ಕೋಯಿಕ್ಕೋಡ್(ಕೇರಳ): ಜಿಲ್ಲೆಯಲ್ಲಿ ನಡೆದ ದೇವಸ್ಥಾನ ಉತ್ಸವದ ಸಂದರ್ಭದಲ್ಲಿ ದೇವಾಲಯದ ಎರಡು ಆನೆಗಳು ದಾಳಿ ಮಾಡಿದ್ದು, ಮೂವರು ಸಾವನ್ನಪ್ಪಿ, 30 ಜನರು ಗಾಯಗೊಂಡಿರುವ ಘಟನೆ ಗುರುವಾರ ಸಂಜೆ ನಡೆದಿದೆ.
ಕುರುವಂಗಡ್‌ನ ಲೀಲಾ ಮತ್ತು ಅಮ್ಮುಕ್ಕುಟ್ಟಿ ಮತ್ತು ಕೊಯಿಲಾಂಡಿಯ ರಾಜನ್ ಮೃತರು. ಗಾಯಗೊಂಡ ಮೂವತ್ತು ಜನರನ್ನು ಚಿಕಿತ್ಸೆಗಾಗಿ ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ 12 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ, 10 ವರ್ಷದ ಮಗುವಿಗೆ ಐಎಂಎಸ್‌ಸಿಯಲ್ಲಿ ಆರೈಕೆ ನೀಡಲಾಗುತ್ತಿದೆ. ಇಬ್ಬರ ಕಾಲಿಗೆ ಗಾಯಗಳಾಗಿದ್ದು, ವೈದ್ಯರ ತಂಡಗಳು ಗಾಯಾಳುಗಳನ್ನು ಪರೀಕ್ಷಿಸುತ್ತಿದ್ದಾರೆ. ಮೂವರು ಮೃತರ ಮರಣೋತ್ತರ ಪರೀಕ್ಷೆಯನ್ನು ಇಂದು ಬೆಳಗ್ಗೆ ನಡೆಸಲಾಗಿದೆ.
ಪೊಲೀಸರ ಹೇಳಿಕೆ: "ಕೊಯಿಲಾಂಡಿ ಪ್ರದೇಶದ ಮನಕುಲಂಗರ ದೇವಸ್ಥಾನದಲ್ಲಿ ಹಬ್ಬಕ್ಕೆ ಪಟಾಕಿ ಸಿಡಿದ್ದರಿಂದ ಪೀತಾಂಬರನ್ ಎಂಬ ಆನೆ ಗಾಬರಿಗೊಂಡು ಓಡಲು ಆರಂಭಿಸಿತು. ಈ ವೇಳೆ ಸಮೀಪದಲ್ಲಿ ನಿಂತಿದ್ದ ಮತ್ತೊಂದು ಆನೆ ಗೋಕುಲ್ ಮೇಲೆ ಪೀತಾಂಬರನ್ ಹಲ್ಲೆ ನಡೆಸಿತು. ಇದರಿಂದಾದ ಗೊಂದಲದಲ್ಲಿ ಸೇರಿದ್ದ ಭಕ್ತ ಸಮೂಹ ಓಡಲು ಪ್ರಾರಂಭಿಸಿದೆ. ಪರಿಣಾಮ ಕಾಲ್ತುಳಿತ ಸಂಭವಿಸಿ ಮೂವರ ಸಾವಾಗಿದೆ. ಆನೆಗಳು ದೇವಾಲಯದ ಕಚೇರಿಯನ್ನು ಕೆಡವಿದವು. ಕೆಲವು ಭಕ್ತರು ಅವಶೇಷಗಳ ಕೆಳಗೆ ಸಿಲುಕಿಕೊಂಡರು. ಗಾಯಗೊಂಡವರಲ್ಲಿ ಐದು ಜನರ ಸ್ಥಿತಿ ಗಂಭೀರವಾಗಿದೆ ಎಂದು ವರದಿಯಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ತುರ್ತು ವರದಿಗೆ ಜಿಲ್ಲಾಧಿಕಾರಿ ಆದೇಶ: ಘಟನೆಯ ಕುರಿತು ತುರ್ತು ವರದಿಯನ್ನು ಸಲ್ಲಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. "ಆನೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ಯಾವುದೇ ಕಾನೂನು ಉಲ್ಲಂಘನೆಯಾಗಿದೆಯೇ ಎಂದು ತನಿಖೆಯು ಪರಿಶೀಲಿಸುತ್ತದೆ. ದೇವಾಲಯದ ಉತ್ಸವವನ್ನು ಅನುಮತಿಯೊಂದಿಗೆ ನಡೆಸಲಾಗಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಯಾವುದೇ ಕಾನೂನು ಉಲ್ಲಂಘನೆಗಳು ಸಂಭವಿಸಿವೆಯೇ ಎಂದು ನೋಡಲು ಅರಣ್ಯ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸುತ್ತಿದ್ದಾರೆ" ಎಂದು ಮಾಹಿತಿ ನೀಡಿದ್ದಾರೆ.
ಪ್ರತ್ಯಕ್ಷದರ್ಶಿ ಪ್ರತಿಕ್ರಿಯೆ: "ಈ ದುರಂತ ಘಟನೆ ಗುರುವಾರ ಸಂಜೆ ಸಂಭವಿಸಿದೆ. ಪಟಾಕಿ ಸಿಡಿಸಿದ ದೊಡ್ಡ ಸದ್ದು ಕೇಳಿಸಿದಾಗ ಆನೆಗಳು ಉದ್ದಟ ತೋರಲು ಆರಂಭಿಸಿದವು. ದೇವಾಲಯದ ಉತ್ಸವದಲ್ಲಿ ಭಾಗವಹಿಸುವವರು ಕಟ್ಟುವಾಯಲ್ ಮತ್ತು ಅನೆಲ್ ಪ್ರದೇಶಗಳಿಂದ ಆಗಮಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆನೆಗಳನ್ನು ನಿಯಂತ್ರಣಕ್ಕೆ ತರಲು ಗಂಟೆಗಟ್ಟಲೆ ಸಮಯ ಹಿಡಿಯಿತು" ಎಂದು ಪ್ರತ್ಯಕ್ಷದರ್ಶಿ ಜಯೇಶ್ ತಿಳಿಸಿದರು.
ಇದನ್ನೂ ಓದಿ: ಮದುವೆ ಮಂಟಪಕ್ಕೆ ಬಂದ 'ಅಪರೂಪದ ಅತಿಥಿ': ಕಾರಿನಲ್ಲೇ ಗಂಟೆಗಟ್ಟಲೆ ಕಾದ ವಧು-ವರ!