ನಾಗರ್ ಕರ್ನೂಲ್(ತೆಲಂಗಾಣ): ತೆಲಂಗಾಣದ ನಾಗರ ಕರ್ನೂಲ್ನ ಶ್ರೀಶೈಲಂ ಎಡದಂಡೆ ಕಾಲುವೆ (ಎಸ್ಎಲ್ಬಿಸಿ) ಸುರಂಗದ ಒಂದು ಭಾಗವು ಶನಿವಾರ (ಫೆಬ್ರವರಿ 22) ಬೆಳಿಗ್ಗೆ ಕುಸಿದ ನಂತರ, 48 ಗಂಟೆಗಳಿಗಿಂತಲೂ ಹೆಚ್ಚು ಕಾಲದಿಂದ ಸುರಂಗದ ಮತ್ತೊಂದು ಭಾಗದಲ್ಲಿ ಸಿಕ್ಕಿಬಿದ್ದಿರುವ ಎಂಟು ಜನರನ್ನು ರಕ್ಷಿಸುವ ಕಾರ್ಯಾಚರಣೆ ಮುಂದುವರೆದಿದೆ.
ಸುರಂಗದಲ್ಲಿ ಸಿಕ್ಕಿಬಿದ್ದವರ ವಿವರ: ಸುರಂಗದಲ್ಲಿ ಸಿಕ್ಕಿಬಿದ್ದವರನ್ನು ಉತ್ತರ ಪ್ರದೇಶದ ಮನೋಜ್ ಕುಮಾರ್ ಮತ್ತು ಶ್ರೀನಿವಾಸ್, ಜಮ್ಮು ಮತ್ತು ಕಾಶ್ಮೀರದ ಸನ್ನಿ ಸಿಂಗ್, ಪಂಜಾಬ್‌ನ ಗುರಪ್ರೀತ್ ಸಿಂಗ್ ಮತ್ತು ಜಾರ್ಖಂಡ್ ಮೂಲದ ಸಂದೀಪ್ ಸಾಹು, ಜಕ್ತಾಜಸ್, ಸಂತೋಷ್ ಸಾಹು ಮತ್ತು ಅನುಜ್ ಸಾಹು ಎಂದು ಗುರುತಿಸಲಾಗಿದೆ.

ಈ ಎಂಟು ಮಂದಿಯಲ್ಲಿ ಅಮೆರಿಕದ ಟನೆಲಿಂಗ್ ಕಂಪನಿ ದಿ ರಾಬಿನ್ಸ್‌ನ ಇಬ್ಬರು ಭಾರತೀಯ ಎಂಜಿನಿಯರ್‌ಗಳೂ ಸೇರಿದ್ದಾರೆ. ಉಳಿದವರು ಜೆಪಿ ಅಸೋಸಿಯೇಟ್ಸ್ ಉದ್ಯೋಗಿಗಳಾಗಿದ್ದಾರೆ.
RAT ಗಣಿಗಾರರ ತಂಡ ಸ್ಥಳಕ್ಕೆ: 2023ರಲ್ಲಿ ಉತ್ತರಾಖಂಡದ ಸಿಲ್ಕ್ಯಾರಾ ಬೆಂಡ್-ಬಾರ್ ಕೋಟ್ ಸುರಂಗದಲ್ಲಿ ಸಿಕ್ಕಿಬಿದ್ದ ಕಟ್ಟಡ ಕಾರ್ಮಿಕರನ್ನು ರಕ್ಷಿಸಿದ ರ್ಯಾಟ್ ಗಣಿಗಾರರ ತಂಡವನ್ನು ಎಸ್ಎಲ್ಬಿಸಿ ಸುರಂಗದಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಕರೆಸಲಾಗಿದೆ ಎಂದು ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ತೆಲಂಗಾಣ ಸಚಿವ ಜುಪಲ್ಲಿ ಕೃಷ್ಣ ರಾವ್ ಸೋಮವಾರ ತಿಳಿಸಿದ್ದಾರೆ. ಅವಘಡ ನಡೆದ ಸ್ಥಳವು ಕೆಸರು ಮತ್ತು ಅವಶೇಷಗಳಿಂದ ತುಂಬಿರುವುದರಿಂದ ಸಿಕ್ಕಿಬಿದ್ದ ವ್ಯಕ್ತಿಗಳನ್ನು ರಕ್ಷಿಸಲು ಕನಿಷ್ಠ ಮೂರರಿಂದ ನಾಲ್ಕು ದಿನ ಬೇಕಾಗುತ್ತವೆ ಎಂದು ಸಚಿವರು ಹೇಳಿದ್ದಾರೆ.

ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕಡಿಮೆ: "ಪ್ರಾಮಾಣಿಕವಾಗಿ ಹೇಳುವುದಾದರೆ, ಅವರು ಬದುಕುಳಿಯುವ ಸಾಧ್ಯತೆಗಳು ಬಹಳ, ಬಹಳ ಕಡಿಮೆ. ನಾನು ಅಪಘಾತದ ಸ್ಥಳದಿಂದ ಕೇವಲ 50 ಮೀಟರ್ ದೂರದಲ್ಲಿ ಕೊನೆಯವರೆಗೆ ಹೋದೆ. ಸುರಂಗದ 9 ಮೀಟರ್ ವ್ಯಾಸದಲ್ಲಿ ಸುಮಾರು 30 ಅಡಿಗಳಲ್ಲಿ 25 ಅಡಿಗಳವರೆಗೆ ಮಣ್ಣು ತುಂಬಿಕೊಂಡಿದೆ" ಎಂದು ಅವರು ಹೇಳಿದರು.
ಸುರಂಗ ಕುಸಿದ ನಂತರ ಮತ್ತು ಉಕ್ಕಿ ಹರಿಯುವ ನೀರಿನಿಂದಾಗಿ ನೂರಾರು ಟನ್ ತೂಕದ ಟನಲ್ ಬೋರಿಂಗ್ ಯಂತ್ರ (ಟಿಬಿಎಂ) ಸುಮಾರು 200 ಮೀಟರ್‌ನಷ್ಟು ದೂರ ಸರಿದಿದೆ.

"ಒಳಗಡೆ ಸಿಕ್ಕಿಬಿದ್ದವರು ಟಿಬಿಎಂ ಯಂತ್ರದ ಕೆಳಭಾಗದಲ್ಲಿದ್ದಾರೆ ಎಂದು ಭಾವಿಸಿದರೂ, ಅದು ಮೇಲ್ಭಾಗದಲ್ಲಿ ಹಾಗೇ ಇದ್ದರೂ, ಅವರಿಗೆ ಗಾಳಿ ತಲುಪುವುದು ಹೇಗೆ?" ಎಂದು ಸಚಿವರು ಕೇಳಿದರು.
"ಏನೇ ಪ್ರಯತ್ನ ಮಾಡಿದರೂ ಎಲ್ಲಾ ಮಣ್ಣನ್ನು ತೆಗೆದು ಹಾಕಲು ಕನಿಷ್ಠ 3 ರಿಂದ 4 ದಿನ ಬೇಕಾಗಬಹುದು" ಎಂದು ನೀರಾವರಿ ಸಚಿವ ಉತ್ತಮ್ ಕುಮಾರ್ ರೆಡ್ಡಿ ಅವರೊಂದಿಗೆ ಕಾರ್ಯಾಚರಣೆಯ ಮೇಲ್ವಿಚಾರಣೆ ವಹಿಸಿದ್ದ ರಾವ್ ಹೇಳಿದರು.

ಭಾರೀ ಸವಾಲಿನ ರಕ್ಷಣಾ ಕಾರ್ಯಾಚರಣೆ- ಮುಖ್ಯಾಂಶಗಳು:
- ಅವಘಡ ನಡೆದ ಸ್ಥಳ ಕೆಸರು, ಅವಶೇಷಗಳಿಂದ ತುಂಬಿದೆ.
- ಸಿಕ್ಕಿಬಿದ್ದ ವ್ಯಕ್ತಿಗಳನ್ನು ರಕ್ಷಿಸಲು ಕನಿಷ್ಠ 3ರಿಂದ 4 ದಿನ ಬೇಕು- ಸಚಿವರ ಹೇಳಿಕೆ
- ಸುರಂಗದ 9 ಮೀಟರ್ ವ್ಯಾಸದಲ್ಲಿದೆ. ಸುಮಾರು 30 ಅಡಿಗಳಲ್ಲಿ 25 ಅಡಿಗಳವರೆಗೆ ಮಣ್ಣು ತುಂಬಿಕೊಂಡಿದೆ. ಹೀಗಾಗಿ ಕಾರ್ಮಿಕರು ಬದುಕುಳಿದಿರುವ ಸಾಧ್ಯತೆ ಕಡಿಮೆ.
- ಸುರಂಗ ಕುಸಿದ ನಂತರ ಮತ್ತು ಉಕ್ಕಿ ಹರಿಯುವ ನೀರಿನಿಂದಾಗಿ ನೂರಾರು ಟನ್ ತೂಕದ ಟನಲ್ ಬೋರಿಂಗ್ ಯಂತ್ರ ಸುಮಾರು 200 ಮೀಟರ್‌ನಷ್ಟು ದೂರ ಸರಿದಿದೆ.
ಭಾರತೀಯ ಸೇನೆಯು ತನ್ನ ಬೈಸನ್ ಡಿವಿಷನ್ ಎಂಜಿನಿಯರ್ ಟಾಸ್ಕ್ ಫೋರ್ಸ್ (ಇಟಿಎಫ್) ಅನ್ನು ಸಿಕಂದರಾಬಾದ್ನಿಂದ ಕರೆಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿಯೋಜಿಸಿದೆ. ಎನ್ಡಿಆರ್ಎಫ್, ಎಸ್ಡಿಆರ್ಎಫ್ ಮತ್ತು ಸುರಂಗ ನಿರ್ಮಾಣ ಗುತ್ತಿಗೆದಾರರ ಸಮನ್ವಯದೊಂದಿಗೆ ಸೇನೆಯು ಹೆಚ್ಚಿನ ಸಾಮರ್ಥ್ಯದ ಪಂಪಿಂಗ್ ಸೆಟ್ಗಳು, ಪೈಪ್‌ಗಳು, ಜೆಸಿಬಿಗಳು ಮತ್ತು ಬುಲ್ಡೋಜರ್ಗಳೊಂದಿಗೆ ದಣಿವರಿಯದೆ ಕಾರ್ಯನಿರ್ವಹಿಸುತ್ತಿದೆ.

