ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯಡಿ 42 ಕೋಟಿ ರೂ ವೆಚ್ಚದಲ್ಲಿ ಬಸ್ ನಿಲ್ದಾಣ ಕಾಮಗಾರಿ ಕೈಗೆತ್ತಿಕೊಳ್ಳಲಾಗಿತ್ತು. 2022ರ ಜೂನ್‌ನಲ್ಲಿ ಕೆಲಸ ಪ್ರಾರಂಭವಾಗಿ 2024ರ ಆಗಸ್ಟ್‌ನೊಳಗೆ ಪೂರ್ಣಗೊಳ್ಳುವ ನಿರೀಕ್ಷೆಯಿತ್ತು. ಆದಾಗ್ಯೂ, ಹಲವಾರು ವಿಳಂಬಗಳ ಕಾರಣ ಗಡುವನ್ನು ಡಿಸೆಂಬರ್ 2024ರವರೆಗೂ ವಿಸ್ತರಿಸಲಾಗಿತ್ತು. ಈ ಮಧ್ಯೆ ಹಳೆ ಬಸ್ ನಿಲ್ದಾಣವನ್ನು ನೆಚ್ಚಿಕೊಂಡಿದ್ದ ವ್ಯಾಪಾರಸ್ಥರು, ಪ್ರಯಾಣಿಕರು ನಿತ್ಯ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕರ ಅಭಿಪ್ರಾಯ: ಪ್ರಯಾಣಿಕ ವಿಜಯಕುಮಾರ್ ಕಲಾದಗಿ ಅವರು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿ, "ಹಳೇ ನಿಲ್ದಾಣವಿದ್ದಾಗ ಎಲ್ಲಾ ಅನುಕೂಲಗಳಿದ್ದವು. ಈಗ ಮಹಿಳೆಯರು, ಮಕ್ಕಳು, ವೃದ್ಧರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಡುವ ಸ್ಥಿತಿಯಿದೆ. ಇಲ್ಲಿ ಮೂಲಭೂತ ಸೌಲಭ್ಯಗಳಿಲ್ಲ. ಕುಳಿತುಕೊಳ್ಳಲು ಸೀಟ್ ಇಲ್ಲ. ಕುಡಿಯಲು ನೀರಿಲ್ಲ. ಈ ಹಿಂದೆ ಹೋಟೆಲ್‌ಗಳಿದ್ದವು. ಈಗ ಜನರು ಬಿಸಿಲಿನಲ್ಲಿ ನಿಂತುಕೊಳ್ಳಬೇಕು. ಆದಷ್ಟು ಬೇಗ ನಿಲ್ದಾಣ ಉದ್ಘಾಟಿಸಿದರೆ ಒಳ್ಳೆದು" ಎಂದರು.
ಅಣ್ಣಿಗೇರಿ ಪ್ರಯಾಣಿಕ ಜೀವನ್ ಎಂಬವರು ಮಾತನಾಡಿ, "ಈಗ ನಾವು ಎಲ್ಲಿ ಇಳಿಯಬೇಕು, ಎಲ್ಲಿ ಬಸ್ ಹತ್ತಬೇಕು ಎಂಬ ಗೊಂದಲದಲ್ಲಿದ್ದೇವೆ. ಇಲ್ಲಿ ಮಾರ್ಕೆಟ್ ಮಾಡಿಕೊಂಡು ಬಸ್ ಹತ್ತಿ ಊರೆಡೆ ಹೋಗಬೇಕಾದರೆ ನಮ್ಮ ಊರೆಡೆ ಹೋಗುವ ಬಸ್ ಬರುವುದಿಲ್ಲ. ಹೀಗಾಗಿ ಹೊಸೂರ ಬಸ್ ನಿಲ್ದಾಣಕ್ಕೆ ಹೋಗಿ ಹತ್ತಬೇಕಾದ ಅನಿವಾರ್ಯತೆ ಇದೆ. ಇಲ್ಲವೇ ಅಲ್ಲಲ್ಲಿ ಮಧ್ಯದ ಸ್ಟಾಪ್ಗಳಲ್ಲಿ ಹತ್ತಬೇಕು. ಆಗ ಎಲ್ಲಾ ಸೀಟ್ ತುಂಬಿಕೊಂಡು ಬಸ್ ಬರುವುದರಿಂದ ನಿಂತುಕೊಂಡು ಪ್ರಯಾಣ ಮಾಡುಬೇಕು" ಎಂದು ಅಸಮಾಧಾನ ಹೊರಹಾಕಿದರು.
