ಬೆಳಗಾವಿ: ನಿನ್ನೆ ಅಧಿವೇಶನದ ಕಲಾಪದಲ್ಲಿ ಬಹುತೇಕ ಸಚಿವರು ಇಡೀ ದಿನ ಪಾಲ್ಗೊಂಡಿದ್ದರು. ಅಧಿವೇಶನ ಮುಗಿಯುತ್ತಿದ್ದಂತೆ ತಮ್ಮ ಕೊಠಡಿಗೆ ತೆರಳಿ ಕೆಲವರು ವಿಶ್ರಾಂತಿ ಪಡೆಯುತ್ತಿದ್ದರೆ, ಮತ್ತೊಂದಿಷ್ಟು ಮಂದಿ ಕಾರ್ಯಕರ್ತರ ಜೊತೆ ಹರಟೆ ಹೊಡೆಯುತ್ತಿದ್ದರು. ಆದರೆ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತ್ರ ಕುಂದಾನಗರಿ ಗಲ್ಲಿಯಲ್ಲಿ ಯಾವುದೇ ಭದ್ರತೆ ಇಲ್ಲದೇ ರನ್ನಿಂಗ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಹೌದು, ಜಾಕೇಟ್-ಟ್ರ್ಯಾಕ್ ಪ್ಯಾಂಟ್-ಶೂ ಹಾಕಿಕೊಂಡು ತಮ್ಮ ಪಾಡಿಗೆ ತಾವೊಬ್ಬರೆ ರನ್ನಿಂಗ್ ಮಾಡುತ್ತಿದ್ದ ಸಚಿವ ಸಂತೋಷ್ ಲಾಡ್ ಅವರನ್ನು ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ಈಟಿವಿ ಭಾರತ ಪ್ರತಿನಿಧಿ ಮಾತನಾಡಿಸಿದಾಗ, "ರನ್ನಿಂಗ್ ಇದೇ ಮೊದಲ ಸಾರಿ ಅಲ್ಲ. ಪ್ರತಿದಿನ ರನ್ನಿಂಗ್ ಮಾಡುತ್ತೇನೆ. ಕಳೆದ ಬಾರಿ ಅಧಿವೇಶನಕ್ಕೆ ಬಂದಾಗಲೂ ಇದೇ ರಾಣಿ ಚನ್ನಮ್ಮ ವೃತ್ತದಿಂದ ಸಂಗೊಳ್ಳಿ ರಾಯಣ್ಣ ವೃತ್ತ, ಎಸ್ಪಿ ಆಫೀಸ್ ರಸ್ತೆ, ಶ್ರೀಕೃಷ್ಣದೇವರಾಯ ವೃತ್ತದ ರಸ್ತೆಯಲ್ಲಿ ಓಡಿದ್ದೆ. ಈಗಲೂ ಓಡುತ್ತಿದ್ದೇನೆ. ಕಳೆದ ಮೂರು ತಿಂಗಳಲ್ಲಿ ಐದಾರು ಕೆ.ಜಿ ತೂಕ ಹೆಚ್ಚಾಗಿದೆ. ಹಾಗಾಗಿ, ತೂಕ ಇಳಿಸಲು ರನ್ನಿಂಗ್ ಜಾಸ್ತಿ ಮಾಡಬೇಕೆಂದು 5 ಕಿ.ಮೀ. ಓಡುತ್ತಿದ್ದೇನೆ. ತುಂಬಾ ಖುಷಿ ಆಗುತ್ತದೆ" ಎಂದರು.
"ಇನ್ನು, ಮೊದಲಿನಿಂದಲೂ ಈ ಅಭ್ಯಾಸವಿದೆ. ನಾನು ಓರ್ವ ಕ್ರೀಡಾಪಟು. ರನ್ನಿಂಗ್, ಜಿಮ್ಮಿಂಗ್ ನನ್ನ ಹವ್ಯಾಸ. ಬಹುತೇಕ ಸಚಿವರು, ಶಾಸಕರು ಬೆಳಗ್ಗೆ ರನ್ನಿಂಗ್ ಮಾಡಿರುತ್ತಾರೆ. ನನಗೆ ಬೆಳಗ್ಗೆ ಸಾಧ್ಯವಾಗಿರಲಿಲ್ಲ. ಹಾಗಾಗಿ, ಈಗ ಮಾಡುತ್ತಿದ್ದೇನೆ. 2 ತಿಂಗಳಲ್ಲಿ ತೂಕ ಕಮ್ಮಿ ಆಗಬೇಕು. ಆ ನಿಟ್ಟಿನಲ್ಲಿ ಓಡುತ್ತಿದ್ದೇನೆ. ವ್ಯಾಯಾಮ ಮಾಡಿದರೆ ನನಗೆ ನಿದ್ದೆ ಬರುತ್ತದೆ" ಎನ್ನುತ್ತಾರೆ ಸಂತೋಷ ಲಾಡ್.