ಸುರಂಗದಲ್ಲಿ ಸಿಲುಕಿರುವವರನ್ನು ಹೊರತೆಗೆಯಲು ಕನಿಷ್ಠ ಎರಡು ದಿನಗಳು ಬೇಕಾಗಬಹುದು ಎಂದು ಸಿಂಗರೇಣಿ ಪಾರುಗಾಣಿಕಾ ತಂಡದ ಜನರಲ್ ಮ್ಯಾನೇಜರ್ ಶ್ರೀನಿವಾಸ್ ರೆಡ್ಡಿ ಭಾನುವಾರ ಈಟಿವಿ ಭಾರತ್‌ಗೆ ತಿಳಿಸಿದರು.
"ಸಿಂಗರೇಣಿಯಿಂದ ಬಂದ 20 ಸದಸ್ಯರನ್ನು ಮೂರು ತಂಡಗಳಾಗಿ ವಿಂಗಡಿಸಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಲಾಗಿದೆ. ಶನಿವಾರ ರಾತ್ರಿ, ನಾನು ನನ್ನ ಅಧಿಕಾರಿಯೊಂದಿಗೆ ಒಳಗೆ ಹೋದೆ. ನೀರು ಮತ್ತು ಮಣ್ಣು ಇದ್ದುದರಿಂದ ನಾವು ಏಣಿಯನ್ನು ಬಳಸಿ ಬೆಲ್ಟ್ ಹತ್ತಿ ಒಳಗೆ ಹೋಗಿದ್ದೆವು. ಅಲ್ಲಿ ಪೈಪ್‌ಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ. ರಕ್ಷಣಾ ಕಾರ್ಯಕರ್ತರು ಉಪಕರಣಗಳನ್ನು ತೆಗೆದುಕೊಂಡು ಹೋಗಲು ನಾವು ಸಣ್ಣ ದೋಣಿಗಳನ್ನು ಸಹ ಸಿದ್ಧಪಡಿಸಿದ್ದೇವೆ. ಹಾನಿ ತೀವ್ರವಾಗಿದೆ. ಈಗಲೇ ಏನನ್ನೂ ಹೇಳಲು ಸಾಧ್ಯವಿಲ್ಲ" ಎಂದು ರೆಡ್ಡಿ ಹೇಳಿದರು.

ಸುರಂಗ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ 450 ಕಾರ್ಮಿಕರಲ್ಲಿ ಒಬ್ಬರಾದ ಚೆನ್ನೈ ನಿವಾಸಿ ವೇಲ್ ಮಲೈ ಅಂದಿನ ದುರಂತ ಘಟನೆಯನ್ನು ನೆನಪಿಸಿಕೊಂಡರು.
"ಮಣ್ಣು, ನೀರು ಮತ್ತು ರಾಡಿ ಇದ್ದಕ್ಕಿದ್ದಂತೆ ಮೇಲಿನಿಂದ ಬಿದ್ದಿತು. ನಂತರ ಕೆಳಗೆ ಬಿದ್ದ ನಾವು ಪೈಪ್‌ಗಳು ಮತ್ತು ಕಬ್ಬಿಣದ ರಾಡ್ಗಳು ಚುಚ್ಚಿ ಗಾಯಗೊಂಡೆವು. ಇನ್ನೇನು ನಾವು ಸತ್ತೇ ಹೋದೆವು ಎಂದು ಭಾವಿಸಿದ್ದೆವು. ಆದರೆ ಅದೃಷ್ಟವಶಾತ್ ಸುರಕ್ಷಿತ ಸ್ಥಳ ತಲುಪಲು ಯಶಸ್ವಿಯಾದೆವು" ಎಂದು ಅವರು ಹೇಳಿದರು.
ಇದನ್ನೂ ಓದಿ: ಎಸ್ಎಲ್ಬಿಸಿ ಯೋಜನೆಯ ಟನಲ್ ಮೇಲ್ಚಾವಣಿ ಕುಸಿತ; ಆರು ಕಾರ್ಮಿಕರು ಸಿಲುಕಿರುವ ಶಂಕೆ - SLBC TUNNEL COLLAPSES