ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಇಲ್ಲಿನ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಪಂದ್ಯದಲ್ಲಿ 6 ವಿಕೆಟ್ಗಳಿಂದ ಸೋತ ಭಾರತ ತಂಡ, ಸರಣಿಯನ್ನು 3-1 ಅಂತರದಲ್ಲಿ ಕೈಚೆಲ್ಲಿದೆ. ಇದರೊಂದಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ರೇಸ್ನಿಂದಲೂ ಟೀಂ ಇಂಡಿಯಾ ಹೊರಬಿತ್ತು.
ಆಸ್ಟ್ರೇಲಿಯಾ-ದ.ಆಫ್ರಿಕಾ ನಡುವೆ WTC ಫೈನಲ್: ಭರ್ಜರಿ 6 ವಿಕೆಟ್ ಗೆಲುವಿನೊಂದಿಗೆ ಕಾಂಗರೂ ಪಡೆ ಸತತ ಎರಡನೇ ಬಾರಿಗೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ (ಡಬ್ಲ್ಯುಟಿಸಿ) ಫೈನಲ್ ಪ್ರವೇಶಿಸಿದೆ. ಹಾಲಿ ಚಾಂಪಿಯನ್ ಆಗಿರುವ ಪ್ಯಾಟ್ ಕಮಿನ್ಸ್ ಪಡೆ ಫೈನಲ್ ಹಣಾಹಣಿಯಲ್ಲಿ ಈಗಾಗಲೇ ಅಂತಿಮ ಹಂತಕ್ಕೇರಿರುವ ದಕ್ಷಿಣ ಆಫ್ರಿಕಾ ವಿರುದ್ಧ ಪ್ರಶಸ್ತಿಗಾಗಿ ಸೆಣಸಲಿದೆ.
Ready to defend their World Test Championship mace 👊
— ICC (@ICC) January 5, 2025
Australia qualify for the #WTC25 Final at Lord's 🏏
More 👉 https://t.co/EanY9jFouE pic.twitter.com/xcpTrBOsB8
10 ವರ್ಷಗಳ ನಂತರ ಬಾರ್ಡರ್ ಗವಾಸ್ಕರ್ ಟ್ರೋಫಿ ಗೆದ್ದ ಆಸ್ಟ್ರೇಲಿಯಾ: ಆಸ್ಟ್ರೇಲಿಯಾ ತಂಡ 2014-15ರಲ್ಲಿ ತವರಿನಲ್ಲಿ ಗೆದ್ದ ಬಳಿಕ ಇದೇ ಮೊದಲ ಬಾರಿಗೆ ಬಾರ್ಡರ್-ಗವಾಸ್ಕರ್ ಟ್ರೋಫಿಯನ್ನು ತನ್ನದಾಗಿಸಿಕೊಂಡಿತು. 10 ವರ್ಷಗಳ ಹಿಂದೆ ಆಸೀಸ್ ನಾಲ್ಕು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಭಾರತವನ್ನು 2-0 ಅಂತರದಿಂದ ಸೋಲಿಸಿತ್ತು. ಅಂದಿನಿಂದ, ಆಸ್ಟ್ರೇಲಿಯಾ ಕೈಗೊಂಡ ಎರಡು ವಿದೇಶ ಪ್ರವಾಸಗಳು ಸೇರಿದಂತೆ ಎರಡು ರಾಷ್ಟ್ರಗಳ ನಡುವೆ ಆಡಿದ ಎಲ್ಲಾ ನಾಲ್ಕು ಸರಣಿಗಳಲ್ಲೂ ಭಾರತವೇ ಗೆದ್ದು ಬೀಗಿತ್ತು.
