ಕಾರವಾರ (ಉತ್ತರ ಕನ್ನಡ): ಮೀಟರ್ ಬಡ್ಡಿಗೆ ಪಡೆದಿದ್ದ 1.20 ಲಕ್ಷ ರೂ. ಹಣಕ್ಕೆ 12 ಲಕ್ಷ ರೂ. ಬಡ್ಡಿ ಕಟ್ಟಿದ್ದರೂ ಕೂಡ ಸಾಲದ ಹಣ ಸಮಯಕ್ಕೆ ಸರಿಯಾಗಿ ಮರಳಿ ಕೊಡಲಿಲ್ಲ ಎಂದು ಜೀವ ಬೆದರಿಕೆ ಹಾಕಿ, ಮನೆಯಲ್ಲಿದ್ದ ಹೊಸ ಟ್ರ್ಯಾಕ್ಟರ್ ತೆಗೆದುಕೊಂಡು ಹೋದ ಘಟನೆ ಜಿಲ್ಲೆಯ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ದೂರಿನ ವಿವರ: ಮುಂಡಗೋಡ ತಾಲೂಕಿನ ಇಂದೂರ ಗ್ರಾಮದ ಮಹೇಶ ದೊಡ್ಡಮನಿ ಎಂಬವರು ಪೊಲೀಸರಿಗೆ ದೂರು ನೀಡಿದ್ದರು. ತಾನು ಎರಡು ವರ್ಷಗಳ ಹಿಂದೆ ಜಹೀರ್ ಶಬೀರ ಶೇಖ್ ಅವರಿಂದ 80 ಸಾವಿರ ಹಾಗೂ ಕರಿಂಖಾನ್ ಖಾನಜಾದೆ ಎಂಬವರಿಂದ 60 ಸಾವಿರ ಎರಡು ತಿಂಗಳಿಗೆ ಕೈಗಡ ಪಡೆದಿದ್ದು, ಆದರೆ ಸಮಯಕ್ಕೆ ಕಟ್ಟಲು ಸಾಧ್ಯವಾಗಿರಲಿಲ್ಲ. ಆದರೆ, ಪ್ರತಿ ವಾರವೂ ಹನ್ನೊಂದು ಸಾವಿರ ರೂ. ಬಡ್ಡಿ ಹಣವನ್ನು ನೀಡುತ್ತಿದ್ದೆ. ಒಟ್ಟಾರೆ ಸಾಲ ಪಡೆದಿದ್ದ 1.20 ಲಕ್ಷ ರೂ. ಹಣಕ್ಕೆ 12 ಲಕ್ಷ ರೂ. ತುಂಬಿದ್ದೇನೆ ಎಂದು ದೂರಿನಲ್ಲಿ ವಿವರಿಸಿದ್ದಾರೆ.
ನಂತರ ಕೆಲ ತಿಂಗಳು ಬಡ್ಡಿ ಹಣ ಕೊಡಲು ಆಗದಿದ್ದಾಗ ಆರೋಪಿಗಳು ನನ್ನ ಮನೆಗೆ ಬಂದು ನೀನು ಪಡೆದ ಸಾಲ ಹಾಗೂ ಬಡ್ಡಿ ಸೇರಿ 3 ಲಕ್ಷ 80 ಸಾವಿರ ಕೊಡಬೇಕು ಅಂತಾ ಹೇಳಿದ್ದಾರೆ. ಅಲ್ಲದೇ, ಹಣ ಕೊಡದಿದ್ದರೆ ಮನೆಯಲ್ಲಿನ ಸಾಮಾನುಗಳನ್ನು ತೆಗೆದುಕೊಂಡು ಹೋಗುತ್ತೇವೆ ಎಂದು ಜೀವ ಬೆದರಿಕೆ ಹಾಕಿ ಹಲ್ಲೆ ನಡೆಸಿ, ಮನೆಯಲ್ಲಿದ್ದ ಹೊಸ ಟ್ರ್ಯಾಕ್ಟರ್ ಅನ್ನು ತೆಗೆದುಕೊಂಡು ಹೊಗಿದ್ದಾರೆ ಎಂದು ದೂರಿನಲ್ಲಿ ಮಹೇಶ ದೊಡ್ಡಮನಿ ತಿಳಿಸಿದ್ದರು.
ಈ ಕುರಿತು ಆರೋಪಿತರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಮಹೇಶ ಮನವಿ ಮಾಡಿದ್ದರು. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಕರಿಂಖಾನ್ ಖಾನಜಾದೆ ಎಂಬ ಆರೋಪಿಯನ್ನು ಬಂಧಿಸಿ, ಮುಂದಿನ ಕ್ರಮ ಜರುಗಿಸಿದ್ದಾರೆ.
ಇದನ್ನೂ ಓದಿ: ಪರ ಸ್ತ್ರೀಯೊಂದಿಗೆ ಸಲುಗೆ: ಸುಪಾರಿ ನೀಡಿ ಗಂಡನ ಕಾಲು ಮುರಿಸಿದ ಪತ್ನಿ ಜೈಲಿಗೆ