ಹುಬ್ಬಳ್ಳಿ: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು 8 ಜನ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಸಾವಿಗೆ ಕಾರಣವಾದ ದುರಂತ ನಡೆದ ಕಟ್ಟಡ ತೆರವುಗೊಳಿಸುವ ಚಿಂತನೆ ಜೋರಾಗಿಯೇ ನಡೆದಿದೆ. ಅಗ್ನಿ ಅವಘಡ ಸಂಭವಿಸಿದ ಕಟ್ಟಡವನ್ನು ನೆಲಸಮ ಮಾಡುವ ಯೋಚನೆಯು ಸ್ಥಳೀಯ ಜನರಲ್ಲಿ ಹುಟ್ಟಿಕೊಂಡಿದ್ದು, ಈ ಕಟ್ಟಡ ನೆಲಸಮ ಮಾಡಿ ಸಮೀಪದಲ್ಲೇ ಸಮುದಾಯ ಭವನ ನಿರ್ಮಿಸಲು ನಿರ್ಧರಿಸಿದ್ದಾರೆ.
ಉಣಕಲ್ನ ಅಚ್ಚವ್ವನ ಕಾಲನಿಯಲ್ಲಿನ ಈಶ್ವರ ದೇವಸ್ಥಾನದ ಪಕ್ಕದಲ್ಲಿರುವ ಎರಡು ಮಹಡಿಯ ಕಟ್ಟಡ ಇದಾಗಿದ್ದು, ಚಿಕ್ಕದಾದ ಈ ಕಟ್ಟಡಕ್ಕೆ ಮೇಲ್ಮಹಡಿಗೆ ಹೋಗಲು ಸ್ಟೇರ್‌ಕೇಸ್ ಕೂಡ ಇಲ್ಲ. ನಿಚ್ಚಣಿಕೆ ಇಟ್ಟುಕೊಂಡು ಮೇಲಿನ ಕೊಠಡಿಗೆ ಹೋಗಬೇಕು. ಇದರಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟಂತಹ ಸಾಮಗ್ರಿಗಳನ್ನು ಇಡಲಾಗುತ್ತದೆ. ಕಳೆದ 15-20 ವರ್ಷಗಳ ಹಿಂದೆ ನಿರ್ಮಿಸಿರುವ ಈ ಕಟ್ಟಡದಲ್ಲೇ ಪ್ರತಿವರ್ಷ ಅಯ್ಯಪ್ಪ ಸನ್ನಿಧಾನವನ್ನು ಮಾಡಿಕೊಂಡು ಮಾಲಾಧಾರಿಗಳು ವ್ರತ ಆಚರಿಸುತ್ತಿದ್ದರು. ಅದರಂತೆ ಈ ಬಾರಿಯೂ ಇಲ್ಲಿ ಸನ್ನಿಧಾನ ಮಾಡಿಕೊಂಡು 14 ಜನರಿದ್ದರು. ಆದರೆ, ದುರಾದೃಷ್ಟವಶಾತ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಗಾಯಗೊಂಡ 9 ಜನರ ಪೈಕಿ 8 ಜನ ಮಾಲಾಧಾರಿಗಳು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದು, ವಾಣಿಜ್ಯ ನಗರಿಗೆ ಈ ಘಟನೆ ನುಂಗಲಾರದ ತುತ್ತು. ಘಟನೆಯಲ್ಲಿ ಓರ್ವ ಬಾಲಕ ಬದುಕುಳಿದಿದ್ದಾನೆ.
ಎರಡು ವರ್ಷದ ಹಿಂದೆ ಕಟ್ಟಡ ತೆರವಿಗೆ ಮನವಿ: ಸ್ಥಳೀಯ ನಿವಾಸಿ ಅಶೋಕ ಚಿಲ್ಲಣ್ಣವರ್ ಎಂಬುವರು ಈಟಿವಿ ಭಾರತದ ಜೊತೆ ಮಾತನಾಡಿ, ಅವಘಡ ಸಂಭವಿಸಿದ ಕಟ್ಟಡ ತೆರವಿಗೆ 28-10-2022ರಲ್ಲಿ ಮಹಾನಗರ ಪಾಲಿಕೆಗೆ ಮನವಿ ಮಾಡಿದ್ದೆವು. ಅನಧಿಕೃತ ಕಟ್ಟಡ ಇದಾಗಿದ್ದು, ಈ ಕಟ್ಟಡದಲ್ಲಿ ನಿತ್ಯ ಯುವಕರು ಕುಳಿತುಕೊಂಡು ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ನಮ್ಮ ಮನೆಯೂ ಪಕ್ಕದಲ್ಲಿರುವುದರಿಂದ ತೆರವುಗೊಳಿಸಬೇಕೆಂದು ಪಾಲಿಕೆಗೆ ಮನವಿ ಮಾಡಿದ್ದೆ. ಕಟ್ಟಡದಲ್ಲಿ ದೇವಸ್ಥಾನದ ಸಾಮಗ್ರಿಗಳು ಇರುವುದರಿಂದ ದೇವಸ್ಥಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಿದ ಬಳಿಕ ತೆರವು ಮಾಡುವುದಾಗಿ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಅವರು ಮಾತು ಕೊಟ್ಟಿದ್ದರು. ಅಷ್ಟರಲ್ಲೇ ಈ ಅವಘಡ ಸಂಭವಿಸಿದೆ. ದೇವಸ್ಥಾನ ಇರಲಿ. ಆದರೆ, ಈಗ ಐದು ಗುಂಟೆ ಜಾಗ ಗುರುತಿಸಿ ಸಮುದಾಯ ಭವನ ನಿರ್ಮಿಸಿಕೊಡಬೇಕು ಎಂದು ಅಶೋಕ ಚಿಲ್ಲಣ್ಣವರ್ ಹೇಳಿದ್ದಾರೆ.

