ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯೆ ಬೆಂಗಳೂರು:''ಮಂಗಳೂರು, ಬೆಂಗಳೂರು ಬಾಂಬ್ ಸ್ಫೋಟಕ್ಕೆ ಹೋಲಿಕೆ ಮಾಡಿ ಸಿಎಂ, ಡಿಸಿಎಂ ದ್ವಂದ್ವ ಹೇಳಿಕೆ ನೀಡಿಲ್ಲ. ಅವರಿಗೆ ಆ ಸಂದರ್ಭದಲ್ಲಿ ಸಿಕ್ಕ ಮಾಹಿತಿ ಆಧಾರದ ಮೇಲೆ ಹೇಳಿದ್ದಾರೆ. ಇದನ್ನು ದ್ವಂದ್ವ ಹೇಳಿಕೆ ಎಂದು ನಾನು ಒಪ್ಪುವುದಿಲ್ಲ'' ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ರಾಷ್ಟ್ರೀಯ ಪಲ್ಸ್ ಪೋಲಿಯೋ ಲಸಿಕೆ ಅಭಿಯಾನಕ್ಕೆ ಶೇಷಾದ್ರಿಪುರದ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಇಂದು ಚಾಲನೆ ನೀಡಿದ ಬಳಿಕ ಮಾಧ್ಯಮದವರ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ''ಬಾಂಬ್ ಬ್ಲಾಸ್ಟ್ ಪ್ರಕರಣದ ಬಗ್ಗೆ ಸಂಪೂರ್ಣ ತನಿಖೆಯಾದ ನಂತರವೇ ಸತ್ಯ ತಿಳಿಯಲಿದೆ. ಈಗ ಯಾರೂ ಕೂಡಾ ಖಂಡಿತವಾಗಿಯೂ ಏನನ್ನೂ ಹೇಳಲು ಸಾಧ್ಯವಿಲ್ಲ. ಇದು ನಮ್ಮ ಭದ್ರತೆಯ ವಿಚಾರ, ಹೊಂದಾಣಿಕೆಯ ಪ್ರಶ್ನೆಯೇ ಇಲ್ಲ'' ಎಂದರು.
ಪಾಕಿಸ್ತಾನ ಪರ ಘೋಷಣೆ ಪ್ರಕರಣ:ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ ಆರೋಪ ಸಂಬಂಧ ಎಫ್ಎಸ್ಎಲ್ ವರದಿ ಮುಚ್ಚಿ ಹಾಕುವ ವದಂತಿ ವಿಚಾರವಾಗಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ''ವರದಿ ಮುಚ್ಚಿ ಹಾಕುವ ಯಾವುದೇ ಪ್ರಮೇಯ ನಮಗಿಲ್ಲ. ಯಾರೇ ತಪ್ಪು ಮಾಡಿದರೂ ಅವರ ವಿರುದ್ಧ ಕ್ರಮ ಆಗಬೇಕು. ಆದರೆ, ವರದಿ ಬಂದಿದೆಯೋ, ಇಲ್ಲವೋ ಎಂಬುದು ನನಗಂತೂ ಗೊತ್ತಿಲ್ಲ'' ಎಂದು ಹೇಳಿದರು.
ಜಾತಿಗಣತಿ ವಿಚಾರ:ಜಾತಿಗಣತಿ ವಿಚಾರವಾಗಿ ಪ್ರತಿಕ್ರಿಯಿಸಿ, ''ಇನ್ನೂ ಕೂಡ ನಮ್ಮ ದೇಶದಲ್ಲಿ 2011ರ ಸಮೀಕ್ಷೆಯ ಆಧಾರದ ಮೇಲೆ ಸಂಪನ್ಮೂಲಗಳ ಹಂಚಿಕೆ ನಡೆಯುತ್ತಿದೆ. 2015ರ ಇಸವಿಯಲ್ಲಿ ಮತ್ತೆ ಜಾತಿಗಣತಿ ನಡೆದಿದೆ. ಆಗ ಜಾತಿಗಣತಿಗೆ ಬಹಳ ಒತ್ತನ್ನು ನಮ್ಮ ಸರ್ಕಾರ ನೀಡಿತ್ತು. ಪ್ರತಿ ಮನೆ ಮನೆಗೂ ಹೋಗಿ ದೊಡ್ಡ ಪಟ್ಟಿ ಸಿದ್ದಪಡಿಸಿತ್ತು. ಯಾವ ಸಮೀಕ್ಷೆಯೂ ಕೂಡ 100ಕ್ಕೆ 100 ಸರಿ ಇರುತ್ತದೆ ಎಂದು ಹೇಳಲಾಗದು. ಆದರೆ, ಬಹಳ ಪ್ರಾಮಾಣಿಕವಾಗಿ ಕೆಲಸವನ್ನು ಪೂರೈಸಲಾಗಿದೆ. ಅದನ್ನು ಯಾರೂ ಕೂಡ ಆ ಸಂದರ್ಭದಲ್ಲಿ ವಿರೋಧ ಮಾಡಿರಲಿಲ್ಲ'' ಎಂದರು.
