ಲಕ್ನೋ(ಉತ್ತರ ಪ್ರದೇಶ): ಮಹಾ ಕುಂಭಮೇಳದ ಅಂಗವಾಗಿ ಉತ್ತರ ಪ್ರದೇಶದ 75 ಜೈಲುಗಳಲ್ಲಿರುವ ಕೈದಿಗಳಿಗೆ ಪವಿತ್ರ ಗಂಗಾ ನದಿಯ ನೀರಿನಲ್ಲಿ ಸ್ನಾನ ಮಾಡುವ ಸೌಭಾಗ್ಯ ಒದಗಿಸಲು ಅಲ್ಲಿನ ಸರ್ಕಾರ ಮುಂದಾಗಿದೆ. ಇದಕ್ಕಾಗಿ ಪ್ರಯಾಗ್ರಾಜ್ನಿಂದ ಗಂಗಾ ನದಿಯ ನೀರನ್ನು ಈ ಎಲ್ಲಾ ಜೈಲುಗಳಿಗೆ ಪೂರೈಕೆ ಮಾಡಲು ಸಿದ್ಧತೆಗಳು ನಡೆಯುತ್ತಿವೆ.
ಫೆಬ್ರವರಿ 21ರಂದು ಬೆಳಗ್ಗೆ 9.30ರಿಂದ 10ರವರೆಗೆ ಎಲ್ಲಾ ಜೈಲುಗಳಲ್ಲಿ ಈ ಕಾರ್ಯಕ್ರಮ ನಡೆಯಲಿದೆ ಎಂದು ಯುಪಿ ಜೈಲು ಸಚಿವ ದಾರಾ ಸಿಂಗ್ ಚೌಹಾಣ್ ಅವರ ಕಚೇರಿಯ ಪ್ರಕಟಣೆ ತಿಳಿಸಿದೆ. ರಾಜ್ಯದ ಏಳು ಕೇಂದ್ರ ಕಾರಾಗೃಹಗಳು ಸೇರಿದಂತೆ 75 ಜೈಲುಗಳಲ್ಲಿ 90,000ಕ್ಕೂ ಹೆಚ್ಚು ಕೈದಿಗಳನ್ನು ಪ್ರಸ್ತುತ ಇರಿಸಲಾಗಿದೆ ಎಂದು ಕಾರಾಗೃಹ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಪವಿತ್ರ ಕುಂಭ ಸ್ನಾನಕ್ಕಾಗಿ ಜೈಲು ಸಚಿವರ ಮೇಲ್ವಿಚಾರಣೆಯಲ್ಲಿ ವ್ಯವಸ್ಥೆಗಳನ್ನು ಮಾಡಲಾಗುತ್ತಿದೆ ಎಂದು ಕಾರಾಗೃಹಗಳ ಮಹಾನಿರ್ದೇಶಕ (ಡಿಜಿ) ಪಿ.ವಿ.ರಾಮಶಾಸ್ತ್ರಿ ತಿಳಿಸಿದ್ದಾರೆ. ಸಂಗಮದಿಂದ ಪವಿತ್ರ ನೀರನ್ನು ಎಲ್ಲಾ ಜೈಲುಗಳಿಗೆ ತರಲಾಗುವುದು ಮತ್ತು ಅದನ್ನು ಸಾಮಾನ್ಯ ನೀರಿನೊಂದಿಗೆ ಬೆರೆಸಿ ಜೈಲಿನ ಆವರಣದಲ್ಲಿರುವ ಸಣ್ಣ ಟ್ಯಾಂಕ್ಗಳಲ್ಲಿ ಸಂಗ್ರಹಿಸಲಾಗುವುದು. ಎಲ್ಲಾ ಕೈದಿಗಳು ಪ್ರಾರ್ಥನೆಯ ನಂತರ ಈ ನೀರಿನಲ್ಲಿ ಸ್ನಾನ ಮಾಡಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
