ರಾಯಚೂರು: ಲಾರಿ ಪಲ್ಟಿಯಾಗಿ ರಸ್ತೆ ಬದಿಯಲ್ಲಿ ನಿಂತವರ ಮೇಲೆ ಚೀಲಗಳು ಬಿದ್ದು, ಮೂವರು ಸ್ಥಳದಲ್ಲಿಯೇ ಮೃತಪಟ್ಟ ದಾರುಣ ಘಟನೆ ರಾಯಚೂರಿನ ಸಿಂಧನೂರು ಪಟ್ಟಣದಲ್ಲಿ ಸೋಮವಾರ ರಾತ್ರಿ ಸಂಭವಿಸಿದೆ. ಸಿಂಧನೂರಿನ ಪಿಡಬ್ಲ್ಯೂಡಿ ಕ್ಯಾಂಪ್ ಸಮೀಪ ಡಾಲರ್ಸ್ ಕಾಲೋನಿ ಕ್ರಾಸ್ ಬಳಿ ದುರ್ಘಟನೆ ಜರುಗಿದೆ.
ಜವಳಗೇರಾ ನೀರಾವರಿ ಇಲಾಖೆ ಉಪವಿಭಾಗದ ಕಿರಿಯ ಇಂಜಿನಿಯರ್ಗಳಾದ ಶಿವರಾಜ ರಾಂಪುರ (28), ಮಲ್ಲಿಕಾರ್ಜುನ ಸರ್ಜಾಪುರ (29) ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕಂಪ್ಯೂಟರ್ ಆಪರೇಟರ್ ಮಹೆಬೂಬ್ (30) ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಶಿವರಾಜ್ ಹಾಗೂ ಮಲ್ಲಿಕಾರ್ಜುನ ಲಿಂಗಸುಗೂರು ತಾಲೂಕಿನ ಮಹೆಬೂಬ್ ಸಿಂಧನೂರು ಪಟ್ಟಣದವರು ಎಂದು ತಿಳಿದು ಬಂದಿದೆ.
ಜವಳಗೇರಾದಲ್ಲಿ ಕಚೇರಿ ಕೆಲಸ ಮುಗಿಸಿಕೊಂಡು ಸಿಂಧನೂರಿಗೆ ಬಂದು, ಪಿಡಬ್ಲ್ಯೂಡಿ ಕ್ಯಾಂಪ್ನ ಡಾಲರ್ಸ್ ಕಾಲೋನಿಗೆ ತೆರಳುವ ಮುಖ್ಯರಸ್ತೆಯ ಬಳಿ ಬೈಕ್ ನಿಲ್ಲಿಸಿಕೊಂಡು ಮೂವರು ಮಾತನಾಡುತ್ತಾ ನಿಂತಿದ್ದರು. ಇದೇ ವೇಳೆ, ರಾಯಚೂರಿನಿಂದ ಸಿಂಧನೂರು ಕಡೆ ಬರುತ್ತಿದ್ದ ಭತ್ತದ ಹೊಟ್ಟಿನ ಚೀಲಗಳನ್ನು ತುಂಬಿಕೊಂಡು ವೇಗವಾಗಿ ಬಂದ ಲಾರಿ ಪಲ್ಟಿಯಾಗಿದೆ. ಘಟನೆಯಲ್ಲಿ ರಸ್ತೆ ಬದಿ ನಿಂತವರ ಮೇಲೆಯೇ ಚೀಲಗಳು ಉರುಳಿ ಬಿದ್ದಿದ್ದು, ಅದರಡಿ ಸಿಲುಕಿ ಮೂವರೂ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಗಂಗಾವತಿ: ಭೀಕರ ಅಪಘಾತ, ಲಾರಿ ಡಿಕ್ಕಿಯಾಗಿ ದಂಪತಿ ಸ್ಥಳದಲ್ಲೇ ಸಾವು
ಘಟನೆಯಲ್ಲಿ ಎರಡು ಬೈಕ್ಗಳು ಸಹ ನಜ್ಜುಗುಜ್ಜಾಗಿವೆ. ಚೀಲಗಳಡಿ ಸಿಲುಕಿದ್ದ ಮೃತದೇಹಗಳನ್ನು ಜೆಸಿಬಿ ವಾಹನದ ಸಹಾಯದಿಂದ ಹೊರತೆಗೆದು ಮರಣೋತ್ತರ ಪರೀಕ್ಷೆಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲದೇ, ಲಾರಿ ಚಾಲಕ ಹಾಗೂ ಕ್ಲಿನರ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಬಳ್ಳಾರಿಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಘಟನೆ ಮಾಹಿತಿ ತಿಳಿದ ನಗರ ಸಂಚಾರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ವಿಜಯನಗರ: ಕಾರು ಮತ್ತು ಬೈಕ್ ಅಪಘಾತ: ಬೈಕ್ ಸವಾರ ಸಾವು, ಮೂವರಿಗೆ ಗಾಯ