ಜಸ್ಪ್ರೀತ್ ಬುಮ್ರಾ ನಾಯಕತ್ವದಲ್ಲಿ ನಡೆದ ಪರ್ತ್ ಟೆಸ್ಟ್‌ನಲ್ಲಿ ಗೆಲುವಿನೊಂದಿಗೆ ಪ್ರತಿಷ್ಠಿತ ಸರಣಿಯನ್ನು ಆರಂಭಿಸಿದ್ದ ಭಾರತ ಬಳಿಕ ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಎರಡು ಪಂದ್ಯ ಸೋತು, ಒಂದು ಮ್ಯಾಚ್ ಡ್ರಾ ಮಾಡಿಕೊಂಡಿತ್ತು. ಸಿಡ್ನಿ ಟೆಸ್ಟ್‌ನಲ್ಲಿ ಮರಳಿ ನಾಯಕನಾದ ಬುಮ್ರಾ ಗಾಯಗೊಂಡು ಬೌಲಿಂಗ್ ಮಾಡದಿರುವುದು ಭಾರತಕ್ಕೆ ಹಿನ್ನಡೆಯಾಯಿತು. ಆರಂಭಿಕ ಸೋಲಿನ ಬಳಿಕ ಸರಣಿಯಲ್ಲಿ ಭರ್ಜರಿ ಕಮ್ಬ್ಯಾಕ್ ಮಾಡಿದ ಕಾಂಗರೂ ಪಡೆ, 3-1ರಿಂದ ಭಾರತವನ್ನು ಮಣಿಸಿತು.
After winning back the Border-Gavaskar Trophy, Australia now holds every bilateral Test prize for which their men's team competes.https://t.co/oa4w8lkNw2
— cricket.com.au (@cricketcomau) January 5, 2025
ಭಾರತದ ಬ್ಯಾಟರ್ಗಳ ವೈಫಲ್ಯ: ಭಾರಿ ಕುತೂಹಲ ಕೆರಳಿಸಿದ್ದ ಟೆಸ್ಟ್ ಸರಣಿಯಲ್ಲಿ ಭಾರತದ ಹಿರಿಯ ಆಟಗಾರರಾದ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಸೇರಿ ಪ್ರಮುಖ ಬ್ಯಾಟರ್‌ಗಳು ರನ್ ಗಳಿಸಲು ವಿಫಲರಾಗಿದ್ದು ಸರಣಿ ಕೈಬಿಡುವಂತಾಯಿತು. ಏಕಾಂಗಿ ಹೋರಾಟ ನಡೆಸಿದ ಜಸ್ಪ್ರೀತ್ ಬುಮ್ರಾ ಸರಣಿಯಲ್ಲಿ ಅತಿ ಹೆಚ್ಚು 32 ವಿಕೆಟ್‌ಗಳನ್ನು ಉರುಳಿಸಿದರು. ಜೊತೆಗೆ, ಯಶಸ್ವಿ ಜೈಸ್ವಾಲ್ ಮತ್ತು ನಿತೀಶ್ ಕುಮಾರ್ ರೆಡ್ಡಿ ಕ್ರಮವಾಗಿ 359 ಮತ್ತು 294 ರನ್ ಕೊಡುಗೆಗಳಿಂದ ಭಾರತದ ಪರ ಗರಿಷ್ಠ ರನ್ ಗಳಿಸಿ ಮಿಂಚಿದರು. ಆಸ್ಟ್ರೇಲಿಯಾ ಪರ ಟ್ರಾವಿಸ್ ಹೆಡ್ (410 ರನ್) ಪ್ರಮುಖ ರನ್ ಗಳಿಸಿದ ಆಟಗಾರನಾಗಿದ್ದು, ಆತಿಥೇಯರ ಪರ ಪ್ಯಾಟ್ ಕಮ್ಮಿನ್ಸ್ 20 ವಿಕೆಟ್ ಪಡೆದರು.
Scenes 🎉#AUSvIND pic.twitter.com/To7CsZ5iU8
— cricket.com.au (@cricketcomau) January 5, 2025
- ಬಾರ್ಡರ್-ಗವಾಸ್ಕರ್ ಟ್ರೋಫಿ ಕೊನೆಯ ಐದು ಫಲಿತಾಂಶಗಳು:
- 2016/17ರಲ್ಲಿ ತವರಿನಲ್ಲಿ ನಡೆದ ಸರಣಿಯಲ್ಲಿ ಭಾರತವು 2-1 ಅಂತರದಿಂದ ಆಸ್ಟ್ರೇಲಿಯಾವನ್ನು ಸೋಲಿಸಿತ್ತು.
- 2018/19ರಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತ ತಂಡ 2-1 ಅಂತರದಲ್ಲಿ ಕಾಂಗರೂ ಪಡೆಯನ್ನು ಮಣಿಸಿತ್ತು.
- 2020/21ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ಸರಣಿಯಲ್ಲಿ ಭಾರತವು ಆಸೀಸ್ ತಂಡವನ್ನು 2-1ರಿಂದ ಸೋಲಿಸಿತ್ತು.