ಪ್ರಯಾಣಿಕ ರಾಜೇಶ ಬಿಜವಾಡ ಎಂಬವರು ಪ್ರತಿಕ್ರಿಯಿಸಿ, "ಹಳೇ ಬಸ್ ನಿಲ್ದಾಣದಲ್ಲಿ ಈ ಹಿಂದೆ ವ್ಯಾಪಾರ ವಹಿವಾಟು ಚೆನ್ನಾಗಿತ್ತು. ಆದರೆ ಈಗ ನಾಲ್ಕು ವರ್ಷದ ಕಾಮಗಾರಿಯಿಂದ ಎಲ್ಲ ವ್ಯಾಪಾರಕ್ಕೆ ಹೊಡೆತ ಬಿದ್ದಿದೆ. ಹೋಟೆಲ್, ಹಣ್ಣು, ಸೇರಿದಂತೆ ಇತರೆ ವ್ಯಾಪಾರಿಗಳು ನಷ್ಟದಲ್ಲಿದ್ದಾರೆ. ಎಲ್ಲಾ ಕಡೆಯಿಂದ ಬರುವ ಬಸ್ಗಳು ಈ ನಿಲ್ದಾಣಕ್ಕೆ ಬಂದರೆ ಉತ್ತಮ. ಈಗ ಕೇವಲ ನಗರ ಸಾರಿಗೆ ಹಾಗೂ ಉಪನಗರ ಸಾರಿಗೆ ಮೀಸಲು ಮಾಡಿದರೆ ಮತ್ತೆ ಅನಾನುಕೂಲವಾಗಲಿದೆ. ಇಲ್ಲಿಂದ ಮೂರು ಕಡೆ ಬಸ್ ನಿಲ್ದಾಣಕ್ಕೆ ಹೋಗಿ ತಮ್ಮ ಊರಿಗೆ ಹೋಗಬೇಕು ಆಗ ಅರ್ಧ ದುಡ್ಡು ಆಟೋಗೆ ಕೊಡಬೇಕು" ಎಂದರು.
ಹಿರಿಯ ನಾಗರಿಕ ಮೌಲಾಸಾಬ್ ಎಂಬವರು ಪ್ರತಿಕ್ರಿಯಿಸಿ, "ನಗರದಲ್ಲಿ ಮೂರು ಬಸ್ ನಿಲ್ದಾಣ ಮಾಡಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಹಿಂದೆ ಇದ್ದ ಬಸ್ ನಿಲ್ದಾಣಕ್ಕೆ ಎಲ್ಲಾ ಬಸ್ಗಳು ಬರುತ್ತಿದ್ದವು. ಆಗ ಬಹಳ ಅನುಕೂಲವಿತ್ತು. ದೊಡ್ಡ ಬಸ್ ನಿಲ್ದಾಣ ಕಟ್ಟಿದ್ದಾರೆ. ಆದಷ್ಟು ಬೇಗ ಬಸ್ ಒಳಗಡೆ ಬಿಟ್ಟರೆ ಅನುಕೂಲವಾಗಲಿದೆ" ಎಂದು ಹೇಳಿದರು.