''ನಮ್ಮ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳು ಮುಂದೆ ಹೇಗಿರಬೇಕು ಎಂದು ಕಾರ್ಯಕ್ರಮಗಳ ಯೋಜನೆಯನ್ನು ಮಾಡಬೇಕಾಗಿದೆ. ಸಮೀಕ್ಷೆಯಿಂದ ಸಹಾಯಕವಾಗುತ್ತದೆ ಎನ್ನುವ ದೂರಾಲೋಚನೆಯಿಂದ ಜಾತಿ ಗಣತಿ ಮಾಡಿದ್ದೆವು. ವರದಿ ಬರುವ ಮೊದಲೇ ನಮ್ಮ ಸರ್ಕಾರದ ಅವಧಿ ಮುಗಿದಿತ್ತು. ನಂತರ ಬಿಜೆಪಿ ಸರ್ಕಾರ ಅದಕ್ಕೆ ಆಸಕ್ತಿ ತೋರಿತೋ, ಇಲ್ಲವೋ ಗೊತ್ತಿಲ್ಲ'' ಎಂದು ತಿಳಿಸಿದರು.
''180 ಕೋಟಿ ರೂಪಾಯಿ ಖರ್ಚು ಮಾಡಿ ವರದಿ ಸಿದ್ಧಪಡಿಸಲಾಗಿದೆ. ಸರ್ಕಾರಕ್ಕೆ ಜಯಪ್ರಕಾಶ್ ಹೆಗಡೆ ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ. ಅವರು ಜವಾಬ್ದಾರಿಯುತ ವ್ಯಕ್ತಿಯಾಗಿದ್ದಾರೆ. ಕ್ಷುಲ್ಲಕ ರಾಜಕಾರಣ ಮಾಡುವವರು ಅವರಲ್ಲ. ಒಪ್ಪುವುದು ಬಿಡುವುದು, ಲೋಪ ದೋಷಗಳನ್ನು ತಿದ್ದುವುದು ನಂತರದ ಕೆಲಸವಾಗಿದೆ'' ಎಂದು ದಿನೇಶ್ ಗುಂಡೂರಾವ್ ಅಭಿಪ್ರಾಯಪಟ್ಟರು.
''ವರದಿಯನ್ನು ಕೂಲಂಕಶವಾಗಿ ನೋಡದೇ ಮಾತನಾಡುವುದು ಸರಿಯಲ್ಲ. ಹಾಗೆ ಮಾಡಿದರೆ ಸಮಾಜದಲ್ಲಿ ಘರ್ಷಣೆಗೆ ಕಾರಣವಾಗುತ್ತದೆ. ಪ್ರಜಾಪ್ರಭುತ್ವದಲ್ಲಿ ನಮ್ಮ ಶಾಸಕರು ಸೇರಿದಂತೆ ಎಲ್ಲರೂ ಅವರವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಈ ವರದಿಯನ್ನು ಸಂಪೂರ್ಣವಾಗಿ ನೋಡಿದ ಮೇಲೆ ವಿರೋಧ ಪಕ್ಷದವರೇ ಜಾರಿಗೆ ಒತ್ತಾಯಿಸುವ ಸಾಧ್ಯತೆಯೂ ಇದೆ'' ಎಂದು ನುಡಿದರು.
ಪಲ್ಸ್ ಪೋಲಿಯೋ ಅಭಿಯಾನ:ಪಲ್ಸ್ ಪೋಲಿಯೋ ಅಭಿಯಾನದ ಕುರಿತು ಮಾತನಾಡಿ, ''12 ವರ್ಷದಿಂದ ನಮ್ಮ ದೇಶದಲ್ಲಿ ಒಂದೇ ಒಂದು ಪೋಲಿಯೋ ಪ್ರಕರಣ ವರದಿಯಾಗಿಲ್ಲ. ಇದನ್ನು ಹೀಗೆಯೇ ಮುಂದುವರೆಸುವುದು ನಮ್ಮ ಜವಾಬ್ದಾರಿ. ಈ ವರ್ಷ ಇಡೀ ದೇಶಾದ್ಯಂತ 62 ಲಕ್ಷ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿಯನ್ನು ಹೊಂದಲಾಗಿದೆ. ಬೆಂಗಳೂರಿನಲ್ಲಿ 11 ಲಕ್ಷ ಮಕ್ಕಳಿಗೆ ಪೋಲಿಯೋ ಹಾಕಿಸುವ ಕೆಲಸ ಮಾಡಲಾಗುತ್ತಿದೆ. ಮೂರು ದಿನಗಳಲ್ಲಿ ಟಾರ್ಗೆಟ್ ಪೂರೈಸಲಾಗುತ್ತದೆ. ಅಂಗನವಾಡಿ ಕಾರ್ಯಕರ್ತರು, ವೈದ್ಯರು ಈ ಕೆಲಸಕ್ಕೆ ಶ್ರಮಿಸುತ್ತಿದ್ದಾರೆ. 5 ವರ್ಷದವರೆಗಿನ ಮಕ್ಕಳಿಗೆ ಪೋಲಿಯೋ ವ್ಯಾಕ್ಸಿನ್ ಕಡ್ಡಾಯವಾಗಿದೆ" ಎಂದು ಹೇಳಿದರು.
ಇದನ್ನೂ ಓದಿ:ಬೆಂಗಳೂರು ಕೆಫೆ ಸ್ಫೋಟ: ತನಿಖೆಗೆ ಸವಾಲಾದ ಆರೋಪಿ ಬಳಸಿಕೊಂಡ ಸಮಯ