- 2022/23ರಲ್ಲಿ ಭಾರತದಲ್ಲಿ ನಡೆದ ಸರಣಿಯಲ್ಲಿ ಆಸ್ಟ್ರೇಲಿಯಾವು 2-1ರಿಂದ ಮುಖಭಂಗ ಅನುಭವಿಸಿತ್ತು.
- ಇದೀಗ 2024-25ರಲ್ಲಿ ಆಸ್ಟ್ರೇಲಿಯಾವು ತವರಿನಲ್ಲಿ ಭಾರತವನ್ನು 3-1ರಿಂದ ಸೋಲಿಸಿದೆ.
ಪಂದ್ಯದ ಮೂರನೇ ದಿನದಾಟ ಹೀಗಿತ್ತು: ಭಾರತವು ಮೂರನೇ ದಿನ(ಭಾನುವಾರ) ಎರಡನೇ ಇನ್ನಿಂಗ್ಸ್‌ನಲ್ಲಿ 141/6 ಮೊತ್ತದೊಂದಿಗೆ ಆಟವನ್ನು ಪುನರಾರಂಭಿಸಿತು. ಆದರೆ ತ್ವರಿತಗತಿಯಲ್ಲಿ ಕೇವಲ 16 ರನ್‌ಗಳ ಅಂತರದಲ್ಲಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು 157 ರನ್‌ಗೆ ಆಲೌಟಾಯಿತು. ಹೀಗಾಗಿ, ಆಸೀಸ್ ಗೆಲುವಿಗೆ 162 ರನ್ ಗುರಿ ನಿಗದಿಯಾಯಿತು.
ಆದರೆ ಭಾರತ ತಂಡ ನಾಯಕ ಜಸ್ಪ್ರೀತ್ ಬುಮ್ರಾ ಅವರ ಅನುಪಸ್ಥಿತಿಯಲ್ಲಿ ಹೆಚ್ಚು ಪ್ರತಿರೋಧ ತೋರುವಲ್ಲಿ ವಿಫಲವಾಯಿತು. ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಸಿರಾಜ್ ತಲಾ 12 ಓವರ್‌ಗಳನ್ನು ಬೌಲಿಂಗ್ ಮಾಡಿದರೂ ಕೂಡ ಹೆಚ್ಚಿನ ಪ್ರಭಾವ ತೋರಲಿಲ್ಲ. ಮೂರು ವಿಕೆಟ್ ಪಡೆದ ಕೃಷ್ಣ, ಭಾರತಕ್ಕೆ ಅಲ್ಪ ಭರವಸೆ ಮೂಡಿಸಿದ್ದರು. ಆಸ್ಟ್ರೇಲಿಯಾ ಒಂದು ಹಂತದಲ್ಲಿ 58 ರನ್‌ಗೆ 3 ವಿಕೆಟ್ ಕಳೆದುಕೊಂಡಿತ್ತು. ಬಳಿಕ ಉಸ್ಮಾನ್ ಖವಾಜಾ 41 ರನ್ ಗಳಿಸಿ ಔಟಾದರೆ, ಟ್ರಾವಿಸ್ ಹೆಡ್ (34) ಮತ್ತು ಬ್ಯೂ ವೆಬ್‌ಸ್ಟರ್ (39) ಜೋಡಿಯ ಅಜೇಯ ಪಾಲುದಾರಿಕೆಯ ನೆರವಿನಿಂದ ಕಾಂಗರೂ ಪಡೆ ಸರಣಿ ಗೆದ್ದು ಸಂಭ್ರಮಿಸಿತು.
5⃣ matches.
— BCCI (@BCCI) January 5, 2025
3⃣2⃣ Wickets 🫡
Incredible spells ⚡️#TeamIndia Captain Jasprit Bumrah becomes the Player of the series 👏👏#AUSvIND | @Jaspritbumrah93 pic.twitter.com/vNzPsmf4pv
ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದ ಬುಮ್ರಾ: 32 ವಿಕೆಟ್ ಕಿತ್ತ ಜಸ್ಪ್ರೀತ್ ಬುಮ್ರಾ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು.
ಇದನ್ನೂ ಓದಿ: ಕ್ರೀಸ್ನಿಂದ ಹೊರ ಬರದಿದ್ದರೂ ಅತ್ಯಂತ ವಿಚಿತ್ರ ರೀತಿಯಲ್ಲಿ ರನೌಟಾದ ಬ್ಯಾಟರ್: ವಿಡಿಯೋ ವೈರಲ್