ಬೆಳಗಾವಿ:ಜಿಲ್ಲೆಯ ಸುತ್ತಮುತ್ತ ಧಾರಾಕಾರ ಮಳೆ ಆಗುತ್ತಿದ್ದು, ಬೆಳಗಾವಿ ತಾಲ್ಲೂಕಿನ ರಾಕಸಕೊಪ್ಪ ಜಲಾಶಯ ಭಾಗಶಃ ಭರ್ತಿಯಾಗಿದೆ. ಬೆಳಗಾವಿ ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ಈ ಜಲಾಶಯ, 0.60 ಟಿಎಂಸಿ ಸಾಮರ್ಥ್ಯ ಹೊಂದಿದ್ದು, ಒಟ್ಟು 2,475 ಅಡಿ ಎತ್ತರವಿದೆ. ಇಂದಿನ ನೀರಿನ ಮಟ್ಟ 2471.4 ಅಡಿ ಇದೆ. ಇನ್ನು ನಾಲ್ಕು ಅಡಿ ನೀರು ಬಂದರೆ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗುತ್ತದೆ.
ಇದೇ ರೀತಿ ಉತ್ತಮ ಮಳೆಯಾದರೆ ಕೇವಲ ಎರಡು ದಿನಗಳಲ್ಲಿ ಜಲಾಶಯ ಭರ್ತಿಯಾಗಲಿದ್ದು, ಬೆಳಗಾವಿ ನಗರಕ್ಕೆ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸದು ಎಂಬುದು ಜನರ ಅಭಿಪ್ರಾಯ. ಜಲಾಶಯ ಪೂರ್ತಿ ಭರ್ತಿಯಾದರೆ ಮಾರ್ಕಂಡೇಯ ನದಿಗೆ ನೀರು ಬಿಡಬೇಕಾಗುತ್ತದೆ. ಹೀಗೆ ನೀರು ಬಿಡುಗಡೆಯಾದರೆ ನದಿ ಪಾತ್ರದ ಜನರಿಗೂ ಪ್ರವಾಹ ಭೀತಿ ಎದುರಾಗಲಿದೆ.