ನವದೆಹಲಿ: 1998 ರಿಂದ ದೆಹಲಿಯಲ್ಲಿ ಬಿಜೆಪಿಗೆ ಸರ್ಕಾರ ರಚಿಸಲು ಸಾಧ್ಯವಾಗದಿದ್ದರೂ, ಅದರ ಮತಗಳ ಪ್ರಮಾಣವು ಆಶ್ಚರ್ಯಕರ ರೀತಿಯಲ್ಲಿ ಚೇತರಿಸಿಕೊಂಡಿದೆ. ಆಗಿನಿಂದಲೂ ಬಿಜೆಪಿ ತನ್ನ ಹಿಡಿತವನ್ನು ಇಟ್ಟುಕೊಂಡೇ ಬಂದಿದೆ. 2015ರ ಚುನಾವಣೆಯಲ್ಲಿ ಕೇವಲ ಮೂರು ಸ್ಥಾನಗಳನ್ನು ಗೆದ್ದಿದ್ದರೂ ಬಿಜೆಪಿ ಶೇ.32.19ರಷ್ಟು ಮತಗಳನ್ನು ಪಡೆದುಕೊಂಡಿತ್ತು. 2020ರಲ್ಲಿ ಅದು ಶೇ.38.51ರಷ್ಟು ಮತಗಳನ್ನು ಗಳಿಸಿತ್ತು. ಆಗ ಬಂದಿದ್ದು ಕೇವಲ 8 ಸ್ಥಾನಗಳಷ್ಟೇ.
ಇನ್ನು, ಬಿಜೆಪಿ ಲೋಕಸಭಾ ಚುನಾವಣೆಯಲ್ಲಿ ದೆಹಲಿಯಲ್ಲಿ ಕ್ಲೀನ್ ಸ್ವೀಪ್ ಮಾಡಿದೆ. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಮಾತ್ರ ಅದು ಸಾಧ್ಯವಾಗಿರಲಿಲ್ಲ. ಹೀಗಾಗಿ ಇಂದಿನ ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.
ಈ ಬಾರಿ ಬಿಜೆಪಿ ಶೇ. 47 ರಷ್ಟು ಮತಗಳನ್ನು ಪಡೆಯುವ ಮೂಲಕ ಅಧಿಕಾರದ ಗದ್ದುಗೆಯತ್ತ ದಾಪುಗಾಲು ಇಡುತ್ತಿದೆ. ಇನ್ನು ಪ್ರಬಲ ಪ್ರತಿಸ್ಪರ್ಧಿ ಆಪ್ ಶೇ. 43 ರಷ್ಟು ಮತ ಪಡೆದಿದೆ. ಕಳೆದ ಬಾರಿ ಆಪ್ ಸುಮಾರು ಶೇ 53ರಷ್ಟು ಮತಗಳನ್ನು ಪಡೆದುಕೊಂಡಿತ್ತು. 2015 ರಲ್ಲಿ ಈ ಪ್ರಮಾಣ ಇನ್ನೂ ಹೆಚ್ಚಿತ್ತು. ಆದರೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ಪಕ್ಷ ಇದೇ ಮೊದಲ ಬಾರಿ ಶೇ. 43 ರಷ್ಟು ಮತ ಪ್ರಮಾಣಕ್ಕೆ ಕುಸಿತ ಕಂಡಿದೆ.
ಬಿಜೆಪಿ ಚೇತರಿಕೆಗೆ ಕಾರಣ : ಚುನಾವಣೆ ಹೊಸ್ತಿಲಲ್ಲೇ, ಆಮ್ ಆದ್ಮಿ ಪಕ್ಷದಲ್ಲಿ ಒಂದೇ ದಿನ ಪಕ್ಷದ ಏಳೂ ಹಾಲಿ ಶಾಸಕರು ರಾಜೀನಾಮೆ ನೀಡಿದ್ದು, ಪಕ್ಷಕ್ಕೆ ಭಾರೀ ಹಿನ್ನಡೆ ಆಗಲು ಪ್ರಮುಖ ಕಾರಣವಾದರೆ, ಇದೇ ಬಿಜೆಪಿ ಪಕ್ಷದ ಮತಗಳ ಪ್ರಮಾಣದ ಚೇತರಿಕೆಗೂ ಪ್ರಮುಖ ಕಾರಣ ಎಂದು ಹೇಳಲಾಗುತ್ತಿದೆ.