"ಸಚಿವ ಚೌಹಾಣ್ ಅವರು ಹಿರಿಯ ಜೈಲು ಅಧಿಕಾರಿಗಳೊಂದಿಗೆ ಫೆಬ್ರವರಿ 21ರಂದು ಲಕ್ನೋ ಜೈಲಿನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ. ಪ್ರಯಾಗ್‌ರಾಜ್‌ನ ಸಂಗಮದ ಸ್ಥಳದಿಂದ ಪವಿತ್ರ ನೀರನ್ನು ತರಲು ಜೈಲು ಆಡಳಿತವು ಜೈಲು ಸಿಬ್ಬಂದಿ ಅರುಣ್ ಮೌರ್ಯ ಅವರನ್ನು ಕಳುಹಿಸಿದೆ" ಎಂದು ಗೋರಖ್‌ಪುರ ಜಿಲ್ಲಾ ಬಂದೀಖಾನೆಯ ಜೈಲರ್ ಎ.ಕೆ.ಕುಶ್ವಾಹ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಪ್ರಯಾಗ್‌ರಾಜ್‌ನ ನೈನಿ ಕೇಂದ್ರ ಕಾರಾಗೃಹದ ಹಿರಿಯ ಅಧೀಕ್ಷಕ ರಂಗ್ ಬಹದ್ದೂರ್, "ಫೆಬ್ರವರಿ 21ರಂದು ಕೈದಿಗಳಿಗೆ ಇದೇ ರೀತಿಯ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. ಪ್ರಯಾಗ್ ರಾಜ್ ಜಿಲ್ಲಾ ಕಾರಾಗೃಹದ ಹಿರಿಯ ಅಧೀಕ್ಷಕಿ ಅಮಿತಾ ದುಬೆ ಮಾತನಾಡಿ, ಸುಮಾರು 1,350 ಕೈದಿಗಳು ಪವಿತ್ರ ಸ್ನಾನದ ಬಗ್ಗೆ ಉತ್ಸುಕರಾಗಿದ್ದಾರೆ" ಎಂದರು.
ಏತನ್ಮಧ್ಯೆ, ಫೆಬ್ರವರಿ 17ರಂದು ಉನ್ನಾವೊ ಜೈಲು ತನ್ನ ಕೈದಿಗಳಿಗಾಗಿ ಇದೇ ರೀತಿಯ ಕಾರ್ಯಕ್ರಮವನ್ನು ಆಯೋಜಿಸಿತ್ತು. ಉನ್ನಾವೊ ಜೈಲಿನ ಅಧೀಕ್ಷಕ ಪಂಕಜ್ ಕುಮಾರ್ ಸಿಂಗ್ ಮಾತನಾಡಿ, "ಕೈದಿಗಳಿಗೆ ಪವಿತ್ರ ನೀರಿನಿಂದ ಸ್ನಾನ ಮಾಡಲು ಅವಕಾಶ ನೀಡುವ ಯೋಜನೆ ಕೆಲ ಸಮಯದಿಂದ ಪರಿಗಣನೆಯಲ್ಲಿದೆ. ಸದ್ಯ ಜೈಲು ಆಡಳಿತವು ಮತ್ತೊಂದು 'ಸ್ನಾನ್' ವ್ಯವಸ್ಥೆ ಮಾಡುತ್ತಿರುವುದರಿಂದ ಫೆಬ್ರವರಿ 21ರಂದು ಕೈದಿಗಳಿಗೆ ಪವಿತ್ರ ಸ್ನಾನದ ಎರಡನೇ ಅವಕಾಶ ಸಿಗಲಿದೆ" ಎಂದು ಹೇಳಿದರು.
ಇದನ್ನೂ ಓದಿ: ಕರ್ನಾಟಕದ ಬಜೆಟ್ ಗಾತ್ರ ಮೀರಿಸಿದ ಮಹಾ ಕುಂಭಮೇಳದ ಆರ್ಥಿಕ ವಹಿವಾಟು!