ಅಧಿವೇಶನದಲ್ಲಿ ವಿರೋಧ ಪಕ್ಷವನ್ನು ಯಾವ ರೀತಿ ಕಟ್ಟಿ ಹಾಕುತ್ತಿದ್ದೀರಿ ಎಂಬ ಪ್ರಶ್ನೆಗೆ, "ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಾರನ್ನೂ ಕಟ್ಟಿ ಹಾಕುವ ಪ್ರಶ್ನೆ ಬರಲ್ಲ. ಸದನ ಎಂದರೆ ಅಡಿಟ್ ಇದ್ದ ಹಾಗೆ. ಆಗಿರುವ ಕೆಲಸಗಳಿಗೆ ಉತ್ತರಿಸುವುದು ಸರ್ಕಾರದ ಜವಾಬ್ದಾರಿ ಮತ್ತು ಪ್ರಜಾಪ್ರಭುತ್ವದ ನಿಯಮ. ಆ ಕೆಲಸವನ್ನು ನಾವು ಅಚ್ಚುಕಟ್ಟಾಗಿ ಮಾಡುತ್ತಿದ್ದೇವೆ" ಎಂದು ಹೇಳಿದರು.
"ಬೆಳಗಾವಿ ಅಧಿವೇಶನ ತುಂಬಾ ಚೆನ್ನಾಗಿ ನಡೆಯುತ್ತಿದೆ. ಸ್ಪೀಕರ್ ಯು.ಟಿ. ಖಾದರ್ ಅವರು ಸೋಮವಾರ ಉತ್ತರ ಕರ್ನಾಟಕದ ಬಗ್ಗೆ ಮಾತನಾಡಲು ಅವಕಾಶ ಕೊಟ್ಟಿದ್ದರು. ಮಂಗಳವಾರವೂ (ಇಂದು) ಚರ್ಚಿಸಲು ಸಮಯ ನೀಡಲಿದ್ದಾರೆ. ಅದಾದ ಬಳಿಕ ಮುಖ್ಯಮಂತ್ರಿಗಳು ಸಮರ್ಪಕ ಉತ್ತರ ನೀಡಲಿದ್ದಾರೆ" ಎಂದು ತಿಳಿಸಿದರು.
ಇನ್ನು, ರನ್ನಿಂಗ್ ಮಾಡ್ತಿದ್ದ ಸಚಿವರನ್ನು ಕಂಡು ಅಭಿಮಾನಿಗಳು ಮತ್ತು ಕೈ ಕಾರ್ಯಕರ್ತರು ಅವರ ಜೊತೆಗೆ ಫೋಟೋ ತೆಗೆಸಿಕೊಳ್ಳುತ್ತಿದ್ದರು. "ಎಲ್ಲ ಜನಪ್ರತಿನಿಧಿಗಳಿಗೂ ಈ ರೀತಿ ಅಭಿಮಾನಿಗಳು ಇರುತ್ತಾರೆ. ಜನರು ಒಳ್ಳೆಯ ಪ್ರೀತಿ ತೋರಿಸುತ್ತಿರುವುದು ನೋಡಿ ತುಂಬಾ ಖುಷಿ ಆಗುತ್ತದೆ. ನಾನು ನಿಜವಾಗಲೂ ಅದೃಷ್ಟವಂತ. ಈ ಮಟ್ಟಕ್ಕೆ ಬೆಳೆದಿದ್ದೇನೆ. ಸಿಕ್ಕಿರುವ ಒಳ್ಳೆಯ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಸಾರ್ವಜನಿಕ ಜೀವನದಲ್ಲಿ ಸಾಧ್ಯವಾದಷ್ಟು ಜನರಿಗೆ ಅನುಕೂಲ ಮಾಡಿಕೊಡಬೇಕು. ಆ ಉದ್ದೇಶದಿಂದ ರಾಜಕೀಯದಲ್ಲಿ ಇದ್ದೇನೆ. ಮುಂದೆಯೂ ಅದನ್ನು ಮುಂದುವರಿಸುತ್ತೇನೆ" ಎಂದರು.
"ಏನಾದರೂ ಸಾಧಿಸಬೇಕು ಎಂದರೆ ಶಿಸ್ತು ಬೇಕೇ ಬೇಕು. ನಾನು ಸಾರಾಯಿ ಕುಡಿಯಲ್ಲ. ಸಿಗರೇಟ್ ಸೇದಲ್ಲ. ನನಗೆ ಯಾವುದೇ ದುಶ್ಚಟ ಇಲ್ಲ. ಹಾಗಾಗಿ, ಇಂದಿನ ಯುವಕರು ಕೂಡ ದುಶ್ಚಟಗಳಿಂದ ದೂರವಿದ್ದರೆ ಅವರಿಗೆ ಒಳ್ಳೆಯದು. ಯಾಕೆಂದರೆ ಯುವಕರು ದೇಶದ ಆಸ್ತಿ. ಆ ನಿಟ್ಟಿನಲ್ಲಿ ಯುವಕರು ಸದೃಢ ಆರೋಗ್ಯ ಹೊಂದಿದ್ದರೆ, ರಾಜ್ಯ-ರಾಷ್ಟ್ರ ಕೂಡ ಸದೃಢವಾಗುತ್ತದೆ. ಆದ್ದರಿಂದ ಎಲ್ಲರೂ ಅಂಥ ಶಿಸ್ತಿನ ಜೀವನ ಅಳವಡಿಸಿಕೊಳ್ಳಿ" ಎಂದು ಕಿವಿಮಾತು ಹೇಳಿದರು.
ಇದನ್ನೂ ಓದಿ: ಉತ್ತರ ಕರ್ನಾಟಕ ಸಮಸ್ಯೆ ಬಗ್ಗೆ ಚರ್ಚೆ ಮಾಡಲು ಬಿಜೆಪಿಗೆ ಇಂಟ್ರಸ್ಟೇ ಇಲ್ಲ: ಡಿ.ಕೆ. ಶಿವಕುಮಾರ್ ಆರೋಪ