2020ರಲ್ಲಿ ಎಎಪಿಯವರು ಉಚಿತ ನೀರು, ಉಚಿತ ವಿದ್ಯುತ್ ಮತ್ತು ಉತ್ತಮ ಶಾಲೆಗಳ ಭರವಸೆ ನೀಡಿ ಗೆದ್ದು ಬಂದರು. ಆದರೆ, ಆಡಳಿತಕ್ಕೆ ಬಂದ ಮೇಲೆ ಕಳೆದ ಐದು ವರ್ಷಗಳಲ್ಲಿ ಇವರ ಆಡಳಿತ ನೋಡಿದ್ದು, ಕೊಟ್ಟ ಭರವಸೆ ಈಡೇರಿಸಲು ಅವರು ವಿಫಲರಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಆಮ್ ಆದ್ಮಿ ಪಾರ್ಟಿ - ಬಿಜೆಪಿ - ಕಾಂಗ್ರೆಸ್ ನಡುವೆ ತ್ರಿಕೋಣ ಸ್ಪರ್ಧೆ ಏರ್ಪಟ್ಟರೂ, ಆಮ್ ಆದ್ಮಿ ಮತ್ತು ಬಿಜೆಪಿ ಮಧ್ಯೆ ಬಹುತೇಕ ನೇರ ಸ್ಪರ್ಧೆ ಏರ್ಪಟ್ಟಿದೆ. ಇದು ಸಹ ಮತಗಳ ಕ್ರೋಢೀಕರಣಕ್ಕೆ ಕಾರಣವಾಯ್ತು ಎಂದು ವಿಶ್ಲೇಷಿಸಲಾಗುತ್ತಿದೆ.
ಇಂಡಿಯಾ ಮೈತ್ರಿಕೂಟದ ಭಾಗವಾಗಿರುವ ಆಪ್ - ಕಾಂಗ್ರೆಸ್ ಪಾರ್ಟಿಗಳು, ಚುನಾವಣಾ ಪ್ರಚಾರದಲ್ಲಿ ಪರಸ್ಪರ ಸ್ಪರ್ಧೆಗಿಳಿದಿದ್ದು, ಕೇಜ್ರಿವಾಲ್ ವಿರುದ್ಧ ರಾಹುಲ್ ನೇರ ವಾಗ್ದಾಳಿ ಮಾಡಿದ್ದು ಬಿಜೆಪಿಗೆ ಲಾಭವಾಗಿದೆ. ಯಮುನಾ ನದಿ ಕಲುಷಿತ ನೀರಿನ ವಿಚಾರವೂ ಈ ಚುನಾವಣೆಯಲ್ಲಿ ಪ್ರಭಾವ ಬೀರಿದೆ.
ರಾಜ್ಯ ಬಿಜೆಪಿ ಒಗ್ಗಟ್ಟಿನ ಹೋರಾಟ : ದೆಹಲಿ ಬಿಜೆಪಿ ಅಧ್ಯಕ್ಷ ವೀರೇಂದ್ರ ಸಚ್ದೇವ್ ಎಲ್ಲ ಸ್ಥಳೀಯ ನಾಯಕರನ್ನು ಒಗ್ಗಟ್ಟಿನಿಂದ ಕರೆದುಕೊಂಡು ಹೋಗಿದ್ದು, ಪಕ್ಷಕ್ಕೆ ಭಾರಿ ಲಾಭ ತಂದುಕೊಟ್ಟಿದೆ. ಅಷ್ಟೇ ಅಲ್ಲ, ಈ ಬಾರಿ ಬಿಜೆಪಿ ವ್ಯವಸ್ಥಿತವಾಗಿ ತಳಮಟ್ಟದ ಪ್ರಚಾರ ನಡೆಸಿದ್ದು ಗೆಲುವಿಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.
ಭ್ರಷ್ಟಾಚಾರ ಬಯಲಿಗೆ ಎಳೆದಿದ್ದು : ಅರವಿಂದ್ ಕೇಜ್ರಿವಾಲ್ ಸರ್ಕಾರದ ಭ್ರಷ್ಟಾಚಾರವನ್ನು ಜನರಿಗೆ ತಿಳಿ ಹೇಳಿದ್ದು ಕೂಡಾ ಕೆಲಸ ಮಾಡಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಸದ್ಯದ ಟ್ರೆಂಡ್ ಪ್ರಕಾರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮುಂದಿದೆ. ಒಟ್ಟು 70 ಸ್ಥಾನಗಳಲ್ಲಿ ಬಹುಮತಕ್ಕೆ ಅಗತ್ಯವಿರುವ 40 ಸ್ಥಾನಗಳಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಬಿಜೆಪಿ ಮುನ್ನಡೆ ಸಾಧಿಸುತ್ತಿರುವುದರಿಂದ ಕಾರ್ಯಕರ್ತರು ಸಂತೋಷಗೊಂಡಿದ್ದಾರೆ. ಆಮ್ ಆದ್ಮಿ ಪಕ್ಷದ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಿನ್ನಡೆ ಅನುಭವಿಸಿದ್ದಾರೆ.