶಸ್ವಿಯಾಗಿ ಉಡಾವಣೆ ಮಾಡಿತ್ತು.
ಪ್ರಯೋಜನಗಳು:
- ವಿಶ್ವಾದ್ಯಂತ ನೆಟ್‌ವರ್ಕ್ ಕವರೇಜ್: ಈಗ ದೂರದ ಪ್ರದೇಶಗಳಲ್ಲಿಯೂ ನೆಟ್‌ವರ್ಕ್ ಲಭ್ಯ.
- ವಿಪತ್ತು ನಿರ್ವಹಣೆಯಲ್ಲಿ ಸಹಾಯ: ಪ್ರವಾಹ, ಭೂಕಂಪ ಅಥವಾ ಮೊಬೈಲ್ ಟವರ್‌ಗಳು ಕಾರ್ಯನಿರ್ವಹಿಸದ ಯಾವುದೇ ದುರಂತದ ಸಮಯದಲ್ಲಿ, ಈ ತಂತ್ರಜ್ಞಾನವು ಅತ್ಯಂತ ಉಪಯುಕ್ತ.
- ಅಗ್ಗ ಮತ್ತು ಪ್ರವೇಶಿಸಬಹುದಾದ ನೆಟ್‌ವರ್ಕ್: ಮೊಬೈಲ್ ನೆಟ್‌ವರ್ಕ್ ಕಂಪನಿಗಳ ವೆಚ್ಚದಲ್ಲಿ ಕಡಿತವಾಗಲಿದೆ. ಇದು ಗ್ರಾಹಕರಿಗೆ ನೇರವಾಗಿ ಪ್ರಯೋಜನ ನೀಡುತ್ತದೆ.
ಇದನ್ನೂ ಓದಿ: ಹ್ಯುಂಡೈ ಕ್ರೆಟಾ EV: ಸಿಂಗಲ್ ಚಾರ್ಜ್ನಲ್ಲಿ 473 ಕಿ.ಮೀ ಪ್ರಯಾಣ