ಇಸ್ಲಾಮಾಬಾದ್: ಪಾಕಿಸ್ತಾನದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದ ಕುರ್ರಮ್ ಜಿಲ್ಲೆಯ ಜಿಲ್ಲಾಧಿಕಾರಿ (ಡಿಸಿ) ಗುಂಡಿನ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ. ಡಿಸಿ ಅವರ ವಾಹನದ ಮೇಲೆ ಶನಿವಾರ ಬಗಾನ್ ಬಳಿಯ ಕೊಜಲೈ ಬಾಬಾ ಗ್ರಾಮದ ಮಂಡೂರಿಯಲ್ಲಿ ಗುಂಡಿನ ದಾಳಿ ನಡೆಸಲಾಗಿದೆ.
ಶಿಯಾ ಮತ್ತು ಸುನ್ನಿ ಮುಸ್ಲಿಮರ ಪ್ರತಿಸ್ಪರ್ಧಿ ಪಂಥೀಯ ಬುಡಕಟ್ಟು ಜನಾಂಗಗಳ ಮಧ್ಯೆ ಮೂರು ದಿನಗಳ ಹಿಂದಷ್ಟೇ 14 ಅಂಶಗಳ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಕಳೆದ 2 ತಿಂಗಳಿಂದ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ನಡೆಯುತ್ತಿರುವ ಹಿಂಸಾಚಾರವನ್ನು ಕೊನೆಗಾಣಿಸಲು ಈ ಶಾಂತಿ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ ಅದಾಗಿ ಕೆಲವೇ ದಿನಗಳಲ್ಲಿ ಜಿಲ್ಲಾಧಿಕಾರಿ ವಾಹನದ ಮೇಲೆಯೇ ದಾಳಿ ನಡೆದಿದೆ.
ಹಿಂಸಾಚಾರದಿಂದಾಗಿ ಕಳೆದ 88 ದಿನಗಳಿಂದ ಈ ಪ್ರಾಂತ್ಯವು ದೇಶದ ಇತರ ಭಾಗಗಳೊಂದಿಗೆ ಸಂಪರ್ಕ ಕಡಿದುಕೊಂಡಿದೆ. ಇದರಿಂದ ಆಹಾರ ಮತ್ತು ಔಷಧಿಗಳ ಕೊರತೆ ಉಂಟಾಗಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 150ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಶಾಂತಿ ಒಪ್ಪಂದದ ನಂತರ ಪರಿಹಾರ ಸಾಮಗ್ರಿಗಳನ್ನು ಹೊತ್ತ ವಾಹನಗಳು ಪ್ರಾಂತ್ಯದೊಳಗೆ ಪ್ರವೇಶಿಸಬೇಕಿತ್ತು.
ಆದರೆ ಥಾಲ್-ಪರಚಿನಾರ್ ಸಡ್ಡಾ ಹೆದ್ದಾರಿಯನ್ನು ಬಂದ್ ಮಾಡಲಾಗಿರುವುದರಿಂದ ಮತ್ತು ಕುರ್ರಮ್ ಡಿಸಿ ಜಾವೇದ್ ಉಲ್ಲಾ ಮೆಹ್ಸೂದ್ ಹಾಗೂ ಅವರ ಇಬ್ಬರು ಭದ್ರತಾ ಸಿಬ್ಬಂದಿಯ ಮೇಲೆ ಶನಿವಾರ ಗುಂಡಿನ ದಾಳಿ ನಡೆದಿದ್ದರಿಂದ, ಜಿಲ್ಲಾ ಕೇಂದ್ರ ಪರಚಿನಾರ್ಗೆ ಹೋಗಬೇಕಿದ್ದ ಪರಿಹಾರ ಸಾಮಗ್ರಿ ಹೊತ್ತ 75 ಟ್ರಕ್ಗಳು ಮುಂದಕ್ಕೆ ಚಲಿಸಲು ಸಾಧ್ಯವಾಗಿಲ್ಲ.
"ಗಂಭೀರವಾಗಿ ಗಾಯಗೊಂಡ ಜಿಲ್ಲಾಧಿಕಾರಿಯನ್ನು ಪೇಶಾವರಕ್ಕೆ ಏರ್ ಲಿಫ್ಟ್ ಮಾಡಬೇಕಾಗಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಹೆಲಿಕಾಪ್ಟರ್ ಹಿಂತಿರುಗಬೇಕಾಯಿತು. ಹೆದ್ದಾರಿಯನ್ನು ಸಂಚಾರಕ್ಕೆ ಮುಕ್ತಗೊಳಿಸುವಂತೆ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಲು ಪ್ರಯತ್ನಿಸುತ್ತಿದ್ದಾಗ ಮೆಹ್ಸೂದ್ ಗೆ ಮೂರು ಗುಂಡು ತಗುಲಿವೆ. ದಾಳಿಯಲ್ಲಿ ಸ್ಥಳೀಯ ಅಪರಾಧಿಗಳು ಭಾಗಿಯಾಗಿರುವ ಶಂಕೆಯಿದೆ" ಎಂದು ಖೈಬರ್ ಪಖ್ತುನಖ್ವಾ ಸರ್ಕಾರದ ಮೂಲಗಳು ತಿಳಿಸಿವೆ.
ಡಿಸಿ ಅವರ ಭುಜ ಮತ್ತು ಕಾಲುಗಳಿಗೆ ಮೂರು ಗುಂಡು ತಗುಲಿದ್ದು, ತೀವ್ರ ರಕ್ತಸ್ರಾವವಾಗಿದೆ. ಅವರನ್ನು ಶೀಘ್ರದಲ್ಲೇ ಅಲಿಜೈನಿಂದ ಥಾಲ್ ಆಸ್ಪತ್ರೆಗೆ ಸ್ಥಳಾಂತರಿಸಲಾಗುವುದು. ಗಾಯಗೊಂಡಿರುವ ಪೊಲೀಸ್ ಕಾನ್ ಸ್ಟೇಬಲ್ ಮಿಸಾಲ್ ಖಾನ್, ಫ್ರಂಟಿಯರ್ ಕಾರ್ಪ್ಸ್ ಸೈನಿಕರಾದ ರಹೀಮುಲ್ಲಾ ಮತ್ತು ರಿಜ್ವಾನ್ ಸೇರಿದಂತೆ ಇತರ ಮೂವರನ್ನು ಕೂಡ ಆಸ್ಪತ್ರೆಗೆ ಕರೆತರಲಾಗಿದೆ ಎಂದು ಸರ್ಕಾರದ ಮೂಲಗಳು ಹೇಳಿವೆ. ಮೆಹ್ಸೂದ್ ಸದ್ಯ ಅಪಾಯದಿಂದ ಪಾರಾಗಿದ್ದಾರೆ. ಇದೀಗ ಶಸ್ತ್ರಚಿಕಿತ್ಸೆ ನಡೆಯುತ್ತಿದೆ, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಕೆಪಿ ಸರ್ಕಾರದ ಸಲಹೆಗಾರ ಬ್ಯಾರಿಸ್ಟರ್ ಸೈಫ್ ಮಾಹಿತಿ ನೀಡಿದರು.
ಇದನ್ನೂ ಓದಿ: ಇಸ್ರೇಲ್ - ಹಿಜ್ಬುಲ್ಲಾ ನಡುವಿನ ಕದನ ವಿರಾಮ ಮುಂದುವರಿಯುವ ಸಾಧ್ಯತೆ: ವಿಶ್ಲೇಷಕರು - ISRAEL AND HEZBOLLAH CEASEFIRE