ಬೆಂಗಳೂರು: ಆಟೋ ಟಚ್ ಆಗಿದಕ್ಕೆ ಚಾಲಕನ ಮೇಲೆ ಹಲ್ಲೆ ಮಾಡಿ ಆತನ ಸಾವಿಗೆ ಕಾರಣರಾದ ನಾಲ್ವರು ಆರೋಪಿಗಳನ್ನು ಆರ್.ಟಿ.ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಟೋ ಚಾಲಕ ಸಲ್ಮಾನ್ (28) ಎಂಬಾತನ ಸಾವಿಗೆ ಕಾರಣರಾದ ಸೈಯ್ಯದ್ ತಬ್ರೇಜ್, ಸೈಯ್ಯದ್ ಫರ್ವೇಜ್, ಸಾಧಿಕ್ ಹಾಗೂ ತೌಸೀಫ್ ಬಂಧಿತ ಆರೋಪಿಗಳು. ಬುಧವಾರ ಆರ್.ಟಿ.ನಗರ ವ್ಯಾಪ್ತಿಯ ರಹಮತ್ ನಗರದಲ್ಲಿ ಘಟನೆ ನಡೆದಿತ್ತು.
ಮೃತ ಸಲ್ಮಾನ್ ಬುಧವಾರ ಎಂದಿನಂತೆ ಡ್ಯೂಟಿಗೆ ತೆರಳಿದ್ದಾಗ ಆರೋಪಿ ಫರ್ವೇಜ್ ತಂದೆಯ ವಾಹನಕ್ಕೆ ಆಟೋ ಟಚ್ ಆಗಿತ್ತು. ಆ ಸಂದರ್ಭದಲ್ಲಿ ಫರ್ವೇಜ್ ತಂದೆ ಹಾಗೂ ಸಲ್ಮಾನ್ ನಡುವೆ ಮಾತಿನ ಚಕಮಕಿ ಉಂಟಾಗಿತ್ತು. ಆಗ ಫರ್ವೇಜ್ ತಂದೆ ಮಗನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸಿಕೊಂಡಿದ್ದರು. ಸ್ಥಳಕ್ಕೆ ಬಂದಿದ್ದ ಫರ್ವೇಜ್ ಅಂಡ್ ಟೀಂ ಸಲ್ಮಾನ್ ಮೇಲೆ ಹಲ್ಲೆ ಮಾಡಿತ್ತು.
ಇದನ್ನೂ ಓದಿ: ಬೆಂಗಳೂರು: ಅತ್ಯಾಚಾರ ಮಾಡಿ ಮಹಿಳೆಯ ಹತ್ಯೆ, ನಿರ್ಜನ ಪ್ರದೇಶದಲ್ಲಿ ಶವ ಪತ್ತೆ
ಹಲ್ಲೆಗೊಳಗಾಗಿದ್ದ ಸಲ್ಮಾನ್ ಈ ಬಗ್ಗೆ ಆರ್.ಟಿ.ನಗರ ಠಾಣೆಗೆ ತೆರಳಿ ದೂರು ನೀಡಿದ್ದ. ಸಲ್ಮಾನ್ ದೂರು ನೀಡಿರುವುದು ತಿಳಿಯುತ್ತಿದ್ದಂತೆ ಪುನಃ ಸಲ್ಮಾನ್‌ನನ್ನು ಹುಡುಕಿಕೊಂಡು ಬಂದಿದ್ದ ಆರೋಪಿಗಳು, ಗಲಾಟೆ ಮಾಡಿ ಆತನ ಮೇಲೆ ಹಲ್ಲೆ ಮಾಡಿದ್ದಾರೆ. ಇದರಿಂದ ಕುಸಿದು ಬಿದ್ದ ಸಲ್ಮಾನ್ ಅಸ್ವಸ್ಥನಾಗಿದ್ದ. ವಿಷಯ ತಿಳಿದ ಕುಟುಂಬದವರು ಸಲ್ಮಾನ್‌ನನ್ನು ಆಸ್ಪತ್ರೆಗೆ ದಾಖಲಿಸಲು ಯತ್ನಿಸಿದ್ದರಾದರೂ, ಆತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರಕರಣ ದಾಖಲಿಸಿಕೊಂಡ ಆರ್.ಟಿ.ನಗರ ಠಾಣೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿರುವುದಾಗಿ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಅಡ್ರೆಸ್ ಕೇಳುವ ನೆಪದಲ್ಲಿ ಯುವತಿಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಆರೋಪಿಯ ಬಂಧನ