ಕರ್ನಾಟಕ

karnataka

ETV Bharat / state

ಶಕ್ತಿ ಯೋಜನೆಯಡಿ ರಸ್ತೆ ಸಾರಿಗೆ ನಿಗಮಗಳಿಗೆ ₹6,543 ಕೋಟಿ ಬಿಡುಗಡೆ - SHAKTI SCHEME GRANT

ರಾಜ್ಯ ಸರ್ಕಾರವು ಶಕ್ತಿ ಯೋಜನೆಯಡಿ ರಸ್ತೆ ಸಾರಿಗೆ ನಿಗಮಗಳಿಗೆ ಬಿಡುಗಡೆ ಮಾಡಿರುವ ಹಣದ ಕುರಿತಂತೆ ಸಚಿವರು ಸದನಕ್ಕೆ ಮಾಹಿತಿ ನೀಡಿದರು.

ksrtc
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : 5 hours ago

ಬೆಳಗಾವಿ:ರಾಜ್ಯ ಸರ್ಕಾರದಿಂದ ನವೆಂಬರ್ 2024ರ ವರೆಗೆ ನಾಲ್ಕು ರಸ್ತೆ ಸಾರಿಗೆ ನಿಗಮಗಳಿಗೆ ಶಕ್ತಿ ಯೋಜನೆಯಡಿ 6,543 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿಧಾನಸಭೆಯಲ್ಲಿ ಮಾಹಿತಿ ನೀಡಿದರು.

ಬೆಳಗಾವಿ ಸುವರ್ಣಸೌಧದಲ್ಲಿ ಜರುಗುತ್ತಿರುವ ಚಳಿಗಾಲ ಅಧಿವೇಶನದಲ್ಲಿ, ಸೋಮವಾರ ವಿಧಾನಸಭೆಯ ಪ್ರಶ್ನೋತ್ತರ ಕಲಾಪದ ವೇಳೆ, ಸಾರಿಗೆ ಮತ್ತು ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರ ಪರವಾಗಿ ಸಚಿವ ಸಂತೋಷ್ ಲಾಡ್ ಉತ್ತರಿಸಿದರು. ''ಶಕ್ತಿ ಯೋಜನೆ ಜಾರಿಯಾದಾಗಿನಿಂದ ನಾಲ್ಕು ನಿಗಮದ ಬಸ್‌ಗಳಲ್ಲಿ ಪ್ರತಿನಿತ್ಯ 1.16 ಕೋಟಿ ಜನರು ಪ್ರಯಾಣ ಮಾಡುತ್ತಿದ್ದಾರೆ. ಸರ್ಕಾರ ಶಕ್ತಿಯೋಜನೆಯಡಿ 8,237 ಕೋಟಿ ರೂ. ಅನುದಾನವನ್ನು ಮಂಜೂರು ಮಾಡಿದೆ. ಇದರಲ್ಲಿ 6,543 ಕೋಟಿ ರೂ.ಗಳನ್ನು ಈಗಾಗಲೇ ನಿಗಮಗಳಿಗೆ ಪಾವತಿ ಮಾಡಿದ್ದು, ಉಳಿದ 1,694 ಕೋಟಿ ರೂ. ಹಣವನ್ನು ಹಂತ - ಹಂತವಾಗಿ ನಿಗಮಗಳಿಗೆ ನೀಡಲಾಗುವುದು'' ಎಂದರು.