ಕಟ್ಟಡ ನೆಲಸಮ ಮಾಡಿ ಸಮುದಾಯ ಭವನ ನಿರ್ಮಾಣ: ಸ್ಥಳೀಯರು ಹೇಳಿದಂತೆ ದುರ್ಘಟನೆ ಸಂಭವಿಸಿದ ಕಟ್ಟಡವನ್ನು ತೆರವುಗೊಳಿಸುವುದಾಗಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಈಟಿವಿ ಭಾರತಕ್ಕೆ ಸ್ಪಷ್ಟಪಡಿಸಿದ್ದಾರೆ.

ಈ ಕಟ್ಟಡ ತೆರವಿಗೆ 2 ವರ್ಷದ ಹಿಂದೆಯೇ ಅರ್ಜಿ ಬಂದಿತ್ತು. ಆದರೆ, ಆಗ ಕೆಲವರು ಸಹಕರಿಸಲಿಲ್ಲ. ದೇವಸ್ಥಾನಕ್ಕೆ ಸಂಬಂಧಿಸಿದ ಸಾಮಗ್ರಿಗಳನ್ನಿಡಲು ಬೇಕಾಗಿದ್ದರಿಂದ ತೆರವು ಮಾಡಬಾರದೆಂದು, ಸಮುದಾಯ ಭವನ ಕಟ್ಟಿದ ಮೇಲೆ ತೆರವು ಮಾಡಬೇಕೆಂದು ಮನವಿ ಮಾಡಿದ್ದರು. ಅದರ ನಡುವೆ ಈ ಅವಘಡ ಸಂಭವಿಸಿದೆ. ಈಗ ನೂರಕ್ಕೆ ನೂರರಷ್ಟು ತೆರವು ಮಾಡುತ್ತೇವೆ. ಒಂದು ತಿಂಗಳ ಒಳಗಾಗಿ ಹೊಸ ಸಮುದಾಯ ಭವನದ ಪೂಜೆ ಮಾಡುವವರಿದ್ದೇವೆ. ಸ್ಥಳೀಯರ ಒಪ್ಪಿಗೆ ಪಡೆದು ತೆರವುಗೊಳಿಸಲಾಗುವುದು. ಈಗಾಗಲೇ ಸಮುದಾಯ ಭವನದ ಸ್ಥಳ ಗುರುತಿಸಿಸಲಾಗಿದೆ. ಪಾಲಿಕೆಯ 5 ಗುಂಟೆ ಜಾಗದಲ್ಲಿ 35 ಲಕ್ಷ ರೂ. ಪಾಲಿಕೆಯ ಅನುದಾನದಲ್ಲಿ ನಿರ್ಮಿಸಲಾಗುವುದು ಎಂದರು.

ಇದನ್ನೂ ಓದಿ: ಹುಬ್ಬಳ್ಳಿ: ಮನಕಲಕುವಂತಿದೆ ಮೃತ ಅಯ್ಯಪ್ಪಸ್ವಾಮಿ ಮಾಲಾಧಾರಿಗಳ ಕುಟುಂಬಸ್ಥರ ಕಥೆ - HUBBALLI GAS EXPLOSION