ಬೆಂಗಳೂರು: ಕಾನೂನುಬಾಹಿರವಾಗಿ ವಶಕ್ಕೆ ಪಡೆದಿದ್ದ ಆಟೋ ಹಿಂದಿರುಗಿಸಲು ಲಂಚಕ್ಕೆ ಬೇಡಿಕೆಯಿಟ್ಟಿದ್ದ ಆರೋಪದ ಮೇಲೆ ಸಂಜಯನಗರ ಪೊಲೀಸ್ ಠಾಣೆಯ ಎಎಸ್‌ಐ ವಿಜಯ್ ಕುಮಾರ್ ಹಾಗೂ ಲಂಚದ ಹಣ ಸ್ವೀಕರಿಸುತ್ತಿದ್ದ ಸೈಯ್ಯದ್ ರಿಜ್ವಾನ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಕೆ.ಜಿ.ಹಳ್ಳಿಯ ನಿವಾಸಿಯಾಗಿರುವ ಮೊಹಮ್ಮದ್ ಸುಜತ್ ಎಂಬವರಿಂದ ಜಪ್ತಿ ಮಾಡಿದ್ದ ಆಟೋ ಬಿಡುಗಡೆಗಾಗಿ ಎಎಸ್ಐ ವಿಜಯ್ ಕುಮಾರ್ 50 ಸಾವಿರ ರೂ. ಲಂಚ ನೀಡುವಂತೆ ಬೇಡಿಕೆಯಿಟ್ಟಿರುವ ಬಗ್ಗೆ ದೂರು ದಾಖಲಾಗಿತ್ತು. ಈ ಕುರಿತು ಮೊಹಮ್ಮದ್ ಸುಜತ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು.
ಟ್ರ್ಯಾಪ್ ಕಾರ್ಯಾಚರಣೆ ಕೈಗೊಂಡ ಲೋಕಾಯುಕ್ತ ಪೊಲೀಸರು, ಶನಿವಾರ ಎಎಸ್ಐ ವಿಜಯ್ ಕುಮಾರ್ ಹಾಗೂ ಅವರ ಪರವಾಗಿ 40 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದ ಸೈಯ್ಯದ್ ರಿಜ್ವಾನ್‌ನನ್ನು ಬಂಧಿಸಿದ್ದಾರೆ. ಇಬ್ಬರನ್ನೂ ವಿಚಾರಣೆ ನಡೆಸಲಾಗುತ್ತಿದೆ ಎಂದು ಲೋಕಾಯುಕ್ತ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಶಿಕ್ಷಕಿಯ ವರ್ಗಾವಣೆಗೆ ಲಂಚ: ಡಿಡಿಪಿಐ, ಕಚೇರಿ ಅಧೀಕ್ಷಕ ಲೋಕಾಯುಕ್ತ ಬಲೆಗೆ