ಮಹಿಳಾ ಪ್ರಯಾಣಿಕರಾದ ಶಂಕ್ರವ್ವ ಅವರು ಪ್ರತಿಕ್ರಿಯಿಸಿ, "ಈ ಹಿಂದಿನ ಹಳೆ ಬಸ್ ನಿಲ್ದಾಣ ಬಹಳ ಅನುಕೂಲವಿತ್ತು. ಮಾರ್ಕೆಟ್, ಆಸ್ಪತ್ರೆ ಹತ್ತಿರವಾಗುತ್ತಿದ್ದವು. ಆದರೆ ಈಗ ಮೂರು ಕಡೆ ಬಸ್ ನಿಲ್ದಾಣ ಮಾಡಿದ್ದಾರೆ. ಅಕ್ಷರಸ್ಥರಿಗೆ ಎಲ್ಲಿ ಬಸ್ ಹತ್ತಬೇಕು ಇಳಿಯಬೇಕು ಎಂದು ಗೊತ್ತಾಗುತ್ತದೆ. ಆದರೆ ಅನಕ್ಷರಸ್ಥರಾದವರು ಗೊಂದಲಕ್ಕೊಳಗಾಗಿ ಪರದಾಡುತ್ತಾರೆ. ಮಹಿಳಾ ಪ್ರಯಾಣಿಕರಿಗೆ ಶೌಚಾಲಯದ ಅನುಕೂಲ ಕೂಡ ಇಲ್ಲ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಟೋ ಚಾಲಕ ನಾಗರಾಜ್ ಹಾಗೂ ಸಂತೋಷ ಮಾತನಾಡಿ, "ಹಳೇ ಬಸ್ ನಿಲ್ದಾಣ ಕೇವಲ ನಗರ ಹಾಗೂ ಪ್ರಾದೇಶಕ ಬಸ್ಗಾಗಿ ಮಾಡಿದ್ದರಿಂದ ಇಲ್ಲಿನ ನಮ್ಮಂತಹ ಆಟೋ ಚಾಲಕರು, ಹೋಟೆಲ್ ಉದ್ಯಮಿಗಳು, ಸಣ್ಣಪುಟ್ಟ ವ್ಯಾಪಾರಿಗಳಿಗೆ ತೊಂದರೆಯಾಗಲಿದೆ. ಈ ಹಿಂದಿನಂತೆ ಜಿಲ್ಲಾ ಕೇಂದ್ರದಿಂದ ಬರುವ ಬಸ್ಗಳು ಹಾಗೂ ತೆರಳುವ ಬಸ್ಗಳಿಗೆ ಇಲ್ಲಿ ವ್ಯವಸ್ಥೆ ಕಲ್ಪಿಸಿದರೆ ನಾವು ಬದುಕುತ್ತೇವೆ. ಇಲ್ಲವಾದರೆ ಎಲ್ಲರೂ ತೊಂದರೆ ಅನುಭವಿಸಬೇಕಾಗುತ್ತದೆ" ಎಂದು ತಿಳಿಸಿದರು.
ಜನಪ್ರತಿನಿಧಿಗಳು ದಿನಾಂಕ ಕೊಟ್ಟರೆ ಉದ್ಘಾಟನೆ: ಹುಬ್ಬಳ್ಳಿ-ಧಾರವಾಡ ಸ್ಮಾರ್ಟ್ ಸಿಟಿ ಯೋಜನೆಯ ವ್ಯವಸ್ಥಾಪಕ ನಿರ್ದೇಶಕ ರುದ್ರೇಶ ಗಾಳಿ ಪ್ರತಿಕ್ರಿಯಿಸಿ, "ಒಂದು ವಾರದೊಳಗೆ ಬಸ್ ನಿಲ್ದಾಣ ಉದ್ಘಾಟಿಸುತ್ತೇವೆ. ಈಗಾಗಲೇ ನಗರಾಭಿವೃದ್ಧಿ ಸಚಿವರು, ಸಾರಿಗೆ ಸಚಿವರು, ಜಿಲ್ಲಾ ಉಸ್ತುವಾರಿ, ಕೇಂದ್ರ ಸಚಿವರನ್ನು ಭೇಟಿಯಾಗಿ ದಿನಾಂಕ ಕೇಳಿದ್ದೇವೆ. ಎಲ್ಲಾ ಜನಪ್ರತಿನಿಧಿಗಳು ದಿನಾಂಕ ಕೊಟ್ಟರೆ ಉದ್ಘಾಟನೆ ಮಾಡಲಾಗುತ್ತದೆ. ಅದಾದ ನಂತರ ವಾಯುವ್ಯ ಸಾರಿಗೆ ಸಂಸ್ಥೆಗೆ ಹಸ್ತಾಂತರ ಮಾಡಿದ ಮೇಲೆ ಬಸ್ ನಿಲ್ದಾಣ ಕಾರ್ಯಚರಣೆ ನಡೆಸಲಿದೆ" ಎಂದು ಮಾಹಿತಿ ನೀಡಿದರು.
ಇದನ್ನೂ ಓದಿ: ಹುಬ್ಬಳ್ಳಿ ಹಳೇ ಬಸ್ ನಿಲ್ದಾಣ ಹೊಸ ರೂಪದೊಂದಿಗೆ ಪುನಾರಂಭಕ್ಕೆ ದಿನಗಣನೆ