ಸಾರಿಗೆ ನಿಗಮದ ನೌಕರರೊಂದಿಗೆ ಸಂಧಾನ:''ಸಾರಿಗೆ ನಿಗಮಗಳ ನೌಕರರ ವೇತನವನ್ನು ಕೈಗಾರಿಕಾ ಒಪ್ಪಂದಗಳ ಅನ್ವಯ, ಪ್ರತಿ 4 ವರ್ಷಗಳಿಗೊಮ್ಮೆ ಪರಿಷ್ಕರಿಸಬೇಕು. ಕೋವಿಡ್ ಕಾರಣದಿಂದ ಕಳೆದ ಬಾರಿ 2020ಕ್ಕೆ ಪರಿಷ್ಕರಿಸಬೇಕಾದ ವೇತನವನ್ನು 2023ರಲ್ಲಿ ಪರಿಷ್ಕರಿಸಲಾಯಿತು. ಡಿಸೆಂಬರ್​ 31ರ ಒಳಗಾಗಿ ಖುದ್ದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ನಿಗಮದ ನೌಕರರೊಂದಿಗೆ ಸಂಧಾನ ಒಪ್ಪಂದ ಮಾಡಿಕೊಂಡಿದ್ದಾರೆ. ಯಾವುದೇ ಕಾರಣಕ್ಕೂ ನೌಕರರು ಮುಷ್ಕರ ಹೂಡದಂತೆ ಕ್ರಮ ಕೈಗೊಳ್ಳಲಾಗುವುದು'' ಎಂದು ತಿಳಿಸಿದರು.

4,304 ಬಸ್ ಖರೀದಿ:''5,000 ಬಸ್ ಖರೀದಿಸುವುದಾಗಿ ಸರ್ಕಾರ ಹೇಳಿತ್ತು. ಅದರಂತೆ ಇದುವರೆಗೂ 4,304 ಬಸ್‌ಗಳನ್ನು ಖರೀದಿಸಲಾಗಿದೆ. ಉಳಿದ ಬಸ್‌ಗಳನ್ನು ಸಹ ಶೀಘ್ರ ಖರೀದಿಸಿ ಅಗತ್ಯ ಇರುವ ಕಡೆ ನೀಡಲಾಗುವುದು'' ಎಂದರು.

ಇದನ್ನೂ ಓದಿ:ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ ಮುನಿರತ್ನ ಜಾತಿನಿಂದನೆ ಪ್ರಕರಣ: ಆಡಳಿತ-ಪ್ರತಿಪಕ್ಷಗಳ ನಡುವೆ ವಾಕ್ಸಮರ

ನೌಕರರ ವೇತನ ಪರಿಷ್ಕರಣೆಗೆ ಒತ್ತಾಯ:ಈ ಸಂದರ್ಭದಲ್ಲಿ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ''ಸರ್ಕಾರ ಕೂಡಲೇ ಸಾರಿಗೆ ನೌಕರರ ವೇತನ ಪರಿಷ್ಕರಣೆ ಮಾಡಬೇಕು. ನೌಕರರ ಜನವರಿಯಿಂದ ಮುಷ್ಕರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಈ ಕುರಿತು ಮನೆಗೆ ಬಂದು ಮನವಿಯನ್ನು ಸಹ ನೀಡಿದ್ದಾರೆ'' ಎಂದು ಹೇಳಿದರು.

ಶಾಸಕ ಡಾ. ಸಿ.ಎನ್.ಅಶ್ವತ್ಥ ನಾರಾಯಣ ಮಾತನಾಡಿ, ''ಸರ್ಕಾರ ಸಾರಿಗೆ ನಿಗಮಗಳಿಗೆ ನೀಡಬೇಕಾದ ಬಾಕಿ ಹಣ ನೀಡಿ ವೇತನ ಪರಿಷ್ಕರಣೆಗೆ ಅನುವು ಮಾಡಿಕೊಡಬೇಕು'' ಎಂದು ಕೋರಿದರು. ಈ ಮನವಿಗೆ ಹಲವು ಶಾಸಕರು ಧ್ವನಿಗೂಡಿಸಿದರು.

ಇದನ್ನೂ ಓದಿ:ಅಂತರ್ಜಲ ತಿದ್ದುಪಡಿ, ರೋಪ್ ವೇಸ್ ಸೇರಿ ವಿಧಾನಸಭೆಯಲ್ಲಿ 8 ಮಸೂದೆಗಳು ಅಂಗೀಕಾರ

ABOUT THE AUTHOR

...view details